ಸಾರಾಂಶ
ಶಿವಮೊಗ್ಗ: ಕನ್ನೇರಿ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಗೆ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಿಗೆ ಪ್ರವೇಶ ನಿರ್ಬಂಧ ವಿಧಿಸಿ ಹೊರಡಿಸಿರುವ ಆದೇಶದ ವಿರುದ್ಧ ಚರ್ಚಿಸಲು ಹಾಗೂ ಈ ಆದೇಶದ ವಿರುದ್ಧ ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ನಿರ್ಧಾರ ಕೈಗೊಳ್ಳಲು ಅ.29ರಂದು ಬೆಳಿಗ್ಗೆ 11 ಗಂಟೆಗೆ ಬೆಳಗಾವಿಯ ವೆಲ್‌ಕಮ್ ಹೋಟೆಲ್‌ನಲ್ಲಿ ಮಹತ್ವದ ಸಭೆ ಕರೆಯಲಾಗಿದೆ ಎಂದು ರಾಷ್ಟ್ರ ಭಕ್ತರ ಬಳಗದ ಸಂಚಾಲಕ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ನಗರದಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಅಂದಿನ ಸಭೆಯಲ್ಲಿ ಹಲವು ಸಾಧು ಸಂತರು, ಮಠಾಧೀಶರು ಭಾಗವಹಿಸಲಿದ್ದಾರೆ. ಅಲ್ಲದೇ, ಹಿಂದೂ ಸಮಾಜದ ಪ್ರಮುಖರು, ವೀರಶೈವ ಸಮಾಜದ ಮುಖಂಡರು ಭಾಗವಹಿಸಲಿದ್ದು, ನಾನು ಕೂಡ ಈ ಸಭೆಯಲ್ಲಿ ಭಾಗವಹಿಸುತ್ತಿರುವುದಾಗಿ ತಿಳಿಸಿದರು.ಜಾತಿ ಗಣತಿಯಿಂದಾಗಿ ವೀರಶೈವ ಲಿಂಗಾಯತ ಸಮಾಜವನ್ನು ಸರ್ಕಾರ ಛಿದ್ರ ಛಿದ್ರ ಮಾಡಿದ್ದು, ಕಾಂಗ್ರೆಸ್ ನ ಕೆಲವು ಮುಖಂಡರು, ಲಿಂಗಾಯತ ಸಾಧು ಸಂತರು ಬಾಯಿಗೆ ಬಂದಂತೆ ಮಾತನಾಡಿ ಹಿಂದೂ ಸಮಾಜವನ್ನು ಹೀಗಳೆಯುತ್ತಿದ್ದಾರೆ. ಲಿಂಗಾಯತರು, ಮುಸ್ಲಿಮರು ಇಬ್ಬರೂ ಒಂದೇ. ದೇವಸ್ಥಾನಕ್ಕೆ ಹೋಗಬಾರದು. ಹೆಂಡ ಕುಡಿಯಬಹುದು, ಮಾಂಸ ತಿನ್ನಬಹುದು ಎಂದು ಸಾರ್ವಜನಿಕ ಸಭೆಯಲ್ಲಿ ಹೇಳಿದ್ದನ್ನು ಖಂಡಿಸಿ ಕನ್ನೇರಿ ಮಠದ ಶ್ರೀ ಕಾಡಸಿದ್ದೇಶ್ವರ ಸ್ವಾಮಿಗಳು ಪ್ರತಿಕ್ರಿಯೆ ನೀಡಿದ್ದನ್ನೇ ನೆಪವಾಗಿಟ್ಟುಕೊಂಡು ಸರ್ಕಾರ ಕನ್ನೇರಿ ಶ್ರೀಗಳ ವಿರುದ್ಧ ನಿರ್ಬಂಧ ಆದೇಶವನ್ನು ಹೊರಡಿಸಿದೆ. ಇದನ್ನು ಸಾರ್ವಜನಿಕವಾಗಿ ಖಂಡಿಸಲಾಗುತ್ತಿದೆ ಎಂದರು.
ಪ್ರಸ್ತಾವಿತ ಸಭೆಯಲ್ಲಿ ಶ್ರೀ ಕಾಡಸಿದ್ದೇಶ್ವರ ಸ್ವಾಮೀಜಿ ಉಪಸ್ಥಿತರಿರುವುದಲ್ಲದೇ ಶಾಸಕರಾದ ಬಸವನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್, ಸುನಿಲ್ ಕುಮಾರ್, ಮಹೇಶ್ ಟೆಂಗಿನಕಾಯಿ, ಸಂಜಯ್ ಪಾಟೀಲ್, ಅಭಯ್ ಪಾಟೀಲ್, ಪ್ರಮುಖರಾದ ಪ್ರಮೋದ್ ಮುತಾಲಿಕ್, ನಳಿನ್ ಕುಮಾರ್ ಕಟೀಲ್, ಮುರುಗೇಶ್ ನಿರಾಣಿ, ಈರಣ್ಣ ಕಡಾಡಿ, ನಾರಾಯಣಸಾ ಬಾಂಢಗೆ, ಸಿ.ಟಿ.ರವಿ, ಪ್ರತಾಪ್ ಸಿಂಹ. ವಾದಿರಾಜ್, ಮುನಿಯಪ್ಪ, ಚಕ್ರವರ್ತಿ ಸೂಲಿಬೆಲೆ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.ಮೋಹನ್ ಕುಮಾರ್ ಜಾಧವ್, ಹರಿಗೆ ಶಿವಣ್ಣ, ಶಿವಾಜಿ, ಶ್ರೀಕಾಂತ್, ಚನ್ನಬಸಪ್ಪ, ಕುಬೇರಪ್ಪ, ಮೋಹನ್ ಮೊದಲಾದವರು ಇದ್ದರು.
;Resize=(128,128))