ವಿಜಯಪುರ: ಪ್ರಸ್ತುತ ಬದುಕಿನಲ್ಲಿ ಮನುಷ್ಯನನ್ನು ಕಾಡುತ್ತಿರುವ ಒತ್ತಡ, ಉದ್ವೇಗ ಮತ್ತು ಆತಂಕಗಳ ನಿವಾರಣೆಗೆ ಧ್ಯಾನ ಹಾಗೂ ಯೋಗಾಭ್ಯಾಸ ಸಹಕಾರಿಎಂದು ಶ್ರೀ ಯೋಗಿ ನಾರೇಯಣ ಮಠದ ಪ್ರವಚನಕಾರ ಶ್ರೀ ಆನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.
ಪಟ್ಟಣದ ಶ್ರೀ ಕೃಷ್ಣ ಸತ್ಸಂಗ ಯತೀಂದ್ರ ಸೇವಾ ಟ್ರಸ್ಟ್, ಶ್ರೀರಂಗ ಗೀತಾ ಸತ್ಸಂಗ ಸೇವಾ ಬಳಗದ ಸಹಯೋಗದಲ್ಲಿ ಕೈವಾರ ತಾತಯ್ಯನವರ ೨೮ನೇ ಪಾದುಕಾ ಪೂಜಾ ಮಹೋತ್ಸವದಲ್ಲಿ ಪ್ರವಚನ ನೀಡಿದ ಶ್ರೀಗಳು, ನಿಯಮಿತವಾಗಿ ಉಸಿರಾಟದ ಮೇಲೆ ನಿಯಂತ್ರಣ ಸಾಧಿಸುವುದರಿಂದ ದೇಹದ ಆರೋಗ್ಯದ ಸಮತೋಲನ ಕಾಯ್ದುಕೊಳ್ಳಬಹುದು ಎಂದರು.ಮನಸ್ಸಿನಲ್ಲಿಯೇ ದೇವರ ಅಥವಾ ಗುರುಗಳ ರೂಪ ಕಲ್ಪಿಸಿಕೊಂಡು, ಎಲ್ಲ ಉಪಚಾರಗಳನ್ನು ಅರ್ಪಿಸುವುದೇ ಮಾನಸ ಪೂಜೆ. ನಾವು ನಿತ್ಯ ಮಾಡುವ ಪ್ರತ್ಯಕ್ಷ (ಸ್ಥೂಲ) ಪೂಜೆಯ ಸಂದರ್ಭದಲ್ಲಿ ಮನಸ್ಸು ಬೇರೆಡೆ ಭ್ರಮಿಸುವ ಸಾಧ್ಯತೆ ಇರುತ್ತದೆ. ಆದರೆ ಮಾನಸ ಪೂಜೆಯಿಂದ ಮನಸ್ಸು ಸ್ಥಿರ, ಏಕಾಗ್ರತೆ ಸಿದ್ಧಿಸುತ್ತದೆ. ಇದಕ್ಕೆ ಸ್ಥಳ, ಕಾಲದ ಬಂಧನವಿಲ್ಲ. ಉದ್ಯೋಗ, ವ್ಯವಸಾಯ ಅಥವಾ ಪ್ರವಾಸದ ಕಾರಣದಿಂದ ಪೂಜೆ ಮಾಡಲು ಸಮಯ ಸಿಗದವರು ಎಲ್ಲಿದ್ದಲ್ಲೇ ಮಾನಸ ಪೂಜೆ ಮಾಡಬಹುದು ಎಂದು ವಿವರಿಸಿದರು.
ಇದೇ ಸಂದರ್ಭದಲ್ಲಿ ಸಂಗೀತ ನಿರ್ದೇಶಕ ಎಂ.ವಿ.ನಾಯ್ಡು ಹಾಗೂ ತಬಲಾ ವಾದಕ ಅನಿಲ್ ಕುಮಾರ್ ವಾದ್ಯ ಸಹಕಾರದೊಂದಿಗೆ ಸಿ.ಅಶ್ವತ್ ಗುರೂಜಿ ಬಳಗ, ಶ್ರೀ ವೇಣುಗೋಪಾಲಸ್ವಾಮಿ ಭಜನೆ ಬಳಗ ಹಾಗೂ ಗಂಟಸಾಲ ಲಕ್ಷ್ಮಿಪತಿ ನರಸಿಂಹಪ್ಪ ಅವರು ಶ್ರೀರಾಮ ನಾಮಸ್ಮರಣೆ ಭಜನೆ ನಡೆಸಿಕೊಟ್ಟರು.ಕಾರ್ಯಕ್ರಮದ ಸಾನ್ನಿಧ್ಯವನ್ನು ರಮೇಶ್ ಸ್ವಾಮೀಜಿ ವಹಿಸಿದ್ದರು. ಪುರಸಭಾಧ್ಯಕ್ಷೆ ಭವ್ಯ ಮಹೇಶ್, ಸದಸ್ಯರಾದ ರಾಧಮ್ಮ, ಧಾರ್ಮಿಕ ಮುಖಂಡ ವೆಂಕಟೇಶ್, ಕೇಶವಪ್ಪ, ಸಮಾಜ ಸೇವಕರಾದ ಪ್ರಕಾಶ್, ದೇವಾಲಯದ ಪ್ರಧಾನ ಅರ್ಚಕರಾದ ರಘು, ಪುರಸಭೆ ಮಾಜಿ ಉಪಾಧ್ಯಕ್ಷರಾದ ಎನ್. ನಾರಾಯಣಸ್ವಾಮಿ, ರಾಮದಾಸ್, ಅನಿತಾ, ರತ್ನಮ್ಮ ಹಾಗೂ ಬಳಗದ ಪದಾಧಿಕಾರಿಗಳು ಉಪಸ್ಥಿತರಿದ್ದರು.