ಕೂಡ್ಲಿಗಿ; ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳ ದರ್ಪ ಹಾಗೂ ನಿರ್ಲಕ್ಷ್ಯದ ವರ್ತನೆ ಕುರಿತು ರೋಗಿಗಳು ಮತ್ತು ಅವರ ಬಂಧುಗಳಿಂದ ಆರೋಪಗಳು ಕೇಳಿ ಬರುತ್ತಿವೆ.

ಚಿಕಿತ್ಸೆಗಾಗಿ ಹಲವು ಗಂಟೆಗಳ ಕಾಲ ಕಾಯಬೇಕಾಗುತ್ತದೆ. ಕೆಲವು ವೈದ್ಯರು ಸರಿಯಾದ ಮಾಹಿತಿ ನೀಡದೇ ತುರ್ತು ಪರಿಸ್ಥಿತಿಯಲ್ಲಿಯೂ ತಡವಾಗಿ ಸ್ಪಂದಿಸುತ್ತಾರೆ ಎನ್ನುವ ಆರೋಪವೂ ಕೇಳಿಬಂದಿದೆ.

ವಿಶೇಷವಾಗಿ ವೃದ್ಧರು ಹಾಗೂ ಗ್ರಾಮೀಣ ಭಾಗದಿಂದ ಬರುವ ರೋಗಿಗಳು ಹೆಚ್ಚು ಸಂಕಷ್ಟ ಅನುಭವಿಸುತ್ತಿದ್ದಾರೆ. ಆಸ್ಪತ್ರೆಯಲ್ಲಿ ಔಷಧಿ ಕೊರತೆ, ತಪಾಸಣಾ ಸೌಲಭ್ಯಗಳ ಅಭಾವ ಮತ್ತು ಸಿಬ್ಬಂದಿ ಕೊರತೆ ಸಮಸ್ಯೆಗಳನ್ನು ಮತ್ತಷ್ಟು ತೀವ್ರಗೊಳಿಸಿದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.

ಸರ್ಕಾರಿ ಆಸ್ಪತ್ರೆ ಎಂದರೆ ಬಡಜನರ ಆಶ್ರಯ. ಆದರೆ ಇಲ್ಲಿ ನಿರ್ಲಕ್ಷ್ಯ ಹೆಚ್ಚಾಗಿದೆ ಎಂದು ಹೆಸರು ಬಹಿರಂಗ ಪಡಿಸಲು ಇಚ್ಚಿಸದ ರೋಗಿಯೊಬ್ಬರ ಸಂಬಂಧಿಕರು ಬೇಸರ ವ್ಯಕ್ತಪಡಿಸಿದರು.

ಬೇಜವಾಬ್ದಾರಿ ವರ್ತನೆ:


ಸೂಕ್ತ ಸಮಯಕ್ಕೆ ವೈದ್ಯರು ಬರಲ್ಲ. ನರ್ಸ್ ಗಳಿದ್ದರೂ ಸ್ಪಂದಿಸುವುದಿಲ್ಲ. ಆ್ಯಂಬುಲೆನ್ಸ್ ಸೇವೆ ಸರಿಯಾದ ಸಮಯಕ್ಕೆ ಸಿಗುತ್ತಿಲ್ಲ. ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳ ಬೇಜವಾಬ್ದಾರಿ ವರ್ತನೆ ಮಾಡುತ್ತಿದ್ದಾರೆ ಎಂದು ಆರೋಪಿಸುತ್ತಾರೆ. ಈ ಬಗ್ಗೆ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಯ ವೈಧ್ಯರು, ನರ್ಸ್‌ಗಳ ನಿರ್ಲಕ್ಷ್ಯಕ್ಕೆ ಸಾಕ್ಷಿ ನೀಡಿದ್ದಾರೆ. ವೈದ್ಯರ ನಿರ್ಲಕ್ಷ್ಯ ಖಂಡಿಸಿ ವಾಗ್ವಾದ ಮಾಡ್ತಿರುವ ವಿಡಿಯೋ ವೈರಲ್ ಆಗಿದೆ. ವಿಷ ಕುಡಿದ ವ್ಯಕ್ತಿಗೆ ಸರಿಯಾದ ಚಿಕಿತ್ಸೆ ನೀಡಿಲ್ಲ. ಕೊನೆಯ ಕ್ಷಣದಲ್ಲಿ ಕೊಪ್ಪಳ ಸರ್ಕಾರಿ ಆಸ್ಪತ್ರೆಗೆ ಶಿಫಾರಸು ಮಾಡಿದ್ದಾರೆ. ಕೊಪ್ಪಳಕ್ಕೆ ಹೋಗಲು ಆ್ಯಂಬುಲೆನ್ಸ್ ಇಲ್ಲ. ವಿಳಂಬ ಏಕೆ ಎಂದರೆ ವೈದ್ಯರು ಉಡಾಫೆ ಉತ್ತರ ನೀಡಿದ್ದಾರೆ. ಒಬ್ಬ ರೋಗಿ ಸಾವು ಬದುಕಿನ ಮಧ್ಯೆ ಹೋರಾಟ ಮಾಡ್ತಿದ್ದರೂ ವೈದ್ಯರು ಮಾತ್ರ ಸರಿಯಾಗಿ ಸ್ಪಂದಿಸಿಲ್ಲ ಎನ್ನುವ ಆರೋಪ ಕೇಳಿಬಂದಿದೆ.

ತೀರಾ ವಿಕೋಪಕ್ಕೆ ತೆರಳಿದಾಗ ಖಾಸಗಿ ಆ್ಯಂಬುಲೆನ್ಸ್ ಅಥವಾ ವಾಹನದಲ್ಲಿ ಕರೆದುಕೊಂಡು ಹೋಗಿ ಎಂದು ಉಚಿತ ಸಲಹೆ ನೀಡಿದ್ದಾರೆ ಎಂಬುದು ರೋಗಿಯ ಪೋಷಕರ ಅಪವಾದ. ಈ ವೇಳೆ ರೋಗಿಯ ಸಂಬಂಧಿಕರು ಸಹ ವೈದ್ಯರ ಜೊತೆಗೆ ವಾಗ್ವಾದ ಮಾಡಿದ್ದಾರೆ. ತುರ್ತು ಪರಿಸ್ಥಿತಿಯಲ್ಲಿಯೂ ತಡವಾಗಿ ಸ್ಪಂದಿಸುತ್ತಾರೆ ಎಂದು ವೈದ್ಯರ ವಿರುದ್ಧ ಅಸಮಾಧಾನ ವ್ಯಕ್ತವಾಗಿದೆ.

ಹಂಪಿ ಉತ್ಸವದ ದಿನ ಒಂದು ಆ್ಯಂಬುಲೆನ್ಸ್ ಹಂಪಿಗೆ ಹೋಗಿದೆ. ಹೀಗಾಗಿ ಇನ್ನೊಂದು ಆ್ಯಂಬುಲೆನ್ಸ್ ಬರುವುದು ತಡವಾಗಿದೆ. ಹೀಗಾಗಿ ಪೋಷಕರು ವಾಗ್ವಾದಕ್ಕಿಳಿದಿದ್ದಾರೆ. ವೈಧ್ಯರು ಸೂಕ್ತ ಉತ್ತರ ನೀಡಬಹುದಿತ್ತು. ರೋಗಿಯ ಪೋಷಕರಿಗೆ ವಾಸ್ತವವನ್ನು ಸಮಾಧಾನವಾಗಿ ಹೇಳಬೇಕಿತ್ತು. ಅಂದು ಚಿಕಿತ್ಸೆನೀಡಿದ್ದ ಡಾ.ಮಧು ಅವರಿಗೆ ಕರೆ ಮಾಡಿ ಹೆಚ್ಚಿನ ಮಾಹಿತಿ ಪಡೆಯಲು ಪ್ರಯತ್ನ ನಡೆಸಿದ್ದೇನೆ ಎನ್ನುತ್ತಾರೆ ಕೂಡ್ಲಿಗಿ ತಾಲೂಕು ವೈಧ್ಯಾಧಿಕಾರಿ ಡಾ.ಪ್ರದೀಪಕುಮಾರ್.