ಸರ್ವೋಚ್ಚ ನ್ಯಾಯಾಲಯ ಮಧ್ಯಸ್ಥಿಕೆ ಹಾಗೂ ಸಂಧಾನ ಯೋಜನೆ ಸಮಿತಿ (ಎಂಸಿಪಿಸಿ) ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಬೆಂಗಳೂರು ಮಧ್ಯಸ್ಥಿತಾ ಕೇಂದ್ರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಬಾಗಲಕೋಟೆ ಇವುಗಳ ಆದೇಶದ ಮೇರೆಗೆ ರಾಷ್ಟ್ರಕ್ಕಾಗಿ ಮಧ್ಯಸ್ಥಿಕೆ-2 ಅಭಿಯಾನ ಕಾರ್ಯಕ್ರಮ ಜನವರಿ 2ರಿಂದ ಆರಂಭಿಸಲಾಗಿದೆ ಎಂದು 3ನೇ ಹೆಚ್ಚುವರಿ ಬಾಗಲಕೋಟೆ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಗುರುರಾಜ ಶಿರೋಳ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮುಧೋಳ
ಸರ್ವೋಚ್ಚ ನ್ಯಾಯಾಲಯ ಮಧ್ಯಸ್ಥಿಕೆ ಹಾಗೂ ಸಂಧಾನ ಯೋಜನೆ ಸಮಿತಿ (ಎಂ.ಸಿ.ಪಿ.ಸಿ) ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಬೆಂಗಳೂರು ಮಧ್ಯಸ್ಥಿತಾ ಕೇಂದ್ರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಬಾಗಲಕೋಟೆ ಇವುಗಳ ಆದೇಶದ ಮೇರೆಗೆ ರಾಷ್ಟ್ರಕ್ಕಾಗಿ ಮಧ್ಯಸ್ಥಿಕೆ-2 ಅಭಿಯಾನ ಕಾರ್ಯಕ್ರಮ ಜನವರಿ 2ರಿಂದ ಆರಂಭಿಸಲಾಗಿದ್ದು, ಮಾ.31ರವರೆಗೆ (90 ದಿನಗಳು) ಹಮ್ಮಿಕೊಳ್ಳಲಾಗಿದೆ ಎಂದು 3ನೇ ಹೆಚ್ಚುವರಿ ಬಾಗಲಕೋಟೆ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಗುರುರಾಜ ಶಿರೋಳ ತಿಳಿಸಿದ್ದಾರೆ.ನಗರದ ಕೋರ್ಟ್ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಭಿನ್ನಾಭಿಪ್ರಾಯ ಪ್ರಕರಣದ ಪಕ್ಷಗಾರರಿಗೆ ಪರಸ್ಪರ ಮಾತನಾಡಿಕೊಂಡು ಭಿನ್ನಾಭಿಪ್ರಾಯವನ್ನು ಮಧ್ಯಸ್ಥಿಕೆದಾರರ ಮಾರ್ಗದರ್ಶನದಲ್ಲಿ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಮಧ್ಯಸ್ಥಿಕೆ ಎಂದು ಕರೆಯುತ್ತಾರೆಂದು ತಿಳಿಸಿದರು.ಈ ಮಧ್ಯಸ್ಥಿಕೆಯಿಂದಾಗುವ ಅತೀ ಮುಖ್ಯ ಲಾಭಗಳೆಂದರೆ ನಿಮ್ಮ ಕೂನೂನು ಸಮಸ್ಯೆಗಳಿಗೆ ಸೂಕ್ತ ಎನಿಸುವ ಪರಿಹಾರ ಕಂಡುಕೊಳ್ಳಬಹುದು, ಮಧ್ಯಸ್ಥಿಕೆಯಲ್ಲಿ ಪ್ರಕರಣ ರಾಜಿಯಾಗದೇ ಹೋದಲ್ಲಿ ಮತ್ತೆ ಪ್ರಕರಣವನ್ನು ನ್ಯಾಯಾಲಯದಲ್ಲಿ ಮುಂದುವರಿಸಹುದು. ಇದರಿಂದ ಸಮಯ ಉಳಿತಾಯವಾಗುವುದು, ಮೇಲ್ಮನವಿಗೆ ಯಾವುದೇ ಅವಕಾಶ ಇರಲ್ಲ. ಸಂಬಂಧಗಳನ್ನು ಪುನರ್ ಸ್ಫಾಪನೆ ಮಾಡಬಹುದೆಂದು ತಿಳಿಸಿದ ಅವರು, ಈ ಹಿಂದೆ ಅಂದರೆ ಜುಲೈ 2025ರಿಂದ ನಡೆದ 90 ದಿನಗಳ ರಾಷ್ಟ್ರವ್ಯಾಪಿ ಅಭಿಯಾನದಲ್ಲಿ ಸುಮಾರು 1 ಲಕ್ಷ ಪ್ರಕರಣ ಇತ್ಯರ್ಥವಾಗಿವೆ. ಮುಧೋಳ ತಾಲೂಕಿನಲ್ಲೂ ಸಹ ಗಣನೀಯ ಪ್ರಮಾಣದಲ್ಲಿ ಪ್ರಕರಣಗಳು ಇತ್ಯರ್ಥವಾಗಿವೆ ಎಂದು ತಿಳಿಸಿದರು.
ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ವಿಜಯಕುಮಾರ ಕನ್ನೂರ ಮಾತನಾಡಿ, ಕೌಟುಂಬಿಕ ಕಲಹ ಪ್ರಕರಣಗಳು, ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿನ ಪ್ರಕರಣಗಳು, 498ಎ ಐಪಿಸಿ ಹಾಗೂ ಕಲಂ-85 ಬಿಎನ್ಎಸ್ ಕಾಯ್ದೆ ಅಡಿಯಲ್ಲಿನ ಪ್ರಕರಣಗಳು, ಚೆಕ್ ಬೌನ್ಸ್, ಅಪಘಾತ, ರಾಜಿಯಾಗಬಹುದಾದ ಕ್ರಿಮಿನಲ್ ಪ್ರಕರಣಗಳು, ಭೂಸ್ವಾಧೀನ ಪರಿಹಾರ ಪ್ರಕರಣಗಳು, ಹಿಸ್ಸಾ, ದಾವೆಗಳು, ಬಾಡಿಗೆದಾರರನ್ನು ಬಿಡಿಸಲು ಹಾಕಿದ ದಾವೆಗಳು, ವಾಣಿಜ್ಯ ವ್ಯವಹಾರದ ಪ್ರಕರಣಗಳು, ಕಾರ್ಮಿಕ ಕಾನೂನಿನಡಿಯಲ್ಲಿನ ಪ್ರಕರಣಗಳು, ಕರಾರು ಉಲ್ಲಂಘನೆ ಬಗೆಗಿನ ಪ್ರಕರಣಗಳು, ಗ್ರಾಹಕ ಹಿತರಕ್ಷಣಾ ಕಾನೂನಿನಡಿಯಲ್ಲಿನ ಪ್ರಕರಣಗಳು ಹಾಗೂ ಸೂಕ್ತ ಸಿವ್ಹಿಲ್ ವ್ಯಾಜ್ಯಗಳ ಪ್ರಕರಣಗಳನ್ನು ಮಧ್ಯಸ್ಥಿಕೆ ಅಭಿಯಾನದಲ್ಲಿ ಇತ್ಯರ್ಥಗೊಳಿಸಬಹುದು. ಸಾರ್ವಜನಿಕರು, ಪಕ್ಷಗಾರರು ಅಂದೋಲನದ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದರು.ಹೆಚ್ಚುವರಿ ಪ್ರಧಾನ ದಿವಾಣಿ ನ್ಯಾಯಾಧೀಶ ವಿವೇಕ ಗ್ರಾಮೋಪಾಧ್ಯೆ, ಪ್ರಧಾನ ದಿವಾಣಿ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಲಗಮಾ ಹುಕ್ಕೇರಿ ಹಾಗೂ ವಕೀಲರ ಸಂಘದ ಅಧ್ಯಕ್ಷ ವಿ.ಡಿ. ಕತ್ತಿ ಸುದ್ದಿಗೋಷ್ಠಿಯಲ್ಲಿ ಇದ್ದರು.