ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಚಳ್ಳಕೆರೆ ತಾಲೂಕು ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕೆ.ಡಿ.ಕೋಟೆಯಲ್ಲಿ ದಲಿತರ ಮೇಲೆ ನಡೆದ ಹಲ್ಲೆಯ ಹಿನ್ನೆಲೆಯಲ್ಲಿ ಮಂಗಳವಾರ ಉಪ ವಿಭಾಗಾಧಿಕಾರಿ ಕಾಂತರಾಜ್, ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ನೇತೃತ್ವದಲ್ಲಿ ಅಧಿಕಾರಿಗಳು ಭೇಟಿ ನೀಡಿ ಗ್ರಾಮಸ್ಥರ ಜೊತೆ ಸಮಾಲೋಚನೆ ನಡೆಸಿದರು.ಜಿಲ್ಲಾಡಳಿತ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿ ಸೋಮವಾರ ಸಂತ್ರಸ್ಥರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸುರಿಯುವ ಮಳೆಯಲ್ಲೇ ಧರಣಿ ನಡೆಸಿದ್ದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಗ್ರಾಮಕ್ಕೆ ಬರುವುದಾಗಿ ಭರವಸೆ ನೀಡಿದ ಬಳಿಕ ಧರಣಿ ವಾಪಾಸ್ ಪಡೆದಿದ್ದರು.
ಭರವಸೆ ನೀಡಿದಂತೆ ಜಿಲ್ಲಾಡಳಿತದಿಂದ ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿತ್ತು.ಗ್ರಾಮಸ್ಥರು ಒಕ್ಕೋರಲಿನಿಂದ ದಲಿತರ ಮೇಲಿನ ದೌರ್ಜನ್ಯಕ್ಕೆ ಕಾರಣಗಳನ್ನು ಹೇಳುತ್ತಿದ್ದರು. ಇಷ್ಟು ದಿನ ಗ್ರಾಮದಲ್ಲಿ ಅಸಮಾನತೆ, ತಾರತಮ್ಯ ಇದ್ದಿದ್ದು ನಿಜ. ಇನ್ನು ಮುಂದೆ ಆ ರೀತಿ ಮಾಡುವುದಿಲ್ಲ ಎಂದು ಹೇಳಿದರೂ ಕಲ್ಯಾಣ ಮಂಟಪಕ್ಕೆ ಮಾತ್ರ ಅವಕಾಶ ಕೊಡುವುದಿಲ್ಲ ಎಂದಾಗ ಎಸಿ ಕಾಂತರಾಜ್ ಗರಂ ಆದರು.
ಗ್ರಾಮದಲ್ಲಿ ಶಾಂತಿ ನೆಲೆಸಬೇಕು. ಯಾರೊಬ್ಬರನ್ನೂ ಶೋಷಣೆಗೆ ಒಳಪಡಿಸುವುದು ಕಾನೂನು ಪ್ರಕಾರ ಶಿಕ್ಷೆಗೆ ಒಳಗಾಗಬೇಕಾಗುತ್ತದೆ. ಹಲ್ಲೆ ಮಾಡಿದ ಆರೋಪಿಗಳನ್ನು ದಸ್ತಗಿರಿ ಮಾಡಬೇಕು ಎಂದು ಎಸ್‌ಪಿ ರಂಜಿತ್ ಕುಮಾರ್ ಬಂಡಾರು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಮಲ್ಲಿಕಾರ್ಜುನ್ ಹಲ್ಲೆಗೊಳಗಾದ ದಲಿತ ಸಂತ್ರಸ್ಥರಿಗೆ ಕೃಷ್ಣಪ್ಪ ಹಾಗೂ ಬುಳ್ಳಪ್ಪ ಅವರಿಗೆ ತಲಾ ಐವತ್ತು ಸಾವಿರ ಚೆಕ್ ವಿತರಿಸಿದರು.
ಡಿವೈಎಸ್‌ಪಿ ಸತ್ಯನಾರಾಯಣ ರಾವ್, ವೃತ್ತ ನಿರೀಕ್ಷಕ ಹನುಮಂತಪ್ಪ ಶಿರೇಹಳ್ಳಿ, ಗ್ರಾಮಸ್ಥರು ಹಾಗೂ ಸಂತ್ರಸ್ಥರು ಇದ್ದರು. ದಲಿತ ಮುಖಂಡರಾದ ಟಿ. ವಿಜಯಕುಮಾರ್, ಭೀಮಣ್ಣ, ಹೊನ್ನೂರಸ್ವಾಮಿ, ವೆಂಕಟೇಶ್, ನಾಗರಾಜ್, ವಕೀಲರಾದ ರುದ್ರಮುನಿ ಇನ್ನಿತರರು ಇದ್ದರು.