ಸಾರಾಂಶ
ಶ್ರೀದೇವಿ ಮಹಾತ್ಮೆ, ರಕ್ತ ಬೀಜಾಸುರರ ಪ್ರತಾಪ ಪೌರಾಣಿಕ ನಾಟಕಗಳ ಪ್ರದರ್ಶನಕ್ಕೆ ಚಾಲನೆ
ಕನ್ನಡಪ್ರಭ ವಾರ್ತೆ, ಕಡೂರುಅನಾದಿಕಾಲದಿಂದಲೂ ಗ್ರಾಮೀಣ ಪ್ರದೇಶದ ಜನರಲ್ಲಿ ಕಲೆ, ಸಾಹಿತ್ಯ, ಸಂಗೀತ,ಸಾಂಸ್ಕೃತಿಕ ಮನೋಭಾವ ಮತ್ತು ಮೌಲ್ಯಾಧಾರಿತ ಗುಣಗಳನ್ನು ಬೆಳೆಸುತ್ತಿದ್ದ ಭಕ್ತಿ ಪ್ರಧಾನ ನಾಟಕಗಳು ಇಂದು ಕಣ್ಮರೆಯಾಗುತ್ತಿರುವುದು ಬೇಸರದ ಸಂಗತಿ ಎಂದು ಜಾನಪದ ಪರಿಷತ್ತು ಜಿಲ್ಲಾಧ್ಯಕ್ಷ ಜಿ. ಬಿ. ಸುರೇಶ್ ಅಭಿಪ್ರಾಯ ಪಟ್ಟರು.
ತಾಲೂಕು ಗರ್ಜೆ ಗ್ರಾಮದಲ್ಲಿ ಚಿಕ್ಕಮಗಳೂರು ಜಿಲ್ಲಾ ಕರ್ನಾಟಕ ಜಾನಪದ ಪರಿಷತ್ತು ಘಟಕ ಮತ್ತು ಗರ್ಜೆ ಶ್ರೀ ಬನಶಂಕರಿ ಕೃಪಾಪೋಷಿತ ನಾಟಕ ಮಂಡಳಿ ಆಶ್ರಯದಲ್ಲಿ ಶ್ರೀದೇವಿ ಮಹಾತ್ಮೆ/ ಮಹಿಷಾಸುರ ಮತ್ತು ರಕ್ತ ಬೀಜಾಸುರರ ಪ್ರತಾಪ ಎಂಬ ಪೌರಾಣಿಕ ನಾಟಕಗಳ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು. ಗ್ರಾಮೀಣ ಜನರಲ್ಲಿ ಒಗ್ಗಟ್ಟು, ಐಕ್ಯತೆ, ಶಾಂತಿ ಸೌಹಾರ್ದತೆ ಉಂಟು ಮಾಡಿ ಮೌಲ್ಯಾದಾರಿತ ಸಮಾಜ ನಿರ್ಮಾಣ ಮಾಡುವಲ್ಲಿ ಬಯಲು ನಾಟಕಗಳು ಪ್ರಮುಖ ಪಾತ್ರ ವಹಿಸುತ್ತವೆ. ಇಂದಿನ ಯುವಕರು ಬಯಲು ನಾಟಕ ಕಲೆಗಳಿಗೆ ಹೆಚ್ಚು ಪ್ರೋತ್ಸಾಹ ನೀಡಬೇಕು ಮತ್ತು ನಾಟಕಗಳ ಅಭಿರುಚಿ ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.ಶರಣ ಸಾಹಿತ್ಯ ಪರಿಷತ್ತಿನ ಮುಖಂಡ ದೇವಾನಂದ ಮಾತನಾಡಿ, ಮೊಬೈಲ್, ಟಿವಿ, ಪ್ರಧಾನವಾಗಿರುವ ಇಂದಿನ ಗ್ರಾಮೀಣ ಸಮಾಜದಲ್ಲಿ ಗರ್ಜೆ ಗ್ರಾಮಸ್ಥರು ಶ್ರೀದೇವಿ ಮಹಾತ್ಮೆ ಎಂಬ ಪೌರಾಣಿಕ ನಾಟಕವನ್ನು ಹಮ್ಮಿಕೊಂಡು ಉಳಿದವರಿಗೆ ಮಾದರಿ ಯಾಗಿದ್ದಾರೆ. ಹಿಂದಿನ ದಿನಗಳಲ್ಲಿ ಪ್ರತಿ ಊರಿಗೂ ಒಂದೊಂದು ನಾಟಕ ಹಮ್ಮಿಕೊಳ್ಳುತ್ತಿದ್ದರು. ಈ ಶ್ರೇಷ್ಠ ಕಲೆ ಮಾಯ ವಾಗುತ್ತಿರುವುದು ದುರಂತದ ಸಂಗತಿ ಎಂದು ಅಭಿಪ್ರಾಯಿಸಿದರು.
ದೇವಾಂಗ ಸಮಾಜದ ಅಧ್ಯಕ್ಷ ಸುರೇಶ್ ಮಾತನಾಡಿ, ಇಂದಿನ ಸಮಾಜದಲ್ಲಿ ಧಾರ್ಮಿಕ ಸಹಿಷ್ಣುತೆ, ನ್ಯಾಯ, ನೀತಿ, ತ್ಯಾಗ, ಮುಂತಾದ ಗುಣಗಳನ್ನು ಬೆಳೆಸುವಲ್ಲಿ ಬಯಲು ನಾಟಕಗಳು ಪ್ರಮುಖ ಪಾತ್ರ ವಹಿಸುತ್ತವೆ. ಈ ನಾಟಕಗಳು ಮುಂದಿನ ಪೀಳಿಗೆಗೆ ಮುಂದುವರಿದರೆ ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗುತ್ತವೆ ಎಂದರು.ಯುವ ಮುಖಂಡ ಚೇತನ್ ಮಾತನಾಡಿ, ಇಂದಿನ ಜನ ಪಾಶ್ಚತ್ಯ ಸಂಸ್ಕೃತಿಗೆ ಹೆಚ್ಚು ಮರುಳಾಗದೆ ಉತ್ತಮ ನೈತಿಕ ಮೌಲ್ಯ ವುಳ್ಳ ಬಯಲು ನಾಟಕಗಳನ್ನು ಪ್ರತಿ ಗ್ರಾಮದಲ್ಲೂ ಹಮ್ಮಿಕೊಳ್ಳಬೇಕಾಗಿದೆ. ನಮ್ಮ ಪೂರ್ವಿಕರು ಮನರಂಜನೆಗಾಗಿ ಭಕ್ತಿ ಭಾವ ಪೂರ್ಣ ನಾಟಕಗಳನ್ನು ಹಮ್ಮಿಕೊಳ್ಳುತ್ತಿದ್ದರು ಎಂದು ಹೇಳಿದರು.
ಕಜಾಪದ ಕಡೂರು ತಾಲೂಕು ಅಧ್ಯಕ್ಷ ಮತ್ತು ಹಾರ್ಮೋನಿಯಂ ಮಾಸ್ಟರ್ ಜಗದೀಶ್ವರ ಆಚಾರ್ ದೇವಿ ಮಹಾತ್ಮೆ ನಾಟಕ ನಿರ್ದೇಶಿಸಿದ್ದರು. ಕಾರ್ಯಕ್ರಮದಲ್ಲಿ ಕಜಾಪ ಕಲಾವಿದರಿಗೆ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷ ಮಲ್ಲಿಕಾರ್ಜುನ, ಗ್ರಾಮದ ಮುಖಂಡ ಮರುಳ ಸಿದ್ದಪ್ಪ, ನಾಟಕ ಮಂಡಳಿ ಅಧ್ಯಕ್ಷ ಧನಂಜಯ, ಗಿರೀಶ್, ಶಿವಣ್ಣ, ಜಯಣ್ಣ,ಸಾಹಿತಿ ಬಿಳಿಗಿರಿ ವಿಜಯಕುಮಾರ್, ಚಿಕ್ಕನಲ್ಲೂರು ಜಯಣ್ಣ, ಲೋಕೇಶ್, ಗ್ರಾಮದ ಗುಡಿ ಗೌಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.-- ಬಾಕ್ಸ್ --
ಮನರಂಜನೆಯ ರಸದೌತಣನಾಟಕ ಕಲಾವಿದರು ರಂಗುರಂಗಿನ ವೇಷಭೂಷಣ ಮತ್ತು ಮನೋಜ್ಞ ಅಭಿನಯದ ಮೂಲಕ ಪ್ರೇಕ್ಷಕರನ್ನು ಇಡೀ ರಾತ್ರಿ ಹಿಡಿದಿಟ್ಟುಕೊಂಡು ಮನರಂಜನೆಯ ರಸದೌತಣ ನೀಡಿದರು. ಕಲಾವಿದರ ಅದ್ಭುತ ನಟನೆ, ಚುರುಕು ಸಂಭಾಷಣೆ. ನವಿರಾದ ಹಾಸ್ಯ ಪ್ರೇಕ್ಷಕರನ್ನು ಮಂತ್ರ ಮುಗ್ಧರನ್ನಾಗಿಸಿ ಪೌರಾಣಿಕ ಲೋಕಕ್ಕೆ ಕರೆದೊಯ್ದ ಅನುಭವ ನೀಡಿತು.
18ಕೆಕೆಡಿಯು3.18ಕೆಕೆಡಿಯು3ಎ.ಕಡೂರು ತಾಲೂಕು ಗರ್ಜೆ ಗ್ರಾಮದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಚಿಕ್ಕಮಗಳೂರು ಜಿಲ್ಲಾ ಘಟಕ ಮತ್ತು ಶ್ರೀ ಬನಶಂಕರಿ ಕೃಪಾಪೋಷಿತ ನಾಟಕ ಮಂಡಳಿ ಗರ್ಜೆ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀದೇವಿ ಮಹಾತ್ಮೆ ಅಥವಾ ಮಹಿಷಾಸುರ ಮತ್ತು ರಕ್ತ ಬೀಜಾಸುರರ ಪ್ರತಾಪ ಎಂಬ ಪೌರಾಣಿಕ ನಾಟಕ ಪ್ರದರ್ಶನ ನಡೆಯಿತು.