ಕನ್ನಡಪ್ರಭ ವಾರ್ತೆ ನವದೆಹಲಿ

ಕರ್ನಾಟಕವು ಕಾವೇರಿ ನದಿಗೆ ಮೇಕೆದಾಟುವಿನಲ್ಲಿ ಅಣೆಕಟ್ಟೆ ನಿರ್ಮಾಣಕ್ಕೆ ಇತರೆ ರಾಜ್ಯಗಳ ಅನುಮತಿ ಬೇಕಿಲ್ಲ ಎಂದು ಕೇಂದ್ರ ಸರ್ಕಾರವು ರಾಜ್ಯಸಭೆಯಲ್ಲಿ ಹೇಳಿದೆ. ಈ ಮೂಲಕ ರಾಜ್ಯ ಸರ್ಕಾರದ ಮಹತ್ವದ ಯೋಜನೆಗೆ ಭಾರೀ ಮುನ್ನಡೆ ಸಿಕ್ಕಿದೆ. ಅಲ್ಲದೇ ಮೇಕೆದಾಟು ಯೋಜನೆಗೆ ಅಡ್ಡಿ ಪಡಿಸುತ್ತಿದ್ದ ತಮಿಳುನಾಡಿಗೆ ತೀವ್ರ ಮುಖಭಂಗ ಆಗಿದೆ.

ಬೆಂಗಳೂರಿಗೆ ಕುಡಿಯುವ ನೀರು, ವಿದ್ಯುತ್‌ ಯೋಜನೆಗಾಗಿ ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರ ತಾಲೂಕಿನಲ್ಲಿರುವ ಮೇಕೆದಾಟು ತಮಿಳುನಾಡಿಗೆ ಹತ್ತಿರದಲ್ಲಿದೆ. ಈ ಯೋಜನೆಗೆ ತಮಿಳುನಾಡು ತನ್ನ ಪಾಲಿನ ಕಾವೇರಿ ನದಿ ನೀರು ಹಂಚಿಕೆಯಲ್ಲಿ ಕರ್ನಾಟಕ ಅನ್ಯಾಯ ಎಸಗಲಿದೆ ಎಂದು ವಾದಿಸುತ್ತಿತ್ತು. ಅಲ್ಲದೆ ಈ ಯೋಜನೆಗೆ ಕೇಂದ್ರ ಒಪ್ಪಿಗೆ ನೀಡಬಾರದು ಎಂದು ಹಠ ಹಿಡಿದಿತ್ತು. ಯೋಜನೆಯನ್ನು ನಿಲ್ಲಿಸುವಂತೆ ತಮಿಳುನಾಡಿನ ಮುಖ್ಯಮಂತ್ರಿ ಜೋಸೆಫ್‌ ವಿಜಯ್ ಪ್ರಧಾನಿ ಅವರಿಗೂ ಪತ್ರ ಬರೆದು ಇತ್ತೀಚೆಗೆ ಒತ್ತಾಯಿಸಿದ್ದರು. ಆದರೆ ಕರ್ನಾಟಕವು ಅಣೆಕಟ್ಟೆ ನಿರ್ಮಾಣದಿಂದ ತಮಿಳುನಾಡಿಗೇ ಹೆಚ್ಚು ಅನುಕೂಲ ಆಗಲಿದೆ. ಅಲ್ಲದೆ, ಇಲ್ಲಿನ ನೀರನ್ನು ಕೃಷಿಗೆ ಬಳಸದೆ ಕೇವಲ ಕುಡಿಯುವ ಹಾಗೂ ವಿದ್ಯುತ್‌ ಉತ್ಪಾದನೆಗೆ ಮಾತ್ರ ಬಳಸುತ್ತೇವೆ ಹಾಗೂ ಹೆಚ್ಚು ಮಳೆ ಆದಾಗ ನೀರನ್ನು ಶೇಖರಿಸಲು ಅನುಕೂಲ ಆಗಲಿದೆ ಎಂದು ಹೇಳುತ್ತಲೇ ಬಂದಿತ್ತು.

ಕೇಂದ್ರ ಸರ್ಕಾರವು ರಾಜ್ಯಸಭೆಯಲ್ಲಿಯೇ ಕಾವೇರಿ ನದಿಗೆ ಅಣೆಕಟ್ಟೆ ನಿರ್ಮಾಣ ಮಾಡಲು ಯಾವುದೇ ರಾಜ್ಯದ ಅನುಮತಿ ಪಡೆಯಬೇಕಿಲ್ಲ ಎಂದು ಹೇಳಿರುವುದು ರಾಜ್ಯಕ್ಕೆ ಸಿಕ್ಕ ಅತೀ ದೊಡ್ಡ ಗೆಲುವು ಎಂದೇ ವಿಶ್ಲೇಷಿಸಲಾಗುತ್ತಿದೆ. ಕೇಂದ್ರ ಜಲಶಕ್ತಿ ಸಚಿವರು, ತಮ್ಮ ಹೇಳಿಕೆಗೆ 2028ರ ಫೆ. 16ರ ಸುಪ್ರೀಂ ಕೋರ್ಟ್‌ ತೀರ್ಪನ್ನು ಉದಾಹರಣೆ ಆಗಿ ನೀಡಿದ್ದಾರೆ. ತೀರ್ಪಿನ ಪ್ರಕಾರ ಕಾವೇರಿ ನದಿಗೆ ಯಾವುದೇ ರಚನೆ (ಅಣೆಕಟ್ಟೆ) ನಿರ್ಮಿಸಲು ಕರ್ನಾಟಕ ರಾಜ್ಯವು ತಮಿಳುನಾಡು, ಕೇರಳ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯ ಒಪ್ಪಿಗೆ ಪಡೆಯಬೇಕಿಲ್ಲ ಎಂದು ಹೇಳಿದ್ದಾರೆ.

ಸಂಸತ್‌ನಲ್ಲಿ ಉತ್ತರ:


ಸಂಸತ್‌ ಅಧಿವೇಶನದಲ್ಲಿ ಕಾವೇರಿ ನದಿ ನೀರಿನ ಹಂಚಿಕೆ ಬಗ್ಗೆ ತಮಿಳುನಾಡಿನ ರಾಜ್ಯಸಭಾ ಸದಸ್ಯ ಅನ್ಬುಮಣಿ ರಾಮದಾಸ್‌ ಕೇಳಿದ ಪ್ರಶ್ನೆಗೆ ಕೇಂದ್ರ ಜಲಶಕ್ತಿ ರಾಜ್ಯ ಸಚಿವ ರಾಜ್‌ ಭೂಷಣ್‌ ಚೌಧರಿ ಉತ್ತರಿಸಿದ್ದಾರೆ. 2018ರ ಫೆ.16ರಂದು ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಕಾವೇರಿ ನದಿಗೆ ಅಡ್ಡಲಾಗಿ ಯಾವುದೇ ರಚನೆ (ಅಣೆಕಟ್ಟು) ನಿರ್ಮಿಸಲು ಕರ್ನಾಟಕ ರಾಜ್ಯವು ತಮಿಳುನಾಡು, ಕೇರಳ, ಪುದುಚೇರಿ ಒಪ್ಪಿಗೆ ಪಡೆಯಬೇಕು ಎಂದು ಉಲ್ಲೇಖ ಇಲ್ಲ. ಕಾವೇರಿ ನ್ಯಾಯಾಲಯ ಮಂಡಳಿ 2007ರ ತೀರ್ಪಿನ 18ನೇ ಖಂಡವನ್ನು ಸೂಕ್ತವೆಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಪರಿಗಣಿಸಿದೆ ಎಂದು ಚೌಧರಿ ಹೇಳಿದ್ದಾರೆ.

ನ್ಯಾಯ ಮಂಡಳಿಯ ಆದೇಶಕ್ಕೆ ವಿರುದ್ಧವಾಗಿ ಯಾವುದೇ ರಾಜ್ಯವು ತನ್ನ ಗಡಿಯೊಳಗೆ ನೀರಿ ಬಳಕೆ, ನಿಯಂತ್ರಿಸುವ ಅಥವಾ ಆ ರಾಜ್ಯದ ವ್ಯಾಪ್ತಿಯ ನೀರಿನ ಪ್ರಯೋಜನ ಪಡೆಯುವ ಹಕ್ಕು ಹೊಂದಿದೆ. ಅಧಿಕಾರ ಅಥವಾ ಸಾಮರ್ಥ್ಯಕ್ಕೆ ನ್ಯಾಯಮಂಡಳಿಯ ಆದೇಶದಲ್ಲಿನ ಯಾವುದೇ ಅಂಶ ಭಂಗ ತರುವುದಿಲ್ಲ. ಕರ್ನಾಟಕ 2019 ರಲ್ಲಿ ಮೇಕೆದಾಟು ಯೋಜನೆ ಕುರಿತು - ಸಮತೋಲನ ಜಲಾಶಯ ಮತ್ತು ಕುಡಿಯುವ ನೀರಿನ ಯೋಜನೆಯ ವಿಸ್ತೃತ ವರದಿ (ಡಿಪಿಆರ್) ಅನ್ನು ನ್ಯಾಯಮಂಡಳಿಯ ತೀರ್ಪು ಹಾಗೂ ಸಿಡಬ್ಲ್ಯೂಸಿ ಮಾರ್ಗಸೂಚಿಗೆ ಅನುಗುಣವಾಗಿ ಸಲ್ಲಿಸುವಂತೆ ಸೂಚಿಸಿ ಯೋಜನಾ ಪ್ರಾಧಿಕಾರಕ್ಕೆ ಹಿಂತಿರುಗಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.