ವಿಶೇಷ ಅಗತ್ಯತೆವುಳ್ಳ ಮಕ್ಕಳಿಗೆ ವೈದ್ಯಕೀಯ ಸಹಕಾರ

| Published : Nov 07 2024, 11:52 PM IST

ವಿಶೇಷ ಅಗತ್ಯತೆವುಳ್ಳ ಮಕ್ಕಳಿಗೆ ವೈದ್ಯಕೀಯ ಸಹಕಾರ
Share this Article
  • FB
  • TW
  • Linkdin
  • Email

ಸಾರಾಂಶ

ವಿಕಲಚೇತನ ಮಕ್ಕಳು ಕೂಡ ಎಲ್ಲ ಚಟುವಟಿಕೆಯಲ್ಲಿ ತೊಡಗಲು ತೊಂದರೆ ಅನುಭವಿಸುತ್ತಾರೆ. ಅವರಿಗೆ ಅಗತ್ಯ ಚಟುವಟಿಕೆ ಹಮ್ಮಿಕೊಂಡು ನಿರೀಕ್ಷಿತ ಮಟ್ಟಕ್ಕೆ ತಲುಪುವಂತೆ ಮಾಡುವುದೇ ಸಮನ್ವಯ ಶಿಕ್ಷಣದ ಆಶಯ.

ಧಾರವಾಡ:

ವಿವಿಧ ಬಗೆಯ ದೈಹಿಕ ಹಾಗೂ ಮಾನಸಿಕ ದೋಷಗಳನ್ನು ಹೊಂದಿದ ಮಕ್ಕಳನ್ನು ಗುರುತಿಸಿ ರಾಜ್ಯ ಸರ್ಕಾರ ವೈದ್ಯಕೀಯ ತಪಾಸಣಾ ಶಿಬಿರ ನಡೆಸುವ ಮೂಲಕ ಅಂತಹ ಮಕ್ಕಳಿಗೆ ಚಿಕಿತ್ಸೆ ನೀಡುವುದೇ ಮೌಲ್ಯಾಂಕನ ಶಿಬಿರದ ಉದ್ದೇಶ ಎಂದು ಶಿಕ್ಷಣ ಇಲಾಖೆಯ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ಎಸ್.ಎಂ. ಹುಡೇದಮನಿ ಹೇಳಿದರು.

ಇಲ್ಲಿಯ ಶಹರ, ಗ್ರಾಮೀಣ, ಕಲಘಟಗಿ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯಗಳ ಆಶ್ರಯದಲ್ಲಿ ಸರ್ಕಾರಿ ಶಿಕ್ಷಕಿಯರ ತರಬೇತಿ ಸಂಸ್ಥೆಯಲ್ಲಿ ಹಮ್ಮಿಕೊಂಡ ವಿಶೇಷ ಅಗತ್ಯತೆವುಳ್ಳ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಶಿಬಿರ ಉದ್ಘಾಟಿಸಿದ ಅವರು, ಪ್ರತಿ ವರ್ಷವೂ ವೈದ್ಯಕೀಯ ತಪಾಸಣಾ ಶಿಬಿರವನ್ನು ಶಾಲಾ ಶಿಕ್ಷಣ ಇಲಾಖೆಯಿಂದ ಆಯೋಜಿಸಲಾಗುತ್ತಿದೆ. ತಜ್ಞ ವೈದ್ಯರ ತಂಡವು ಮಕ್ಕಳಿಗೆ ಸೂಚಿಸುವ ಅಗತ್ಯವುಳ್ಳ ಸಾಧನ ಸಲಕರಣೆಗಳನ್ನು ಪೂರೈಸುವ ಕಾರ್ಯವು ಆದ್ಯತೆಯ ಮೇಲೆ ಯೋಜನೆಯ ಮಿತಿಗೆ ಒಳಪಟ್ಟು ನೀಡಲಾಗುತ್ತಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕಕುಮಾರ ಸಿಂದಗಿ ಮಾತನಾಡಿ, ಎಲ್ಲರಂತೆ ವಿಕಲಚೇತನ ಮಕ್ಕಳು ಕೂಡ ಎಲ್ಲ ಚಟುವಟಿಕೆಯಲ್ಲಿ ತೊಡಗಲು ತೊಂದರೆ ಅನುಭವಿಸುತ್ತಾರೆ. ಅವರಿಗೆ ಅಗತ್ಯ ಚಟುವಟಿಕೆ ಹಮ್ಮಿಕೊಂಡು ನಿರೀಕ್ಷಿತ ಮಟ್ಟಕ್ಕೆ ತಲುಪುವಂತೆ ಮಾಡುವುದೇ ಸಮನ್ವಯ ಶಿಕ್ಷಣದ ಆಶಯ ಎಂದು ಹೇಳಿದರು.

ಶಹರ ಕ್ಷೇತ್ರ ಸಮನ್ವಯಾಧಿಕಾರಿ ಮಂಜುನಾಥ ಅಡಿವೇರ ಮಾತನಾಡಿ, ವಿಶೇಷ ಅಗತ್ಯವುಳ್ಳ ಮಕ್ಕಳಲ್ಲಿ ವಿಶೇಷ ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿ, ಪ್ರೋತ್ಸಾಹಿಸುವುದು ಶಿಕ್ಷಕರು ಮತ್ತು ಪೋಷಕರ ಜವಾಬ್ದಾರಿ. ಸಾಮಾನ್ಯ ಮಕ್ಕಳೊಂದಿಗೆ ಕಲಿಯುವಾಗ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸುವಲ್ಲಿ ಅವರು ಕೆಲ ಸಮಸ್ಯೆ ಎದುರಿಸುತ್ತಾರೆ. ಅವುಗಳ ನಿವಾರಣೆಗೆ ನಾವು ಮುಂದಾಗಬೇಕು ಎಂದರು.

ಇಲಾಖೆ ಅಧಿಕಾರಿಗಳಾದ ರವಿಕುಮಾರ ಬಾರಾಟಕ್ಕೆ, ಪ್ರಕಾಶ ಭೂತಾಳಿ, ಕುಮಾರ ಕೆ.ಎಫ್‌., ಬಸವರಾಜ ಮ್ಯಾಗೇರಿ, ವೈದ್ಯರಾದ ವಿಕ್ರಮಕುಮಾರ, ಅಶೋಕ ಕೋರಿ, ಅಲ್ಲಾಭಕ್ಷ ಯಾದವಾಡ, ಮಾರುತಿ ಕರಡಿ, ಅಂಜನಾ ನಾಮದಾರ, ಬಸವರಾಜ್ ನಿಡುಗುಂದಿ, ಮನಃಶಾಸ್ತ್ರಜ್ಞರಾದ ಮಲ್ಲಿಕಾ ಬಿ., ಲಲಿತಾ ಹೊನ್ನವಾಡ ಮತ್ತಿತರರು ಇದ್ದರು. 282 ಮಕ್ಕಳು ಶಿಬಿರದಲ್ಲಿದ್ದು, ದೃಷ್ಟಿ ದೋಷವುಳ್ಳ , ಬಹುವಿಕಲತೆ ಉಳ್ಳ, ಮಾತು ಮತ್ತು ಶ್ರವಣ ದೋಷವುಳ್ಳ, ದೈಹಿಕ ಮತ್ತು ಚಲನ ದೋಷವುಳ್ಳ, ಬುದ್ಧಿ ದೋಷವುಳ್ಳ ಮಕ್ಕಳನ್ನು ಗುರುತಿಸಿ ಚಿಕಿತ್ಸೆ ನೀಡಲಾಯಿತು. ಜೊತೆಗೆ ಸಾಧನ-ಸಲಕರಣೆ ಪಡೆಯಲು ಅರ್ಹರೆಂದು ಗುರುತಿಸಲಾಯಿತು.