ಬಿಳಿಕೋಟು ಹಾಕಿಕೊಂಡಿರುವ ವೈದ್ಯರು ಜವಾಬ್ದಾರಿ ಮತ್ತು ವಿನಯದ ಸಂಕೇತ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ಕೆ.ರವಿ ಹೇಳಿದರು.
ಕನ್ನಡಪ್ರಭ ವಾರ್ತೆ, ತುಮಕೂರು ಬಿಳಿಕೋಟು ಹಾಕಿಕೊಂಡಿರುವ ವೈದ್ಯರು ಜವಾಬ್ದಾರಿ ಮತ್ತು ವಿನಯದ ಸಂಕೇತ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ಕೆ.ರವಿ ಹೇಳಿದರು.
ನಗರದ ಶಿರಾರಸ್ತೆಯ ಶ್ರೀದೇವಿ ಪಿಜಿಯೋಥರಪಿ ಕಾಲೇಜಿನ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು. ವೈದ್ಯರು ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುವ ಸಿಬ್ಬಂದಿ ರಾಷ್ಟ್ರೀಯ ಆಸ್ತಿ. ಹೀಗಾಗಿ ಪ್ರತಿ ವ್ಯಕ್ತಿಗೂ ವೈದ್ಯರ ಅವಶ್ಯಕತೆ ಬಹಳವಾಗಿರುತ್ತದೆ. ಆದ್ದರಿಂದ ವೃತ್ತಿಯಲ್ಲಿ ನ್ಯಾಯ, ನೀತಿ, ಧರ್ಮ ಪಾಲಿಸುವುದು ನಿಮ್ಮ ನಿತ್ಯ ಮಂತ್ರವಾಗಬೇಕು. ಹೊಸ ಜೀವನ, ಸಮಾಜ ನಿಮ್ಮನ್ನು ಮೌಲ್ಯಮಾಪನ ಮಾಡುತ್ತದೆ. ಮಹಿಳೆಯರು ಮಕ್ಕಳು ವೃದ್ಧರು, ಪುನರ್ವಸತಿ ಕೇಂದ್ರಗಳಿಗೆ ನಿಮ್ಮ ಸೇವೆ ಅತ್ಯಂತ ಮುಖ್ಯವಾಗಿದೆ ಮತ್ತು ಜಗತ್ತಿನಾದ್ಯಂತ ವ್ಯಾಪಕವಾಗಿ ಬೆಳೆಯುತ್ತಿರುವ ಮತ್ತು ಬೇಡಿಕೆ ಇರುವ ಮತ್ತು ಹೆಚ್ಚು ಉದ್ಯೋಗ ನೀಡುವ ಕ್ಷೇತ್ರವಾಗಿದೆ ಎಂದು ಹೇಳಿದರು. ಮುಖ್ಯಅತಿಥಿಯಾಗಿದ್ದ ಡಾ.ವ್ಯಾಸನಕೆರೆ ಪ್ರಭಂಜನಾಚಾರ್ಯರವರು ಮಾತಾನಾಡಿ, ಡಿವೈನ್ ಥೆರಪಿಗಿಂತ ಮಿಗಿಲಾದದ್ದು ಜಗತ್ತಿನಲ್ಲಿ ಇಲ್ಲ. ವೈದ್ಯರು ರೋಗಿಗಳಿಗೆ ಥೆರಪಿ ನೀಡಿ ಗುಣಪಡಿಸುತ್ತಾರೆ. ಆದರೆ ಡಿವೈನ್ ಥೆರಪಿ ವೈದ್ಯರಿಗೂ ಬೇಕು. ರೋಗಿಗೂ ಬೇಕು. ಹೀಗಾಗಿ ಅದರ ಶಕ್ತಿ ಮತ್ತು ಮಹತ್ವ ಮಿಗಿಲಾದದ್ದು. ವೈದ್ಯರ ಪಾಲಿಗೆ ರೋಗಿಗಳೇ ದೇವರು ಅವರು ಏನೇ ಸಾಧನೆ, ಹೆಸರು ಮಾಡಬೇಕಾದರೂ ಅದಕ್ಕೆ ಮೂಲ ಕಾರಣ ರೋಗಿಗಳೇ ಆಗಿರುತ್ತಾರೆ ಹೀಗಾಗಿ ರೋಗಿಗಳನ್ನು ಗೌರವದಿಂದ ಕಾಣುವುದು ಉಪಚರಿಸುವುದು ಅವರ ನಿತ್ಯ ಕಾಯಕವಾಗಬೇಕು ಎಂದು ಕಿವಿಮಾತು ಹೇಳಿದರು. ವೈದ್ಯಕೀಯ ವೃತ್ತಿಯಲ್ಲಿ ತೊಡಗುವವರಿಗೆ ಅವರಿಗೆ ತಾಯಿ ಹೃದಯ ಇರಬೇಕು. ವೈದ್ಯರು ರೋಗಿಯ ಕಾಯಿಲೆಯನ್ನು ವಾಸಿ ಮಾಡಬಹುದು. ಆದರೆ ನೆಮ್ಮದಿ, ಮನಶಾಂತಿಯನ್ನು ದೈವಿಕ ಶಕ್ತಿಯಿಂದ ಮಾತ್ರ ಪಡೆಯಲು ಸಾಧ್ಯ ಎಂದು ಹೇಳಿದರು.ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಅಸಗೋಡು ಜಯಸಿಂಹ ಮಾತನಾಡಿ, ಜೀವನದಲ್ಲಿ ಭಗವಂತನ ಪ್ರೇರಣೆ ಹಾಗೂ ಮನಸ್ಸಿನ ಶಾಂತಿ-ನೆಮ್ಮದಿ ಅತ್ಯಂತ ಮುಖ್ಯವೆಂದು ತಿಳಿಸಿದರು. ಪದವಿ ಪಡೆದ ಎಲ್ಲಾ ವಿದ್ಯಾರ್ಥಿಗಳು ತಮ್ಮ ಭವಿಷ್ಯದಲ್ಲಿ ಯಶಸ್ಸು ಸಾಧಿಸಲಿ ಎಂದು ಶುಭ ಹಾರೈಸಿದರು.ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಶ್ರೀದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಆರ್. ಹುಲಿನಾಯ್ಕರ್ ರವರು ಮಾತನಾಡಿ, ನಿಮ್ಮ ಜ್ಞಾನ ಉತ್ತಮ ಸಮಾಜ ನಿರ್ಮಾಣಕ್ಕೆ ಅಡಿಪಾಯವಾಗವೇಕು. ಪ್ರತಿದಿನ ಹೊಸದನ್ನು ಕಲಿಯುವ ಇಚ್ಚಾ ಶಕ್ತಿಯನ್ನು ನಿಮ್ಮದಾಗಬೇಕು. ಶ್ರೀದೇವಿ ಸಂಸ್ಥೆಯ ಸಮಗ್ರ ಬೆಳವಣಿಗೆಗೆ ಕಮಲೇಶ್ ದಂಪತಿಗಳು ಬೆನ್ನಲಬಾಗಿ ನಿಂತಿದ್ದಾರೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಶ್ರೀದೇವಿ ಫಿಸಿಯೋಥೆರಪಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ಎ.ಆನಂದಿರವರು ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. 47 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಶ್ರೀದೇವಿ ಚಾರಿಟಬಲ್ ಟ್ರಸ್ಟ್ ನಿರ್ದೇಶಕ ಡಾ. ರಮಣ್ ಎಂ. ಹುಲಿನಾಯ್ಕರ್, ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕ ಎಂ.ಎಸ್.ಪಾಟೀಲ್, ಶ್ರೀದೇವಿ ಚಾರಿಟಬಲ್ ಟ್ರಸ್ಟ್ನ ಟ್ರಸ್ಟಿ ಹಾಗೂ ನೇತ್ರತಜ್ಞರಾದ ಡಾ.ಲಾವಣ್ಯ ಮತ್ತು ಡಾ.ಕೆ.ಆರ್.ಕಮಲೇಶ್, ಲೇಖಕಿ ಭಾರತಿ ಮುಂತಾದವರು ಉಪಸ್ಥಿತರಿದ್ದರು.