ಸಾರಾಂಶ
ವಿದ್ಯಾರ್ಥಿಗಳು ಆಯುರ್ವೇದ ವೈದ್ಯಕೀಯ ಕ್ಷೇತ್ರಕ್ಕೆ ರಾಜೀವ ಗಾಂಧಿ ಆರೋಗ್ಯ ವಿವಿ ನೀಡುತ್ತಿರುವ ಪ್ರೋತ್ಸಾಹಕ್ಕೆ ಶಿಕ್ಷಕರು, ವಿದ್ಯಾರ್ಥಿಗಳು ಶ್ರಮವಹಿಸಿ ಅಭ್ಯಸಿಸಿ ಉನ್ನತ ಹೆಸರು ತರಬೇಕೆಂದು ಪ್ರಾಚಾರ್ಯ ಡಾ. ಪ್ರಶಾಂತ್. ಎ.ಎಸ್. ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಹುಬ್ಬಳ್ಳಿ:
ವೈದ್ಯಕೀಯ ವಿದ್ಯಾರ್ಥಿಗಳು ವೃತ್ತಿಧರ್ಮ, ಕಾರ್ಯಕ್ಷಮತೆ ಕಾಪಾಡಿಕೊಳ್ಳಬೇಕು. ವೈದ್ಯಕೀಯ ಕ್ಷೇತ್ರಕ್ಕೆ ಸವಾಲಾಗಿ ಬರುತ್ತಿರುವ ರೋಗಗಳಿಗೆ ಹೆಚ್ಚು ಸಂಶೋಧನೆಯತ್ತ ಗಮನಹರಿಸುವಂತೆ ಹುಬ್ಬಳ್ಳಿ ಆಯುರ್ವೇದ ಸೇವಾ ಸಮಿತಿ ಆಡಳಿತ ಮಂಡಳಿ ಉಪಸಭಾಪತಿ ಡಾ. ಕೃಷ್ಣಪ್ರಸಾದ ಸಲಹೆ ನೀಡಿದರು.ಅವರು ಹಳೇ ಹುಬ್ಬಳ್ಳಿ ಹೆಗ್ಗೇರಿಯಲ್ಲಿರುವ ಆಯುರ್ವೇದ ಮಹಾವಿದ್ಯಾಲಯದಿಂದ ಇಲ್ಲಿನ ಗೋಕುಲ ರಸ್ತೆಯಲ್ಲಿರುವ ವಾಸವಿ ಮಹಲ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಘಟಿಕೋತ್ಸವ ಉದ್ಘಾಟಿಸಿ ಮಾತನಾಡಿದರು.
ಹುಬ್ಬಳ್ಳಿ ಆಯುರ್ವೇದ ಸೇವಾ ಸಮಿತಿ ಸಭಾಪತಿ ಗೋವಿಂದ ಜೋಶಿ ಮಾತನಾಡಿ, ಆಯುರ್ವೇದಕ್ಕೆ ಕೇಂದ್ರ ಸರ್ಕಾರ ನೀಡುತ್ತಿರುವ ಸೌಲಭ್ಯವನ್ನು ಎಲ್ಲ ವಿದ್ಯಾರ್ಥಿಗಳು ಸದುಪಯೋಗ ಪಡೆದು ಹಾಗೂ ಈ ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆಗೆ ಆಸಕ್ತಿ ವಹಿಸಿ ದೇಶದ ಉನ್ನತಿಗೆ ಶ್ರಮಿಸುವಂತೆ ಕರೆ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಪ್ರಶಾಂತ್. ಎ.ಎಸ್. ಮಾತನಾಡಿ, ವಿದ್ಯಾರ್ಥಿಗಳು ಆಯುರ್ವೇದ ವೈದ್ಯಕೀಯ ಕ್ಷೇತ್ರಕ್ಕೆ ರಾಜೀವ ಗಾಂಧಿ ಆರೋಗ್ಯ ವಿವಿ ನೀಡುತ್ತಿರುವ ಪ್ರೋತ್ಸಾಹಕ್ಕೆ ಶಿಕ್ಷಕರು, ವಿದ್ಯಾರ್ಥಿಗಳು ಶ್ರಮವಹಿಸಿ ಅಭ್ಯಸಿಸುವ ಮೂಲಕ ಮಹಾವಿದ್ಯಾಲಯಕ್ಕೆ ಕೀರ್ತಿ ತರುವಂತವರಾಗಿ ಎಂದು ಸಲಹೆ ನೀಡಿದರು.
ಸಮಿತಿ ಕಾರ್ಯದರ್ಶಿ ಸಂಜೀವ ಜೋಶಿ, ಖಜಾಂಚಿ ಎಸ್.ಆರ್. ಮಾಮಲೇದೇಶಪಾಂಡೆ, ಡಾ. ಪ್ರದೀಪ ದೇಸಾಯಿ, ಸ್ನಾತಕೋತ್ತರ ವಿಭಾಗದ ಡೀನ ಡಾ. ಜೆ.ಆರ್. ಜೋಶಿ, ಹಿರಿಯ ಪ್ರಾಧ್ಯಾಪಕ ಡಾ. ಎಸ್. ಜಿ. ಚವ್ಹಾಣ, ಪ್ರಾಧ್ಯಾಪಕರಾದ ಡಾ. ಸಿ. ತ್ಯಾಗರಾಜ, ಡಾ. ಎಂ.ಎಚ್. ನಾಯ್ಕ, ಡಾ. ಮಹಾವೀರ ಹಾವೇರಿ, ಹಿರಿಯ ವೈದ್ಯೆ ಡಾ. ಉಷಾ ಹೊಸಮನಿ ಸೇರಿದಂತೆ ಶಿಕ್ಷಕ-ಶಿಕ್ಷಕೇತರ ಮತ್ತು ಆಸ್ಪತ್ರೆ ಸಿಬ್ಬಂದಿ, ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರಿದ್ದರು.