ಸಾರಾಂಶ
ಕರ್ನಾಟಕದ ನೀರಾವರಿ ನಿಗಮದ ಅಧಿಕಾರಿಗಳು ನೆರೆಯ ಮಹಾರಾಷ್ಟ್ರದ ನೀರಾವರಿ ಅಧಿಕಾರಿಗಳ ಜೊತೆ ಮಹಾರಾಷ್ಟ್ರದ ಸಾಂಗಲಿ ನೀರಾವರಿ ಇಲಾಖೆ ಕಚೇರಿಯಲ್ಲಿ ಸಭೆ ನಡೆಸಿದರು.
ಕನ್ನಡಪ್ರಭ ವಾರ್ತೆ ಅಥಣಿ
ಮಹಾರಾಷ್ಟ್ರದಲ್ಲಿ ಮಳೆಯ ಮತ್ತೆ ಮಳೆ ಅಬ್ಬರಿಸಿದ್ದು, ಬುಧವಾರ ತಡರಾತ್ರಿ ನೆರೆಯ ಮಹಾರಾಷ್ಟ್ರದ ಸಾಂಗಲಿಯಲ್ಲಿ ಕೃಷ್ಣಾ ನದಿಯ ನೀರಿನ ಮಟ್ಟ ಒಂದೇ ದಿನಕ್ಕೆ 37 ಅಡಿಯಿಂದ 40 ಅಡಿಗೆ ಏರಿಕೆ ಆಗಿದೆ. ಹೀಗಾಗಿ ಕರ್ನಾಟಕದ ಕೃಷ್ಣಾ ನದಿಪಾತ್ರದಲ್ಲಿ ಪ್ರವಾಹ ಆತಂಕ ಹೆಚ್ಚಾಗಿದೆ.ಮುಂಜಾಗ್ರತ ಕ್ರಮವಾಗಿ ಅಥಣಿ ಶಾಸಕ ಮಾಜಿ ಉಪ-ಮುಖ್ಯ ಮಂತ್ರಿಗಳಾದ ಲಕ್ಷ್ಮಣ ಸಂಗಪ್ಪ ಸವದಿ ಅವರ ಮಾಗದರ್ಶನ ಮೆರೆಗೆ ಕರ್ನಾಟಕದ ನೀರಾವರಿ ನಿಗಮದ ಅಧಿಕಾರಿಗಳು ನೆರೆಯ ಮಹಾರಾಷ್ಟ್ರದ ನೀರಾವರಿ ಅಧಿಕಾರಿಗಳ ಜೊತೆ ಮಹಾರಾಷ್ಟ್ರದ ಸಾಂಗಲಿ ನೀರಾವರಿ ಇಲಾಖೆ ಕಚೇರಿಯಲ್ಲಿ ಸಭೆ ನಡೆಸಿದರು.
ಸಭೆಯಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ ನೀರಾವರಿ ಇಲಾಖೆ ಹಿಪ್ಪರಗಿ ಅಣೆಕಟ್ಟು ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರವೀಣ ಹುಣಸಿಕಟ್ಟಿ ಮತ್ತು ನೆರೆಹಾವಳಿ ಮೇಲ್ವಿಚಾರಣೆ ನೋಡಲ್ ಅಧಿಕಾರಿ ನಾರಾಯಣ ದಿವಟೆ, ಮಹಾರಾಷ್ಟ್ರದ ನೀರಾವರಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ಜ್ಯೋತಿ ದೇವಕರ ಸಭೆಯಲ್ಲಿ ಭಾಗವಹಿಸಿದ್ದರು.ಬುಧವಾರ ಒಂದೇ ದಿನಕ್ಕೆ ಸಾಂಗಲಿಯಲ್ಲಿ 3 ಅಡಿ ನೀರು ಹೆಚ್ಚಳವಾಗಿದ್ದರಿಂದ ಕರ್ನಾಟಕದ ನದಿ ತೀರದ ಭಾಗಗಳಲ್ಲಿ ಉಂಟಾಗಬಹುದಾದ ಪ್ರವಾಹದ ಕುರಿತು ಚರ್ಚಿಸಲಾಯಿತು.ಕೊಯ್ನಾ ಜಲಾಶಯದಿಂದ 42 ಸಾವಿರ ಕ್ಯುಸೆಕ್ ನೀರು ಬಿಟ್ದಿದ್ದರಿಂದ ಕೃಷ್ಣಾ ನದಿಗೆ ಸುಮಾರು 82 ಸಾವಿರ ಕ್ಯುಸೆಕ್ ಹೆಚ್ಚಳವಾಗಿದೆ ಎಂದು ಮಹಾರಾಷ್ಟ್ರ ನೀರಾವರಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ಜ್ಯೋತಿ ದೇವಕರ ಮಾಹಿತಿ ನೀಡಿದರು.
ಹೆಚ್ಚು ನೀರು ಬಿಡುವುದರಿಂದ ಚಿಕ್ಕೋಡಿ, ಅಥಣಿ ಮತ್ತು ರಾಯಬಾಗ ತಾಲೂಕು ಕೃಷ್ಣಾ ತೀರದಲ್ಲಿನ ಇನ್ನಷ್ಟು ಗ್ರಾಮಗಳು ಮುಳಗಡೆ ಆಗಲಿದ್ದು, ದರೂರ ಬ್ರಿಡ್ಜ್ ಮೇಲೆ ನೀರು ಬರುವ ಸಾಧ್ಯತೆ ಇದೆ. ಕರ್ನಾಟಕದ ಪ್ರಮುಖ ನಗರಗಳ ಸಂಚಾರ ಸ್ಥಗಿತವಾಗಲಿದೆ. ಹಾಗಾಗಿ ನೀರು ಬಿಡುವ ಪ್ರಮಾಣ ಕಡಿಮೆ ಮಾಡುವಂತೆ ಕರ್ನಾಟಕದ ಅಧಿಕಾರಿಗಳು ಮನವಿ ಮಾಡಿದರು. ಇದಕ್ಕೆ ಮಹರಾಷ್ಟ್ರ ಸಕರಾತ್ಮಕವಾಗಿ ಸ್ಪಂದಿಸಿದೆ ಎಂದು ತಿಳಿದು ಬಂದಿದೆ.ಬಳಿಕ ಅಥಣಿ ಶಾಸಕ ಲಕ್ಷ್ಮಣ ಸಂಗಪ್ಪ ಸವದಿ ಅವರು ಮಹಾರಾಷ್ಟ್ರದ ಚೀಪ್ ಎಂಜಿನಿಯರ್ ಚಂದ್ರಶೇಖರ ಪಾಟೋಳಿಗೆ ಕರೆ ಮಾಡಿ ಸಭೆಯ ಮಾಹಿತಿ ಪಡೆದರು.
ಸಭೆಯ ಕುರಿತು ಶಾಸಕ ಲಕ್ಷ್ಮಣ ಸವದಿ ಕನ್ನಡಪ್ರಭದೊಂದಿಗೆ ಮಾತನಾಡಿ, ಬುಧವಾರ ಸಾಂಗಲಿಯಲ್ಲಿ ನೀರಿನ ಮಟ್ಟ ಅಧಿಕವಾದ್ದರಿಂದ ಅಲ್ಲಿನ ಪರಿಸ್ಥಿತಿ ಅಧ್ಯಯನ ಮಾಡಿ ಅಲ್ಲಿನ ನೀರಾವರಿ ಅಧಿಕಾರಿಗಳ ಜೊತೆಗೆ ಸಭೆ ಮಾಡಿ ಪರಿಸ್ಥಿತಿ ತಿಳಿದುಕೊಂಡು ಬರಲು ನೀರಾವರಿ ಅಧಿಕಾರಿಗಳಿಗೆ ತಿಳಿಸಿದ್ದೆ, ಮಹಾರಾಷ್ಟ್ರದ ನೀರಾವರಿ ಇಲಾಖೆ ಅಧಿಕಾರಿಗಳು ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಿದ್ದಾರೆ. ಎರಡೂ ರಾಜ್ಯಗಳ ಮಧ್ಯೆ ಸಮನ್ವಯತೆಯಿಂದ ನೆರೆ ಎದುರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಅನುಕೂಲವಾಗಲಿದೆ ಎಂದು ಹೇಳಿದರು.