ಸಾರಾಂಶ
10 ಮೆಡಿಕಲ್ ಶಾಪ್ ಗಳಿಗೆ ಗ್ರಾಹಕರ ಸೋಗಿನಲ್ಲಿ ಪೊಲೀಸರು ಭೇಟಿ ನೀಡಿ ಪರಿಶೀಲನೆ
ಕನ್ನಡಪ್ರಭ ವಾರ್ತೆ ಮೈಸೂರು
ನಗರದಲ್ಲಿ ಡ್ರಗ್ಸ್ ತಯಾರಿಕಾ ಘಟಕ ಪತ್ತೆ ಪ್ರಕರಣ ಹಿನ್ನಲೆಯಲ್ಲಿ ಮೂರನೇ ದಿನವೂ ಕಾರ್ಯಾಚರಣೆ ಮುಂದುವರೆಸಿರುವ ಮೈಸೂರು ನಗರ ಘಟಕದ ಪೊಲೀಸರು, ಮೆಡಿಕಲ್ ಶಾಪ್ ಗಳ ಮೇಲೆ ದಾಳಿ ನಡೆಸಿ ಪರಿಶೀಲಿಸಿದ್ದಾರೆ.ವೈದ್ಯರ ಚೀಟಿ ಇಲ್ಲದೇ ಕೆಲ ಔಷಧಿಗಳನ್ನು ನೀಡಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಲು ಮಂಗಳವಾರ ರಾತ್ರಿ ಉದಯಗಿರಿ, ಮಂಡಿ ಮತ್ತು ಲಷ್ಕರ್ ಠಾಣೆ ವ್ಯಾಪ್ತಿಯ 10 ಮೆಡಿಕಲ್ ಶಾಪ್ ಗಳಿಗೆ ಗ್ರಾಹಕರ ಸೋಗಿನಲ್ಲಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಈ ವೇಳೆ ಒಂದು ಮೆಡಿಕಲ್ ಶಾಪ್ ನಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿಗೆ ಔಷಧಿಯನ್ನು ದಾಸ್ತಾನಿರಿಸಿದ್ದ ಮೆಡಿಕಲ್ ಶಾಪ್ ಅನ್ನು ಪತ್ತೆ ಹಚ್ಚಿದ್ದು, ಅದರ ನೋಂದಣಿಗೆ ರದ್ದಿಗೆ ಡ್ರಗ್ ಕಂಟ್ರೋಲರ್ ಗೆ ಪತ್ರ ಬರೆದಿದ್ದಾರೆ.ಅಲ್ಲದೆ, ನಗರದ ವಿವಿಧೆಡೆ ದಾಳಿ ನಡೆಸಿರುವ ಪೊಲೀಸರು, 6 ಮಂದಿ ಡ್ರಗ್ಸ್ ಪೆಡ್ಲರ್ ಗಳನ್ನು ಬಂಧಿಸಿದ್ದಾರೆ. ಮಾದಕ ವಸ್ತು ಸೇವನೆ ಮಾಡಿದ್ದ 28 ಮಂದಿಯನ್ನು ಪತ್ತೆ ಹಚ್ಚಿ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಕಾರ್ಯಾಚರಣೆ ವೇಳೆ 5 ಗ್ರಾಂ ಎಂಡಿಎಂಎ, 584 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.ಹಾಗೆಯೇ, ಜಯಲಕ್ಷ್ಮೀಪುರಂ ಠಾಣೆ ವ್ಯಾಪ್ತಿಯಲ್ಲಿ ಐದು ಬಾಯ್ಸ್ ಪಿಜಿಗಳ ಮೇಲೂ ದಾಳಿ ನಡೆಸಿ ಶೋಧ ಕಾರ್ಯ ನಡೆಸಲಾಗಿದೆ.ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಡಿಸಿಪಿಗಳಾದ ಆರ್.ಎನ್. ಬಿಂದು ಮಣಿ, ಕೆ.ಎಸ್. ಸುಂದರ್ ರಾಜ್, ಎಸಿಪಿಗಳಾದ ಅಶ್ವತ್ಥನಾರಾಯಣ್, ರವಿಪ್ರಸಾದ್, ಶಿವಶಂಕರ್, ಇನ್ಸ್ ಪೆಕ್ಟರ್ ಗಳು ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.