ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
2ಎ ಮೀಸಲಾತಿ ಹೋರಾಟ ವಿಚಾರವಾಗಿ ಮುಂದಿನ ರೂಪುರೇಷೆಗಳ ಬಗ್ಗೆ ಏ.20ರಂದು ಮಧ್ಯಾಹ್ನ 3 ಗಂಟೆಗೆ ಕೂಡಲಸಂಗಮದ ಪಂಚಮಸಾಲಿ ಪೀಠದ ಎದುರಿನ ಮೈದಾನದಲ್ಲಿ ಪಂಚಮಸಾಲಿ ಸಮಾಜದ ರಾಜ್ಯಮಟ್ಟದ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಹಾಲಿ ಶಾಸಕರು, ಮಾಜಿ ಶಾಸಕರು, ಸಚಿವರ ಸಭೆ ಕರೆದಿದ್ದೇವೆ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿಯೇ ನಮ್ಮ ಸಮಾಜವು ದೊಡ್ಡ ಸಂಘಟನೆಯಾಗಿದೆ. ಇತ್ತೀಚೆಗೆ ಕೆಲವು ಗೊಂದಲಗಳು ಉಂಟಾಗಿದ್ದು ಅದನ್ನು ಪರಿಹರಿಸುವುದು ಈ ಸಭೆಯ ಉದ್ದೇಶವಾಗಿದೆ ಎಂದರು.
ಸಮಾಜಕ್ಕೆ 2ಎ ಮೀಸಲಾತಿ ಕೊಡಬೇಕೆಂಬ ಹೋರಾಟದ ಕಾರಣದಿಂದ ಲಿಂಗಾಯತ ಪಂಚಮಸಾಲಿ ಸಮಾಜ, ಜಗತ್ತಿನಾದ್ಯಂತ ಒಗ್ಗಟ್ಟಾಗಿದೆ. ನಮ್ಮ ಉದ್ದೇಶ ಸಮಾಜಕ್ಕೆ ನ್ಯಾಯ ಕೊಡಿಸುವಂತಹದ್ದಾಗಿದೆ. ಕೂಡಲಸಂಗಮ ಬಯಲು ಜಾಗದಲ್ಲಿ ಪೀಠ ಆರಂಭವಾಯಿತು. ಭಕ್ತರ ಹೃದಯ ಪೀಠವೇ ನಮ್ಮ ಸಿಂಹಾಸನ. ಸಂಘಟನೆ ಮಾಡುವ ಸಂದರ್ಭದಲ್ಲಿ, ಕೆಲವು ಶಿಷ್ಯರು ಗೊಂದಲದ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಅವರೆಲ್ಲ ನಮ್ಮವರೇ, ನಾನು ಅವರ ವಿರೋಧ ಮಾಡಲ್ಲ. ಅವರ ಟೀಕೆ ಟಿಪ್ಪಣಿಗಳನ್ನು ಸ್ವಾಗತಿಸುತ್ತೇನೆ ಎಂದು ತಿಳಿಸಿದರು.ಕೆಲವು ಅಜ್ಞಾನ ಹಾಗೂ ಆಸೆ ಆಮಿಷಗಳಿಗೆ ಒಳಪಟ್ಟು ಟೀಕೆ ಟಿಪ್ಪಣಿಗಳನ್ನು ಮಾಡುತ್ತಾರೆ. ಸಮಾಜದ ವ್ಯಕ್ತಿ ಯಾರೇ ಆಗಿರಲಿ ಅವರ ಪರ ಧ್ವನಿ ಎತ್ತುತ್ತೇನೆ. ಯಾರನ್ನೋ ಮಂತ್ರಿ ಮಾಡಲು, ಶಾಸಕರನ್ನು ಮಾಡಲು ಶ್ರೀ ಪೀಠಗಳನ್ನು ಕಟ್ಟಿದ್ದಲ್ಲ. ನಾನು ಯಾವುದೇ ಭೌತಿಕತೆಗೆ ಒಳಗಾಗಿಲ್ಲ. ಮನಸುಗಳನ್ನು ಕಟ್ಟುವಂತಹ ಕೆಲಸ ಮಾಡಿರುವೆ. ಜನರನ್ನು ಕಟ್ಟುವಂತಹ ಕೆಲಸ ಮಾಡಿದ್ದೇನೆ. ಜೀವದ ಉಸಿರಿರೋವರೆಗೂ ದುಡಿಯುತ್ತೇನೆ. ನಾನು ಸಮಾಜಕ್ಕೆ ಅರ್ಪಣೆ ಆಗಿದ್ದೇನೆ ಎಂದರು.
ಇವತ್ತು ಬಯಲಲ್ಲೇ ಇದ್ದು, ಸಮಾಜ ಸಂಘಟನೆ ಮಾಡುತ್ತಿದ್ದೇನೆ. ಆಸ್ತಿ ಹಾಗೂ ಅಂತಸ್ತು ಯಾವುದು ನನಗೆ ಮುಖ್ಯ ಅಲ್ಲ. ನನ್ನ ಸಮಾಜದ ಕಟ್ಟಕಡೆಯ ವ್ಯಕ್ತಿ, ಯಾವ ರೀತಿ ಸಲಹೆ ಕೊಡುತ್ತಾನೋ ಆ ರೀತಿ ನಡೆಯುತ್ತೇನೆ. ಎಲ್ಲ ಮಠ ಮಂದಿರಗಳಲ್ಲಿ ಗೊಂದಲಗಳಿರೋದು ಸಹಜ. ಎಷ್ಟೇ ನೋವಾದ್ರೂ, ಷಡ್ಯಂತ್ರವಾದ್ರೂ ಸಹಿಸಿಕೊಂಡು ಬಂದಿದ್ದೇನೆ. ಭಕ್ತರ ಸೇವೆ, ಭಕ್ತರ ಹೃದಯದ ಮೇಲೆ ನಂಬಿಕೆ ಇಟ್ಟಿದ್ದೇನೆ. ನನಗೆ ಸಮಾಜದ ಹಿತಾಸಕ್ತಿ ಮುಖ್ಯ ಎಂದು ಹೇಳಿದರು.ಮಠದ ಸ್ವಾಮೀಜಿ ಬದಲಾವಣೆ ಮಾಡಬೇಕೆನ್ನುವ ಶಾಸಕ ಕಾಶಪ್ಪನರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅವರು ನನ್ನ ಬಗ್ಗೆ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಯಾರು ಟೀಕೆ ಮಾಡಿದ್ದಾರೆ ಅವರೆಲ್ಲರೂ ನಮ್ಮವರೇ. ಅವರಿಗೆ ದೇವರು ಸದ್ಬುದ್ಧಿ ಕೊಡಲಿ. ಎಲ್ಲ ಗೊಂದಲಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಮಾಜದ ರಾಜ್ಯಮಟ್ಟದ ಸಭೆ ಕರೆಯಲಾಗಿದೆ. ಶ್ರೀ ಪೀಠದ ಬಗ್ಗೆ ಗೌರವ ಅಭಿಮಾನ ಹೊಂದಿರುವ ಎಲ್ಲರೂ ಏ.20ರ ಸಭೆಗೆ ಬರುತ್ತಾರೆ ಎನ್ನುವ ಮೂಲಕ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ್ ಬಗ್ಗೆ ಪರೋಕ್ಷ ಬೇಸರ ವ್ಯಕ್ತಪಡಿಸಿದರು.
ಶಾಸಕ ವಿಜಯಾನಂದ ಕಾಶಪ್ಪನವರ ಶ್ರೀಗಳು ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುವ ಉದ್ದೇಶವನ್ನು ಹೊಂದಿದ್ದಾರೆ ಎಂಬ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿದ ಶ್ರೀಗಳು, ನಾನು ಯಾವ ಚುನಾವಣೆಗೂ ನಿಲ್ಲುವುದಿಲ್ಲ. ನಮ್ಮ ಸಮಾಜದ ಜನರನ್ನು ಜನಪ್ರತಿನಿಧಿಗಳನ್ನಾಗಿ ಮಾಡಲು ರೆಡಿ ಮಾಡುತ್ತೇವೆ. ಸಮಾಜವನ್ನು ರಾಜಕೀಯ ಉದ್ದೇಶಕ್ಕಾಗಿ ನಾವು ಬಳಸಿಕೊಂಡಿಲ್ಲ ಎಂದರು.ಅಜ್ಞಾನಕ್ಕೆ ಒಳಪಟ್ಟಂತ ಹೇಳಿಕೆಗಳಿಗೆ ಸ್ಪಂದಿಸಲ್ಲ. ಯಾರು ಎಷ್ಟು ದೊಡ್ಡವರಾಗಿದ್ದಾರೋ, ಅವರ ಮನಸ್ಸಿಗೆ ಪ್ರಶ್ನೆ ಮಾಡಿಕೊಂಡರೆ ಸಾಕು. ಇವೆಲ್ಲವನ್ನು ಸಹಿಸಿಕೊಂಡು ನಾನು ಬೀದಿಗೆ ಬಂದು ಪಾದಯಾತ್ರೆ ಮಾಡಿದೆ. ನನಗೆ ಅರಮನೆಯಂತಹ ಮಠ ಕಟ್ಟುವ ಉದ್ದೇಶ ನನಗಿಲ್ಲ. ಭಕ್ತರು ಕೊಡುವ ಕೈತುತ್ತು ನನಗೆ ಮಹಾ ಪ್ರಸಾದ ಎಂದರು.
ಭಕ್ತರು ಸೈ ಅಂದ್ರೆ ಹೊಸಪೀಠದ ಸಾರಥ್ಯಕ್ಕೂ ಸೈಭಕ್ತರು ಸೈ ಅಂದ್ರೆ ಹೊಸಪೀಠದ ಸಾರಥ್ಯಕ್ಕೂ ಸೈ ಎಂದು ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳುವ ಮೂಲಕ ಕೂಡಲಸಂಗಮ ಪಂಚಮಸಾಲಿ ಪೀಠದ ಟ್ರಸ್ಟ್‌ಗೆ ಸವಾಲು ಹಾಕಿದ್ದಾರೆ.
ಜಿಲ್ಲೆಯ ಕೂಡಲಸಂಗಮದಲ್ಲಿ ಕರೆದಿರುವ ಸಭೆಗೂ ಮುನ್ನ ಇದೇ ಮೊದಲ ಬಾರಿಗೆ ಅಸಮಾಧಾನಿತರ ಮಾತಿಗೆ ಮೌನ ಮುರಿದು ಖಡಕ್ ಸಂದೇಶ ನೀಡಿರುವ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಹೊಸ ಪೀಠವಾದರೂ ಸೈ, ಅಸಮಾಧಾನಿತರ ಜೊತೆ ಮಾತುಕತೆಗೂ ಸೈ ಎನ್ನುತ್ತಲೇ ಹೊಸ ಸಂದೇಶ ಕೊಟ್ಟಿದ್ದಾರೆ. ಒಂದೆಡೆ ಕೂಡಲಸಂಗಮದ ಪಂಚಮಸಾಲಿ ಟ್ರಸ್ಟ್ ಏ.22ಕ್ಕೆ ಹುಬ್ಬಳ್ಳಿಯಲ್ಲಿ ಸಭೆ ಕರೆದ ಬೆನ್ನಲ್ಲೆ ಇನ್ನೊಂದೆಡೆ ಭಕ್ತರ ಸಮೂಹದಲ್ಲಿ ಏ.20ಕ್ಕೆ ಸಭೆ ಕರೆದ ಮೃತ್ಯುಂಜಯ ಸ್ವಾಮೀಜಿ, ರಾಜ್ಯದ ಎಲ್ಲ ಪಂಚಮಸಾಲಿ ಹಾಲಿ ಮತ್ತು ಮಾಜಿ ಶಾಸಕರು, ಸಂಸದರು ಸೇರಿ ಎಲ್ಲ ಜನಪ್ರತಿನಿಧಿಗಳು ಮತ್ತು ಜನತೆಗೆ ಆಹ್ವಾನ ಸಹ ನೀಡಿದ್ದಾರೆ.