ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ನಗರ ಪ್ರದೇಶದಲ್ಲೇ ದೊಡ್ಡ ಆಸ್ಪತ್ರೆಗಳನ್ನು ತೆರೆಯುತ್ತಿರುವ ಇಂದಿನ ಸನ್ನಿವೇಶದಲ್ಲಿ ಗ್ರಾಮೀಣ ಪ್ರದೇಶದಲ್ಲಿ ನಗರದ ಆಸ್ಪತ್ರೆಗಳಿಗೆ ಸರಿಸಮಾನವಾಗಿ ಅಗತ್ಯವಾದ ವೈದ್ಯಕೀಯ ಸೇವೆಗಳನ್ನು ಬೆನಕ ಆಸ್ಪತ್ರೆಯು ನೀಡುತ್ತಿರುವುದು ಗಮನಾರ್ಹ. ಇದೊಂದು ದೊಡ್ಡ ಸಾಧನೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.ಅವರು ಶನಿವಾರ ಉಜಿರೆಯ ಬೆನಕ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ರಜತ ಸಂಭ್ರಮ ಕಾರ್ಯಕ್ರಮದ ಅಂಗವಾಗಿ ಆಸ್ಪತ್ರೆಯ ವಿಸ್ತೃತ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.
ವೈದ್ಯಕೀಯ ಕ್ಷೇತ್ರದಲ್ಲಿ ಬದಲಾವಣೆ, ಸಂಶೋಧನೆ, ಆವಿಷ್ಕಾರ, ನೂತನ ಯಂತ್ರೋಪಕರಣಗಳ ಬಳಕೆಯಿಂದ ರೋಗಿಗಳಿಗೆ ತ್ವರಿತ ಚಿಕಿತ್ಸೆ ಸಿಗುವಂತಾಗಿದೆ. ರೋಗಿಗಳನ್ನು ರಕ್ಷಿಸುವ ಶಕ್ತಿ ಆಸ್ಪತ್ರೆಗಳಿಗಿದೆ. ಗ್ರಾಮೀಣ ಪ್ರದೇಶದಲ್ಲಿ ಉನ್ನತ ಮಟ್ಟದ ಆಸ್ಪತ್ರೆಗಳ ಬೇಡಿಕೆ ಹೆಚ್ಚುತ್ತಿದ್ದು, ಬೆನಕ ಆಸ್ಪತ್ರೆ ಇದಕ್ಕೆ ಉತ್ತಮವಾಗಿ ಸ್ಪಂದಿಸಿದೆ. ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ರಿಯಾಯಿತಿ ದರದ ಸೇವೆ ಸಿಗುವಂತಾಗಲಿ. ಬೆನಕ ಆಸ್ಪತ್ರೆಯ ಸೇವೆ, ರೋಗಿಗಳ ಕಾಳಜಿ, ವ್ಯವಸ್ಥೆಗಳು ಪ್ರಶಂಸನೀಯ ಎಂದರು.ರಜತ ಸಂಭ್ರಮ ಉದ್ಘಾಟಿಸಿದ ಶಾಸಕ ಹರೀಶ್ ಪೂಂಜ ಮಾತನಾಡಿ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಈ ರೀತಿ ಆರೋಗ್ಯ ಕೇಂದ್ರ ಇರುವುದು ಪ್ರೇರಣಾದಾಯಿ. ಬೆನಕ ಆಸ್ಪತ್ರೆಯ ಸೇವಾ ವೈಖರಿ ಜನಮನಕ್ಕೆ ಮುಟ್ಟಿದೆ. ಡಾ. ಗೋಪಾಲಕೃಷ್ಣ ಅವರಿಗೆ ಮುಂದಿನ ದಿನಗಳಲ್ಲಿ ಇಲ್ಲೊಂದು ವೈದ್ಯಕೀಯ ಕಾಲೇಜನ್ನು ಸ್ಥಾಪಿಸುವ ಶಕ್ತಿ ಭಗವಂತ ನೀಡಲಿ ಎಂದು ಹೇಳಿದರು.
ತುರ್ತು ಚಿಕಿತ್ಸಾ ವಿಭಾಗ ಉದ್ಘಾಟಿಸಿದ ಎಂಎಲ್‌ಸಿ ಪ್ರತಾಪ ಸಿಂಹ ನಾಯಕ್ ಮಾತನಾಡಿ, ಬೆನಕ ಆಸ್ಪತ್ರೆಯಲ್ಲಿ ಪ್ರತಿಯೊಂದರಲ್ಲಿ ಸೂಕ್ಷ್ಮತೆಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಕಸಿತ ಭಾರತದ ಕಲ್ಪನೆಯಂತೆ, ಸಮಾಜಕ್ಕೆ ಮಾದರಿಯಾಗಿದೆ ಎಂದರು.ಸೀತಾರಾಮ ಭಟ್ ಅಧ್ಯಕ್ಷತೆ ವಹಿಸಿದ್ದರು. ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ, ನ್ಯಾಷನಲ್ ಹೆಲ್ತ್ ಮಿಷನ್ ನಿರ್ದೇಶಕ ಡಾ. ನವೀನ್ ಭಟ್, ಉಜಿರೆ ಗ್ರಾ.ಪಂ. ಅಧ್ಯಕ್ಷೆ ಉಷಾಕಿರಣ ಕಾರಂತ್, ಉಪಾಧ್ಯಕ್ಷ ರವಿಕುಮಾರ್ ಬರೆಮೇಲು, ಡಾ. ನಮಿಷಾ ಭಟ್, ಡಾ. ಭಾರತಿ ಜಿ.ಕೆ., ಡಾ. ಅಂಕಿತಾ ಜಿ. ಭಟ್, ಡಾ. ಆದಿತ್ಯ ರಾವ್, ಡಾ. ರೋಹಿತ್ ಜಿ.ಭಟ್, ಡಾ. ನವ್ಯಾ, ಮಾಜಿ ಎಂಎಲ್‌ಸಿ ಕೆ. ಹರೀಶ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಆಸ್ಪತ್ರೆಯ ಪಿಆರ್‌ಒ ಎಸ್.ಜಿ .ಭಟ್ ಮತ್ತು ವಕೀಲ ಧನಂಜಯ್ ರಾವ್ ಕಾರ್ಯಕ್ರಮ ನಿರೂಪಿಸಿದರು.ಆಸ್ಪತ್ರೆಯೇ ಮನೆ
ಆಸ್ಪತ್ರೆ ಎಂದರೆ ಅದು ನಮ್ಮ ಕುಟುಂಬಕ್ಕೆ ಮನೆಯಂತೆ. ಕುಟುಂಬ ಸದಸ್ಯರ ಪೂರ್ಣ ಬೆಂಬಲ ಆಸ್ಪತ್ರೆಯ ಅಭಿವೃದ್ಧಿಗೆ ಕಾರಣವಾಗಿದೆ. ರೋಗಿಗಳಿಗೆ ಸಂತೃಪ್ತಿ, ನಗುಮೊಗದ ಸೇವೆ ನೀಡಿದರೆ ಅವರ ಅರ್ಧ ಕಾಯಿಲೆ ಗುಣವಾದಂತೆ. ರೋಗಿಗಳ ಮನಸ್ಥಿತಿಗೆ ಅನುಗುಣವಾಗಿ ಆಸ್ಪತ್ರೆಯಲ್ಲಿ ಸೌಲಭ್ಯಗಳನ್ನು ಅಳವಡಿಸಿಕೊಳ್ಳಲಾಗಿದೆ. ತ್ವರಿತ ಚಿಕಿತ್ಸೆ ಆಸ್ಪತ್ರೆಯ ಧ್ಯೇಯವಾಗಿದೆ ಎಂದು ಪ್ರಾಸ್ತಾವಿಕವಾಗಿ ಮಾತನಾಡಿದ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಗೋಪಾಲಕೃಷ್ಣ ಕೆ. ಹೇಳಿದರುಅತ್ಯಂತ ಅಚ್ಚುಕಟ್ಟಾಗಿ ಕಾರ್ಯಕ್ರಮ ನಡೆಯಿತು. ಸಚಿವರನ್ನು ಆಸ್ಪತ್ರೆಯ ವತಿಯಿಂದ ಸನ್ಮಾನಿಸಲಾಯಿತು. ಡಾ. ಗೋಪಾಲಕೃಷ್ಣ- ಡಾ- ಭಾರತಿ ದಂಪತಿಯನ್ನು ಉಜಿರೆ ಗ್ರಾಮಸ್ಥರು ಸಮ್ಮಾನಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಆಸ್ಪತ್ರೆಯಲ್ಲಿನ ಸೌಕರ್ಯಗಳ ಬಗ್ಗೆ ಪ್ರೋಮೊ ಪ್ರದರ್ಶಿಸಲಾಯಿತು.