ನಿಗದಿತ ವೇಳೆಗೆ ಆರಂಭವಾಗದ ಸಭೆ, ಬಹಿಷ್ಕಾರ

| Published : Oct 01 2025, 01:00 AM IST

ನಿಗದಿತ ವೇಳೆಗೆ ಆರಂಭವಾಗದ ಸಭೆ, ಬಹಿಷ್ಕಾರ
Share this Article
  • FB
  • TW
  • Linkdin
  • Email

ಸಾರಾಂಶ

ಬೆಳಗ್ಗೆ 10.30 ಗಂಟೆಗೆ ನಿಗದಿಯಾಗಿದ್ದ ಪೂರ್ವಭಾವಿ ಸಭೆ 11 ಗಂಟೆಯಾದರೂ ಆರಂಭವಾಗಿಲ್ಲ. ತಹಸೀಲ್ದಾರ್ ಸೇರಿ ಎಲ್ಲ ತಾಲೂಕು ಮಟ್ಟದ ಅಧಿಕಾರಿಗಳು ವಿಡಿಯೋ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಇರುವ ವಿಷಯ ಹಾಗೂ ಸಭೆಯ ಬದಲಾದ ಸಮಯವನ್ನು ಮುಂಚಿತವಾಗಿ ತಿಳಿಸಿದ್ದರೆ, ನಾವು ಅದೇ ಸಮಯಕ್ಕೆ ಬರುತ್ತಿದ್ದೆವು.

ಸಂಡೂರು: ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಅಂಗವಾಗಿ ಪಟ್ಟಣದ ತಾಲೂಕು ಕಚೇರಿಯಲ್ಲಿ ಮಂಗಳವಾರ ಬೆಳಗ್ಗೆ ೧೦.೩೦ ಗಂಟೆಗೆ ಪೂರ್ವಭಾವಿ ಸಭೆಯನ್ನು ಕರೆಯಲಾಗಿತ್ತು. ಇದೇ ಸಮಯದಲ್ಲಿ ಜಿಲ್ಲಾಧಿಕಾರಿಗಳ ವಿಡಿಯೋ ಕಾನ್ಫರೆನ್ಸ್ ನಡೆಯುತ್ತಿದ್ದುದರಿಂದ ಪೂರ್ವಭಾವಿ ಸಭೆ ನಿಗದಿತ ಸಮಯಕ್ಕೆ ಆರಂಭವಾಗದಿರುವುದನ್ನು ಖಂಡಿಸಿ ವಾಲ್ಮೀಕಿ ನಾಯಕ ಮಹಾಸಭಾದ ಮುಖಂಡರು ಸಭೆಯನ್ನು ಬಹಿಷ್ಕರಿಸಿ ಸಭೆಯಿಂದ ಹೊರ ನಡೆದರು.

ಈ ಸಂದರ್ಭದಲ್ಲಿ ವಾಲ್ಮೀಕಿ ನಾಯಕ ಮಹಾಸಭಾದ ತಾಲೂಕು ಘಟಕದ ಅಧ್ಯಕ್ಷ ವಿ. ಅಂಬರೀಶ್, ವಸಂತಕುಮಾರ್, ವಿ.ಎಸ್. ಶಂಕರ್, ಜಯಣ್ಣ ಮುಂತಾದವರು ಮಾತನಾಡಿ, ಬೆಳಗ್ಗೆ 10.30 ಗಂಟೆಗೆ ನಿಗದಿಯಾಗಿದ್ದ ಪೂರ್ವಭಾವಿ ಸಭೆ 11 ಗಂಟೆಯಾದರೂ ಆರಂಭವಾಗಿಲ್ಲ. ತಹಸೀಲ್ದಾರ್ ಸೇರಿ ಎಲ್ಲ ತಾಲೂಕು ಮಟ್ಟದ ಅಧಿಕಾರಿಗಳು ವಿಡಿಯೋ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಇರುವ ವಿಷಯ ಹಾಗೂ ಸಭೆಯ ಬದಲಾದ ಸಮಯವನ್ನು ಮುಂಚಿತವಾಗಿ ತಿಳಿಸಿದ್ದರೆ, ನಾವು ಅದೇ ಸಮಯಕ್ಕೆ ಬರುತ್ತಿದ್ದೆವು. ಸಭೆಗೆ ಬಂದಮೇಲೂ ಯಾವ ಅಧಿಕಾರಿಗಳು ಬಂದು ನಮಗೆ ಮಾಹಿತಿ ನೀಡಲಿಲ್ಲ. ಈ ಕಾರಣದಿಂದ ನಾವು ಸಭೆಯನ್ನು ಬಹಿಷ್ಕರಿಸಿ ಹೊರ ಹೋಗುತ್ತಿದ್ದೇವೆ ಎಂದು ತಿಳಿಸಿದರು.

ಈ ಕುರಿತು ತಹಸೀಲ್ದಾರ್ ಜಿ. ಅನಿಲ್‌ಕುಮಾರ್ ಪ್ರತಿಕ್ರಿಯಿಸಿ, ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆಗಾಗಿ ಎಲ್ಲ ಸಿದ್ಧತೆ ಮಾಡಿದ್ದೆವು. ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಕುರಿತಂತೆ ಜಿಲ್ಲಾಧಿಕಾರಿಗಳ ವಿಡಿಯೋ ಕಾನ್ಫರೆನ್ಸ್ ಸಭೆ ತುರ್ತಾಗಿ ನಿಗದಿಯಾಯಿತು. ಇದರಿಂದ ಪೂರ್ವಭಾವಿ ಸಭೆ ನಡೆಸುವುದು ಸ್ವಲ್ಪ ತಡವಾಯಿತು. ಮುಖಂಡರೊಂದಿಗೆ ಮಾತನಾಡುತ್ತೇವೆ. ಎಲ್ಲರೂ ಒಟ್ಟಾಗಿ ಸೇರಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸೋಣ ಎಂದರು.

ವಾಲ್ಮೀಕಿ ನಾಯಕ ಮಹಾಸಭಾದ ಮುಖಂಡರಾದ ಡಿ. ಕೃಷ್ಣಪ್ಪ, ಡಿ. ಪ್ರಹ್ಲಾದ್, ಸತ್ಯನಾರಾಯಣ, ಅಂಜಿನಪ್ಪ, ಚಂದ್ರಶೇಖರ್, ಆರ್. ಶಿವರಾಂ, ಕಾರ್ತಿಕ್, ಗಂಟಿ ಕುಮಾರಸ್ವಾಮಿ, ಗಂಡಿ ಮಾರೆಪ್ಪ, ನಾಗರಾಜ, ಮಹಿಳಾ ಘಟಕದ ಪದಾಧಿಕಾರಿಗಳು, ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.