ದಸರಾ ಆಕರ್ಷಕವಾಗಿಸಲು ಉದ್ಯಮಿಗಳ ಸಹಕಾರ ಬೇಕು

| Published : Sep 12 2024, 01:53 AM IST

ಸಾರಾಂಶ

ದಸರಾ ಮಹೋತ್ಸವವು ತಲೆತಲಾಂತರದಿಂದ ನಿರಂತರವಾಗಿ ನಡೆದುಕೊಂಡು ಬಂದಿದೆ.

ಕನ್ನಡಪ್ರಭ ವಾರ್ತೆ ಮೈಸೂರುಈ ಬಾರಿ ನಾಡಹಬ್ಬ ದಸರ ಮಹೋತ್ಸವವನ್ನು ಮತ್ತಷ್ಟು ಅಕರ್ಷಕವನ್ನಾಗಿಸಲು ಉದ್ದೇಶಿಸಿದ್ದು, ಇದಕ್ಕೆ ಉದ್ಯಮಿಗಳು ಸಹಕರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಮನವಿ ಮಾಡಿದರು.ನಗರದ ಲಲಿತ ಮಹಲ್‌ ಹೊಟೇಲ್ ನಲ್ಲಿ ಬುಧವಾರ ದಸರಾ ಪ್ರಾಯೋಜಕತ್ವ ಸಂಬಂಧ ನಡೆದ ಉದ್ಯಮಿಗಳು, ವಿವಿಧ ಸಂಘ ಸಂಸ್ಥೆಗಳ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.ದಸರಾ ಮಹೋತ್ಸವವು ತಲೆತಲಾಂತರದಿಂದ ನಿರಂತರವಾಗಿ ನಡೆದುಕೊಂಡು ಬಂದಿದೆ. ಈ ಬಾರಿ ವಿಶ್ವಕ್ಕೆ ಇದರ ಮಹತ್ವ ತಿಳಿಸುವ ಕೆಲಸ ಮಾಡಬೇಕು.ರಾಜ್ಯದಲ್ಲಿ ಈ ಬಾರಿ ಉತ್ತಮ ಮಳೆಯಾಗಿದೆ. ಆದ್ದರಿಂದ ಸರ್ಕಾರ ವಿಜೃಂಭಣೆಯ ದಸರಾ ಆಚರಣೆಗೆ ಸಿದ್ಧತೆ ಮಾಡಿಕೊಂಡಿದ್ದು, ಇದಕ್ಕಾಗಿ ಸಕಲ ಸಿದ್ಧತೆ ಮಾಡುತ್ತಿದೆ. ಎಲ್ಲರೂ ಒಟ್ಟಾಗಿ ದಸರಾ ದಸರಾವನ್ನು ವಿಜೃಂಭಣೆಯಿಂದ ಆಚರಿಸೋಣ ಎಂದರು.ದಸರಾ ಮಹೋತ್ಸವದಲ್ಲಿ ಪ್ರತಿಯೊಬ್ಬರ ಪಾಲ್ಗೊಳ್ಳುವಿಕೆ ಮುಖ್ಯ. ಈ ಬಾರಿ ಕಳೆದ ಬಾರಿಯಲ್ಲಿನ ನ್ಯೂನತೆ ಸರಿಪಡಿಸಿಕೊಂಡು ಮುನ್ನಡೆಯಬೇಕು. ಮೈಸೂರಿನ ಹಿರಿಮೆ, ಗರಿಮೆಯನ್ನು ವಿಶ್ವಕ್ಕೆ ತಿಳಿಸಬೇಕು. ಅದಕ್ಕೆ ಉದ್ಯಮಿಗಳ ಸಹಕಾರ ಮುಖ್ಯ. ಇದರಲ್ಲಿ ಪ್ರಾಯೋಜಕತ್ವ ನೀಡಲೇಬೇಕು ಎಂಬ ಯಾವುದೇ ಒತ್ತಡ ಇಲ್ಲ. ಸ್ವಯಂಪ್ರೇರಿತವಾಗಿ ಪ್ರಾಯೋಜಕತ್ವ ವಹಿಸಿಕೊಳ್ಳಬಹುದು ಎಂದು ಅವರು ತಿಳಿಸಿದರು.ಕಳೆದ ಬಾರಿ ದಸರಾದಲ್ಲಿ 1.75 ಕೋಟಿ ರು. ಪ್ರಾಯೋಜಕತ್ವ ಬಂದಿತ್ತು. ಈ ಬಾರಿ ಎಷ್ಟು ಬರುತ್ತದೆ ಎಂಬುದು ಗೊತ್ತಿಲ್ಲ. ದಸರಾ ಆಚರಣೆಗೆ ಬೇಕಾದ ಅನುದಾನವನ್ನು ಸರ್ಕಾರ ಬಿಡುಗಡೆಗೊಳಿಸಲಿದೆ. ಪ್ರಾಯೋಜಕತ್ವದೊಂದಿಗೆ ಗುಣಮಟ್ಟದ ಕಾರ್ಯಕ್ರಮ ಆಯೋಜಿಸಲಾಗುವುದು.ಸಭೆಯಲ್ಲಿ ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತರೆಡ್ಡಿ, ಜಿಪಂ ಸಿಇಒ ಕೆ.ಎಂ. ಗಾಯತ್ರಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಎಸ್ಪಿ ವಿಷ್ಣುವರ್ಧನ್, ಡಿಸಿಪಿ ಜಾಹ್ನವಿ, ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕಿ ಎಂ.ಕೆ. ಸವಿತಾ ಮೊದಲಾದವರು ಇದ್ದರು.---ಕೋಟ್ಈ ಬಾರಿಯೂ ಉದ್ಯಮಿಗಳ ಸಹಕಾರದ ನಿರೀಕ್ಷೆ ಇದೆ. ಯಾರು ಎಷ್ಟು ಪ್ರಾಯೋಜಕತ್ವ ನೀಡುತ್ತೀರಿ ಎಂಬುದನ್ನು ನನಗೆ ಅಥವಾ ಪ್ರವಾಸೋದ್ಯಮ ಡಿಡಿಗೆ ತಿಳಿಸಬಹುದು. ಏನಾದರೂ ಬದಲಾವಣೆ ಅಗತ್ಯವಿದ್ದರೆ ತಿಳಿಸಿ. ದಸರಾ ಯಶಸ್ಸಿನಲ್ಲಿ ಉದ್ಯಮಿಗಳ ಪಾತ್ರ ಮುಖ್ಯವಾದದ್ದು.- ಜಿ. ಲಕ್ಷ್ಮೀಕಾಂತರೆಡ್ಡಿ, ಜಿಲ್ಲಾಧಿಕಾರಿ--- ಪ್ರಾಯೋಜಕತ್ವ ಎಷ್ಟು?7 ವಿಭಾಗಗಳಲ್ಲಿ ಪ್ರಾಯೋಜಕತ್ವಕ್ಕೆ ಅವಕಾಶವಿದೆ. ಈ ಪೈಕಿ ಜಂಬೂಸವಾರಿ ದಿನ ಅರಮನೆ ಸುತ್ತಮುತ್ತಲ ಪ್ರದೇಶಗಳ ಹೋರ್ಡಿಂಗ್ಸ್, ಪ್ರವೇಶದ್ವಾರ, ಜಂಬೂಸವಾರಿ ಟಿಕೆಟ್ ಒಳಗೊಂಡ ಜಂಬೂಸವಾರಿ ಪ್ರಯೋಜಕತ್ವಕ್ಕೆ 2 ಕೋಟಿ, ಯುವ ದಸರಾ ಹೋರ್ಡಿಂಗ್ಸ್, ವೇದಿಕೆಯ ಎಲ್.ಇ.ಡಿ ಪರದೆ, ಮೈದಾನದ ಪ್ರವೇಶ ದ್ವಾರ ಒಳಗೊಂಡ ಅಂಬಾರಿ ಪ್ರಾಯೋಜಕತ್ವಕ್ಕೆ 1 ಕೋಟಿ, ಯುವ ಸಂಭ್ರಮ, ಆಹಾರ ಮೇಳವನ್ನು ಒಳಗೊಂಡ ಪ್ಲಾಟಿನಂ ಪ್ರಯೋಜಕತ್ವಕ್ಕೆ 75 ಲಕ್ಷ, ಫಲಪುಷ್ಪ ಪ್ರದರ್ಶನ, ಲಲಿತ ಮಹಲ್ ಬಳಿಯ ಆಹಾರ ಮೇಳ, ದಸರಾ ಚಲನಚಿತ್ರೋತ್ಸವ ಒಳಗೊಂಡ ಗೋಲ್ಡನ್ ಪ್ರಾಯೋಜಕತ್ವಕ್ಕೆ 50 ಲಕ್ಷ, ದಸರಾ ಕ್ರೀಡೆ, ನಂಜನಗೂರು ದೇವಸ್ಥಾನದ ವೇದಿಕೆ, ಕುಸ್ತಿ, ದೀಪಾಲಂಕಾರವನ್ನೊಳಗೊಂಡ ಸಿಲ್ವರ್ ಪ್ರಾಯೋಜಕತ್ವಕ್ಕೆ 25 ಲಕ್ಷ. ಮಹಿಳಾ ಮತ್ತು ಮಕ್ಕಳ ದಸರಾ, ರೈತ ದಸರಾ, ಲಲಿತ ಕಲೆ, ಕಲಾಮಂದಿರ, ಜಗನ್ಮೋಹನ ಅರಮನೆ ವೇದಿಕೆಗೆ 5 ಲಕ್ಷ, ಎಲ್ಇಡಿ ಡಿಸ್‌ಪ್ಲೇ, ಬಿಲ್ ಬೋರ್ಡ್, ಡಿಜಿಟಲ್ ಬೋರ್ಡ್‌ಗೆ ಪ್ರಾಯೋಜಕತ್ವ ನೀಡಬಹುದು.