ಸಾರಾಂಶ
ಕಠಿಣ ಪರಿಶ್ರಮ, ನಿರಂತರ ಓದಿನಿಂದ ವೈದ್ಯಕೀಯ ವ್ಯಾಸಂಗ ಮಾಡಿ ಉನ್ನತ ಶ್ರೇಣಿ ಪಡೆಯಬಹುದು. ವೈದ್ಯ ಶಿಕ್ಷಣ ಕಬ್ಬಿಣದ ಕಡಲೆಯಲ್ಲ, ಶಿಸ್ತಿನಿಂದ ಓದಿ ಕಠಿಣವಾದ ಅಧ್ಯಯನ ಮಾಡಿದರೆ ಎಲ್ಲವೂ ಸಾಧ್ಯ. ಇಲ್ಲಿಯ ಶಿಕ್ಷಕರು ನಿಜಕ್ಕೂ ಅತ್ಯುತ್ತಮವಾದ ಶಿಕ್ಷಣ ನೀಡಿ ನಮ್ಮ ಬದುಕು ರೂಪಿಸಿಕೊಳ್ಳಲು ಸಹಕಾರಿಯಾಗುತ್ತಾರೆ.
ಹುಬ್ಬಳ್ಳಿ:
ಇಲ್ಲಿಯ ವಿದ್ಯಾನಗರದಲ್ಲಿರುವ ಎಂ.ಆರ್. ಸಾಖರೆ ಸಿಬಿಎಸ್‌ಇ ಶಾಲೆಯಲ್ಲಿ ವಿಶಿಷ್ಟವಾಗಿ ರಾಷ್ಟ್ರೀಯ ವೈದ್ಯರ ದಿನ ಆಚರಿಸಲಾಯಿತು.ಅದೇ ಶಾಲೆಯಲ್ಲಿ ಶಿಕ್ಷಣ ಪಡೆದು ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಡಾ. ರಾಹುಲ್ ಸಜ್ಜನರ್ ಮತ್ತು ಡಾ. ದಿವ್ಯಾ ಸುಸಂಗಿ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿ ಅವರಿಂದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿಸಿದ್ದಲ್ಲದೇ ಅವರನ್ನು ಸನ್ಮಾನಿಸಲಾಯಿತು.
ಡಾ. ರಾಹುಲ್ ಸಜ್ಜನರ್ ಮಾತನಾಡಿ, ಇದೇ ಶಾಲೆಯಲ್ಲಿ ತಾವು ಪಡೆದ ಪ್ರಾಥಮಿಕ ಶಿಕ್ಷಣದಿಂದ ಪ್ರಭಾವಿತನಾಗಿ ನಾನು ವೈದ್ಯಕೀಯ ಶಿಕ್ಷಣ ಪಡೆಯಲು ಸಾಧ್ಯವಾಯಿತು. ಕಠಿಣ ಪರಿಶ್ರಮ, ನಿರಂತರ ಓದಿನಿಂದ ವೈದ್ಯಕೀಯ ವ್ಯಾಸಂಗ ಮಾಡಿ ಉನ್ನತ ಶ್ರೇಣಿ ಪಡೆಯಬಹುದು. ವೈದ್ಯ ಶಿಕ್ಷಣ ಕಬ್ಬಿಣದ ಕಡಲೆಯಲ್ಲ, ಶಿಸ್ತಿನಿಂದ ಓದಿ ಕಠಿಣವಾದ ಅಧ್ಯಯನ ಮಾಡಿದರೆ ಎಲ್ಲವೂ ಸಾಧ್ಯ. ಇಲ್ಲಿಯ ಶಿಕ್ಷಕರು ನಿಜಕ್ಕೂ ಅತ್ಯುತ್ತಮವಾದ ಶಿಕ್ಷಣ ನೀಡಿ ನಮ್ಮ ಬದುಕು ರೂಪಿಸಿಕೊಳ್ಳಲು ಸಹಕಾರಿಯಾಗುತ್ತಾರೆ. ಪ್ರತಿಯೊಬ್ಬರೂ ಛಲದಿಂದ ನಾನೇನಾದರೂ ಸಾಧಿಸಬೇಕೆಂದು ಪ್ರಯತ್ನ ಪಟ್ಟರೆ ಖಂಡಿತ ಯಶ ಸಾಧ್ಯವಾಗುತ್ತದೆ ಎಂದರು.ವೈದ್ಯರು ಕೇವಲ ಹಣ ಮಾಡುವ ಉದ್ದೇಶ ಇಟ್ಟುಕೊಳ್ಳದೆ ಸಮಾಜ ಸೇವೆ, ರೋಗಿಗಳ ಆರೋಗ್ಯ ಸುಧಾರಣೆಯೇ ಧ್ಯೇಯವಾಗಿರಬೇಕು. ವೈದ್ಯರನ್ನು ದೇವರಂತೆ ರೋಗಿಗಳು, ಅವರ ಕುಟುಂಬಸ್ಥರು ನೋಡುತ್ತಾರೆ. ನಾವೂ ಸಹ ಮಾನವೀಯತೆಯಿಂದ ಚಿಕಿತ್ಸೆ ನೀಡಬೇಕು. ನೊಂದಿರುವ ಕುಟುಂಬಕ್ಕೆ ಸಾಂತ್ವನ ಹೇಳಬೇಕು. ಜೀವ ಕೊಡುವ ಸಾಮರ್ಥ್ಯ ವೈದ್ಯರಿಗೆ ಇಲ್ಲದಿರಬಹುದು. ಆದರೆ, ಜೀವ ಉಳಿಸುವ ಸಾಧ್ಯತೆ ಖಂಡಿತವಾಗಿಯೂ ಇದೆ ಎಂದರು.
ಡಾ. ದಿವ್ಯಾ ಸುಸಂಗಿ ಸಹ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಪ್ರಾಚಾರ್ಯ ಮಂಜುನಾಥ ಮಾನ್ವಿ ಮಾತನಾಡಿದರು. ಶ್ರದ್ಧಾ ಉಪ್ಪಾರ ಸ್ವಾಗತಿಸಿದರು. ತೇಜಸ್ ಕಬಾಡಿ ಮುಖ್ಯ ಅತಿಥಿಗಳ ಪರಿಚಯಿಸಿದರು.