ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು

| Published : Sep 12 2024, 01:53 AM IST

ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು
Share this Article
  • FB
  • TW
  • Linkdin
  • Email

ಸಾರಾಂಶ

ಇಂದು ಸರ್ಕಾರ ಶಿಕ್ಷಣಕ್ಕಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದೆ. ಪ್ರತಿಯೊಬ್ಬರಿಗೂ ಶಿಕ್ಷಣ ಬಹಳ ಅವಶ್ಯ. ಅದಕ್ಕಾಗಿ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಪುರಸಭೆ ಅಧ್ಯಕ್ಷೆ ಭಾಗ್ಯಶ್ರೀ ರೇವಡಿ ಹೇಳಿದರು.

ಕನ್ನಡಪ್ರಭ ವಾರ್ತೆ ಹುನಗುಂದ

ಇಂದು ಸರ್ಕಾರ ಶಿಕ್ಷಣಕ್ಕಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದೆ. ಪ್ರತಿಯೊಬ್ಬರಿಗೂ ಶಿಕ್ಷಣ ಬಹಳ ಅವಶ್ಯ. ಅದಕ್ಕಾಗಿ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಪುರಸಭೆ ಅಧ್ಯಕ್ಷೆ ಭಾಗ್ಯಶ್ರೀ ರೇವಡಿ ಹೇಳಿದರು.

ಪಟ್ಟಣದ ಅಮರಾವತಿ ರಸ್ತೆಯಲ್ಲಿರುವ ಗುರುಭವನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಹುನಗುಂದ ತಾಲೂಕು ಘಟಕದ ವತಿಯಿಂದ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಸರ್ಕಾರಿ ನೌಕರರ ಸಂಘದ ನೂತನ ವಾಣಿಜ್ಯ ಮಳಿಗೆಗಳ ಉದ್ಘಾಟನೆ ಹಾಗೂ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಿ ನೌಕರರ ಸಂಘಟನೆ ಹೆಮ್ಮರವಾಗಿ ಬೆಳೆಯುತ್ತಿದ್ದು ತನ್ನ ಸ್ವಂತ ಜಾಗದಲ್ಲಿ ಮಳೆಗೆಗಳನ್ನು ಕಟ್ಟಿರುವುದು ಶ್ಲಾಘನೀಯವಾದುದು ಎಂದರು.ನಿವೃತ್ತ ಉಪನ್ಯಾಸಕ ಸಿದ್ದಲಿಂಗಪ್ಪ ಬೀಳಗಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಸೇವೆ ಮತ್ತು ಸಂಘಟನೆ ನೌಕರರ ಪ್ರಮುಖ ಧ್ಯೇಯವಾಗಿದೆ. ಸಂಘಟನೆಗೆ ತಾಳ್ಮೆ ಬಹಳ ಮುಖ್ಯ. ತಾಳ್ಮೆ ಇದ್ದಾಗ ಮಾತ್ರ ಸಂಘಟನೆ ಬಲಪಡಿಸಲು ಸಾಧ್ಯವಾಗಲಿದೆ. ಸಂಘಟನೆಯ ಮುಖ್ಯಸ್ಥರಿಗೆ ಅದರ ಜವಾಬ್ದಾರಿ ಗೊತ್ತಿರುತ್ತದೆ. ಸರ್ಕಾರಿ ನೌಕರರ ಸಂಘ ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ನೌಕರರನ್ನು ಒಳಗೊಂಡಿದ್ದು, ಅವರ ನಿರಂತರ ಪರಿಶ್ರಮದಿಂದ ನೌಕರರಿಗೆ ಅನುಕೂಲವಾಗಿದೆ ಎಂದು ತಿಳಿಸಿದರು.ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಸಂಗಣ್ಣ ಹಂಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರಿ ನೌಕರರ 7ನೇ ವೇತನ ಜಾರಿಯಾಗಲು ಸ್ಥಳೀಯ ಶಾಸಕ ವಿಜಯಾನಂದ ಕಾಶಪ್ಪರವರ ಪಾತ್ರ ಮಹತ್ವದ್ದಾಗಿದೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ಅವರ ಮತ್ತು ಪರಿಶ್ರಮದ ಫಲವಾಗಿ ಸರ್ಕಾರಿ ನೌಕರರಿಗೆ ತುಟಿ ಭತ್ಯೆ ಹಾಗೂ 7ನೇ ವೇತನ ಆಯೋಗ ಜಾರಿಯಾಗಿದೆ. ಇದರಿಂದ ಸರ್ಕಾರಿ ನೌಕರರ ಆರ್ಥಿಕ ಸ್ಥಿತಿ ಸುಧಾರಣೆಯಾಗಲು ಸಾಧ್ಯವಾಗಿದೆ. ₹16 ಲಕ್ಷ ಅನುದಾನದಲ್ಲಿ 4 ಸುಸಜ್ಜಿತ ಮಳೆಗೆಗಳನ್ನು ನಿರ್ಮಾಣ ಮಾಡಲಾಗಿದ್ದು, ನಿಮ್ಮೆಲ್ಲರ ಸಹಕಾರದಿಂದ 5 ವರ್ಷ ಸಮರ್ಥವಾಗಿ ನೌಕರ ಸಂಘದ ಅಧ್ಯಕ್ಷನಾಗಿ ಕಾರ್ಯ ಮಾಡಿದ ತೃಪ್ತಿ ನನಗಿದೆ ಎಂದರು.ಈ ಸಂದರ್ಭದಲ್ಲಿ 40ಕ್ಕೂ ಹೆಚ್ಚು ಜನ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು ಹಾಗೂ 33 ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.ವೇದಿಕೆಯಲ್ಲಿ ಪುರಸಭೆ ಉಪಾಧ್ಯಕ್ಷೆ ರಾಜವ್ವ ಬದಾಮಿ, ಖಜಾನೆ ಅಧಿಕಾರಿ ರವೀಂದ್ರ ಮಾಸ್ತಿ, ಸುಜಾತ ಹಂಚಿನಾಳ, ಎಂ.ಆರ್.ದೇಶಪಾಂಡೆ, ಬಸವರಾಜ ಗೌಡರ, ಜೆ.ಜಿ.ಗಡೇದ, ಕೆ.ಆರ್.ದೇಶಪಾಂಡೆ, ಡಿ.ಎಂ.ಬಾಗವಾನ, ಸೌಮ್ಯ ಬಾವಿಕಟ್ಟಿ, ಸಂಘದ ಖಜಾಂಚಿ ಈಶ್ವರ ಗೌಡರ, ರಾಜ್ಯ ಪರಿಷತ್ ಸದಸ್ಯ ಶಂಕರ ಮಠಪತಿ, ಉಪಾಧ್ಯಕ್ಷ ಹನುಮಂತಪ್ಪ ರಂಗಾಪುರ, ಮಹಾಂತೇಶ ನಾಡಗೌಡರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಶಿಕ್ಷಕ ಎಸ್.ಟಿ.ರಂಗಾಪುರ ಸ್ವಾಗತಿಸಿದರು. ಶಿಕ್ಷಕ ಸಂಗಮೇಶ ಹೊದ್ಲೂರ ನಿರೂಪಿಸಿ, ಗೌರವಾಧ್ಯಕ್ಷ ಸೋಮಶೇಖರ ವನಂಜಕರ ವಂದಿಸಿದರು.

ಕೃಷಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದ್ದು, ಇನ್ನಷ್ಟು ಈ ಕ್ಷೇತ್ರಗಳು ಪ್ರಗತಿ ಕಾಣಬೇಕಾಗಿದೆ. ನಿಮ್ಮೆಲ್ಲರ ಆಶೀರ್ವಾದದಿಂದ ನಾನು ಕೂಡ ಪುರಸಭೆ ಅಧ್ಯಕ್ಷೆಯಾಗಿದ್ದೇನೆ. ನನಗೆ ಸಿಕ್ಕ ಅವಕಾಶದಲ್ಲಿ ಪಟ್ಟಣದ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತೇನೆ.

-ಭಾಗ್ಯಶ್ರೀ ರೇವಡಿ,
ಪುರಸಭೆ ಅಧ್ಯಕ್ಷೆ.