ಗಂಗಾವತಿ: ವೈದ್ಯಕೀಯ ವೃತ್ತಿ ಪವಿತ್ರವಾದದ್ದು, ವೈದ್ಯ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆದು ಸಮಾಜ ಸೇವೆಯಲ್ಲಿ ತೊಡಗಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಲಿಂಗರಾಜ್ ಟಿ. ಕರೆ ನೀಡಿದರು. ನಗರದ ಅಮರ್ ಗಾರ್ಡನ್‌ನಲ್ಲಿ ಸ್ಫೂರ್ತಿ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಸ್ಫೂರ್ತಿ ಕಲರವ ಎನ್ನುವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದರು. ಪ್ರಸ್ತುತ ವರ್ಷ 96 ವಿದ್ಯಾರ್ಥಿಗಳು ಕಾಲೇಜಿನಿಂದ ಹೊರಗೆ ಹೋಗುತ್ತಿದ್ದಾರೆ. ಅವರ ಮುಂದಿನ ಭವಿಷ್ಯದ ಕಡೆಗೆ ಗಮನಹರಿಸಬೇಕು. ವೈದ್ಯರಲ್ಲಿ ಉತ್ತಮ ನಡತೆ, ಪ್ರಾಮಾಣಿಕತೆ ಇರಬೇಕು ಎಂದರು.
ಸ್ಫೂರ್ತಿ ಶಿಕ್ಷಣ ಸಂಸ್ಥೆ ವಿವಿಧ ಕೋರ್ಸುಗಳನ್ನು ಪ್ರಾರಂಭಿಸಿ, ನಗರ ಸೇರಿದಂತೆ ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಈ ಸಂಸ್ಥೆಯ ಮುಖ್ಯಸ್ಥರಾದ ಡಾ. ಈಶ್ವರ ಸವಡಿ ಮತ್ತು ಡಾ. ಬಸವರಾಜ್ ಸವಡಿ ಅವರ ಕಾರ್ಯ ಶ್ಲಾಘನೀಯ ಎಂದರು.ಡಿವೈಎಸ್ಪಿ ಜಾಯಪ್ಪ ನ್ಯಾಮಗೌಡ ಮಾತನಾಡಿ, ವಿದ್ಯಾರ್ಥಿಗಳು ರೋಗಿಗಳ ಕಾಯಿಲೆಯನ್ನು ಅವಲೋಕಿಸಿ ಅವರಿಗೆ ಸರಿಯಾದ ಚಿಕಿತ್ಸೆ ಕೊಡಬೇಕು ಎಂದು ಹೇಳಿದರು. ಹೆಚ್ಚಿನ ಆಸೆ, ಆಮಿಷಕ್ಕೆ ಒಳಗಾಗದೆ ವೈದ್ಯ ವೃತ್ತಿಗೆ ಕೀರ್ತಿ ತರಬೇಕು ಎಂದರು.
ಪ್ರಾಸ್ತಾವಿಕವಾಗಿ ಡಾ. ಈಶ್ವರ ಸವಡಿ ಮಾತನಾಡಿ, ಕಾಲೇಜಿನ ಬೆಳವಣಿಗೆ ಮತ್ತು ಸೌಲಭ್ಯಗಳ ಕುರಿತು ವಿವರಿಸಿದರು. ಸ್ಫೂರ್ತಿ ಸಮೂಹ ಸಂಸ್ಥೆಯ ಅಧ್ಯಕ್ಷೆ ನಿರ್ಮಲಾ ಈಶ್ವರ ಸವಡಿ ಅಧ್ಯಕ್ಷತೆ ವಹಿಸಿದ್ದರು.ಉದ್ಯಮಿ ವಿರೂಪಾಕ್ಷಪ್ಪ ಮುಷ್ಟಿ, ಡಾ. ಉಮೇಶ ಪುರದ, ರವಿ ರಾಜಶೇಖರ, ಸತೀಶ ರಾಯ್ಕರ್, ಡಾ. ಬಸವರಾಜ್ ಸವಡಿ, ಕವಿತಾ ಬಸವರಾಜ್ ಸವಡಿ, ಶಾಹೀದಾ ಭಾಗವಹಿಸಿದ್ದರು.