ಭಾರತ ಮತ್ತು ಯುನೈಟೆಡ್‌ ಕಿಂಗ್‌ಡಮ್‌ ನಡುವಿನ ಸಮಗ್ರ ಅರ್ಥಿಕ ಮತ್ತು ವಾಣಿಜ್ಯ ಒಪ್ಪಂದ (ಸೀಟಾ) ಶೀಘ್ರವೇ ಇಂಗ್ಲೆಂಡ್‌ನ ಸಂಸತ್ತಿನಲ್ಲಿ ಅನುಮೋದನೆ ಪಡೆಯುವ ನಿರೀಕ್ಷೆ ಇದೆ. ಇದರಿಂದಾಗಿ ಕರಾವಳಿ ಸೇರಿದಂತೆ ಕರ್ನಾಟಕ ರಾಜ್ಯದ ಉದ್ಯಮಗಳಿಗೂ ಇಂಗ್ಲೆಂಡ್‌ನಲ್ಲಿ ಹೊಸ ಅವಕಾಶಗಳು ಸೃಷ್ಟಿಯಾಗುವ ನಿರೀಕ್ಷೆ ಇದೆ

ಮಂಗಳೂರು: ಭಾರತ ಮತ್ತು ಯುನೈಟೆಡ್‌ ಕಿಂಗ್‌ಡಮ್‌ ನಡುವಿನ ಸಮಗ್ರ ಅರ್ಥಿಕ ಮತ್ತು ವಾಣಿಜ್ಯ ಒಪ್ಪಂದ (ಸೀಟಾ) ಶೀಘ್ರವೇ ಇಂಗ್ಲೆಂಡ್‌ನ ಸಂಸತ್ತಿನಲ್ಲಿ ಅನುಮೋದನೆ ಪಡೆಯುವ ನಿರೀಕ್ಷೆ ಇದೆ. ಇದರಿಂದಾಗಿ ಕರಾವಳಿ ಸೇರಿದಂತೆ ಕರ್ನಾಟಕ ರಾಜ್ಯದ ಉದ್ಯಮಗಳಿಗೂ ಇಂಗ್ಲೆಂಡ್‌ನಲ್ಲಿ ಹೊಸ ಅವಕಾಶಗಳು ಸೃಷ್ಟಿಯಾಗುವ ನಿರೀಕ್ಷೆ ಇದೆ ಎಂದು ಬ್ರಿಟಿಷ್‌ ಡೆಪ್ಯುಟಿ ಹೈ ಕಮಿಷನರ್‌(ಕೇರಳ​-ಕರ್ನಾಟಕ) ಚಂದ್ರು ಅಯ್ಯರ್ ತಿಳಿಸಿದ್ದಾರೆ.ಮಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಭಯ ದೇಶಗಳ ನಡುವಿನ ಒಪ್ಪಂದ 6 ಲಕ್ಷ ಉದ್ಯೋಗಗಳಿಗೆ ಬೆಂಬಲ ನೀಡಲಿದೆ. ಯುಕೆ​-ಭಾರತ ವಾಣಿಜ್ಯ ಒಪ್ಪಂದದಿಂದ ಶೇ. 99ರಷ್ಟು ಯುಕೆ ತೆರಿಗೆ ಮತ್ತು ಶೇ. 90ರಷ್ಟು ಭಾರತದ ತೆರಿಗೆಗಳನ್ನು ಸಡಿಲಗೊಳಿಸಲಾಗುವುದು. ಈ ಮೂಲಕ ಉಭಯ ದೇಶಗಳ ನಡುವೆ ರಫ್ತು ಹೆಚ್ಚಳಗೊಳ್ಳಲಿದೆ ಎಂದರು.

ಕರಾವಳಿ ಉತ್ಪನ್ನಗಳಿಗೆ ಯುಕೆ ಮಾರ್ಕೆಟ್‌:

ಸೀಟಾ ಒಪ್ಪಂದಕ್ಕೆ ಭಾರತದ ಸಂಸತ್ತಿನ ಅನುಮೋದನೆ ಈಗಾಗಲೇ ಸಿಕ್ಕಿದೆ. ಮುಂದೆ ಇಂಗ್ಲೆಂಡ್‌ನ ಸಂಸತ್ತು ಅಂತಿಮ ಅನುಮೋದನೆ ನೀಡಿದ ಬಳಿಕ ಉಭಯ ರಾ‍ಷ್ಟ್ರಗಳ ವ್ಯಾಪಾರೋದ್ಯಮ ಅವಕಾಶಗಳು ಇನ್ನಷ್ಟು ಪ್ರಗತಿ ಕಾಣಲಿವೆ. ಒಪ್ಪಂದಕ್ಕೆ ಮೊದಲು ಉಭಯ ದೇಶಗಳ ನಡುವಿನ ವ್ಯಾಪಾರ 44 ಬಿಲಿಯನ್ ಡಾಲರ್ ಇದ್ದುದು ಬಳಿಕ 47ಕ್ಕೆ ಏರಿಕೆ ಕಂಡಿದೆ. ಎಐ, ಸೆಮಿಕಂಡಕ್ಟರ್ಸ್, ಕ್ರಿಟಿಕಲ್ ಮಿನರಲ್ಸ್, ಕ್ವಾಂಟಂ ಫಿಸಿಕ್ಸ್, ಬಯೋಟೆಕ್ನಾಲಜಿ, ಫ್ಯೂಚರ್ ಟೆಲಿಕಾಂ ಕ್ಷೇತ್ರಗಳಲ್ಲಿ ಮುಖ್ಯವಾಗಿ ಸಹಭಾಗಿತ್ವಕ್ಕೆ ಈ ವಾಣಿಜ್ಯ ಒಪ್ಪಂದ ವೇದಿಕೆಯಾಗಲಿದೆ ಎಂದು ಅವರು ವಿವರಿಸಿದರು.

ಕರ್ನಾಟಕ ಕರಾವಳಿಯಲ್ಲಿ ಸಾಂಪ್ರದಾಯಿಕ ಮೀನುಗಾರಿಕೆ, ಅಡಕೆ, ಗೋಡಂಬಿಯಂತಹ ಸಾಂಪ್ರದಾಯಿಕ ಉತ್ಪನ್ನಗಳಿವೆ. ಅಲ್ಲದೆ ಐಡಿಯಲ್‌, ಹಾಂಗ್ಯೊ, ನ್ಯಾಚುರಲ್‌ ನಂತಹ ಐಸ್‌ ಕ್ರೀಂ ಕಂಪನಿಗಳಿವೆ. ಫಿನ್‌ಟೆಕ್‌, ಐಟಿಯಂತಹ ಪ್ರವರ್ಧಮಾನಕ್ಕೆ ಬರುತ್ತಿರುವ ಕ್ಷೇತ್ರಗಳಿವೆ. ಇವುಗಳೆಲ್ಲದಕ್ಕೂ ಇಂಗ್ಲೆಂಡ್‌ನಲ್ಲಿ ಅವಕಾಶ ಸಿಗಬಹುದಾಗಿದೆ ಎಂದರು.ಬಿಯಾಂಡ್‌ ಬೆಂಗಳೂರು:

ರಾಷ್ಟ್ರೀಯ ಶಿಕ್ಷಣ ನೀತಿಯಿಂದಾಗಿ ಇಗ್ಲೆಂಡ್‌ನನ ಶೈಕ್ಷಣಿಕ ಸಂಸ್ಥೆಗಳಿಗೆ ಭಾರತದಲ್ಲಿ ಅವಕಾಶ ಸಿಕ್ಕಿದೆ. ಅದರ ಭಾಗವಾಗಿ ಸೌದಾಂಪ್ಟನ್ ವಿವಿಯ ಕ್ಯಾಂಪಸ್ ದೆಹಲಿಗೆ ಬಂದಿದೆ. ಬೆಂಗಳೂರಿನಲ್ಲಿ ಲಿವರ್ ಪೂಲ್ ವಿವಿ ಕ್ಯಾಂಪಸ್ ಆರಂಭಗೊಂಡಿದ್ದು, ಮುಂದೆ ಲ್ಯಾಂಕೆಸ್ಟರ್ ವಿವಿ ಕ್ಯಾಂಪಸ್ ಕೂಡಾ ಬರಲಿದೆ ಎಂದರು.

ಈಗಾಗಲೇ ರೋಲ್ಸ್ ರಾಯ್, ಆರ್ಮ್ ಹೋಲ್ಡಿಂಗ್ಸ್, ನಾಟ್ ವೆಸ್ಟ್ ಕಂಪನಿಗಳು ಬೆಂಗಳೂರಿನಲ್ಲಿ ಕಾರ್ಯಾಚರಿಸುತ್ತಿವೆ. ಮುಂದೆ ಬಿಯಾಂಡ್ ಬೆಂಗಳೂರು ಯೋಜನೆಯಡಿಯಲ್ಲಿ ಮಂಗಳೂರಿನಲ್ಲೂ ಇಂತಹ ಸಂಸ್ಥೆಗಳ ಜಾಗತಿಕ ಸಾಮರ್ಥ್ಯ ಕೇಂದ್ರಗಳನ್ನು ಆರಂಭಿಸುವ ಬಗ್ಗೆಯೂ ಮಾತುಕತೆ ನಡೆಸಲಾಗುವುದು ಎಂದರು.ಶಿಕ್ಷಣ/ಪ್ರವಾಸೋದ್ಯಮ ಒಪ್ಪಂದ ಕರಾವ‍ಳಿ ಪ್ರದೇಶದ ವಿದ್ಯಾರ್ಥಿಗಳಿಗೆ ಇಂಗ್ಲೆಂಡ್‌ನ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗಕ್ಕೆ ವಿದ್ಯಾರ್ಥಿ ವೀಸಾ ಕಲ್ಪಿಸಲಾಗುತ್ತಿದೆ. ಕಳೆದೆರಡು ವರ್ಷಗಳಿಂದ ಯುವ ವೃತ್ತಿಪರರಿಗೆ 3,000 ವೀಸಾ ನೀಡಲಾಗುತ್ತಿದ್ದು, ಇನ್ನಷ್ಟು ಬೇಡಿಕೆ ಬರುತ್ತಿದೆ. ಆದರೆ ಬ್ರಿಟಿಷ್ ಯುವ ವೃತ್ತಿಪರರಿಂದ ಅಷ್ಟಾಗಿ ಸ್ಪಂದನೆ ಇಲ್ಲ, ಆದರೆ ಭವಿಷ್ಯದಲ್ಲಿ ಅಲ್ಲಿನ ವಿದ್ಯಾರ್ಥಿಗಳ ನಡುವೆ ಕರಾವಳಿ ಭಾಗದ ಎನ್‌ಐಟಿಕೆ ಸುರತ್ಕಲ್‌, ನಿಟ್ಟೆ, ಸಹ್ಯಾದ್ರಿಯಂತಹ ಗುಣಮಟ್ಟದ ಶಿಕ್ಷಣ, ಆವಿಷ್ಕಾರಕ್ಕೆ ಉತ್ತೇಜನ ನೀಡುವ ಸಂಸ್ಥೆಗಳ ಬಗ್ಗೆ ಮಾಹಿತಿ ವಿನಿಮಯ ಒಪ್ಪಂದಗಳಿಗೆ ವಿಫುಲ ಅವಕಾಶ ಇದೆ ಎಂದು ಚಂದ್ರು ಅಯ್ಯರ್‌ ಹೇಳಿದರು.ಕರಾವಳಿಯ ಪ್ರವಾಸೋದ್ಯಮವನ್ನು ಬ್ರಿಟಿಷರಿಗೆ ಪರಿಚಯಿಸುವ ಕೆಲಸ ಮಾಡಲಾಗುವುದು. ಇಲ್ಲಿಯ ಕಡಲ ತೀರಗಳು, ಸೀಫುಡ್, ಇಲ್ಲಿನ ವಾತಾವರಣವನ್ನು ಆನಂದಿಸುವ ಅವಕಾಶ ಅವರಿಗೆ ಸಿಗಬೇಕಿದೆ ಎಂದೂ ಅಯ್ಯರ್ ತಿಳಿಸಿದರು.------------------