ಕುಶಾಲನಗರ ಸಮೀಪದ ಗುಡ್ಡೆ ಹೊಸೂರು ಗ್ರಾಮ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಮಟ್ಟದ ಸಂಜೀವಿನಿ ಒಕ್ಕೂಟದ ಜಂಟಿ ಆಶ್ರಯದಲ್ಲಿ ಇಂದು ಆಯೋಜಿಸಲಾಗಿದ್ದ ಸಂಜೀವಿನಿ ಸಂತೆ ಮೇಳವು ಗ್ರಾಮೀಣ ಮಹಿಳೆಯರ ಕೌಶಲಕ್ಕೆ ಸಾಕ್ಷಿಯಾಯಿತು.
ಕುಶಾಲನಗರ: ಕುಶಾಲನಗರ ಸಮೀಪದ ಗುಡ್ಡೆ ಹೊಸೂರು ಗ್ರಾಮ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಮಟ್ಟದ ಸಂಜೀವಿನಿ ಒಕ್ಕೂಟದ ಜಂಟಿ ಆಶ್ರಯದಲ್ಲಿ ಇಂದು ಆಯೋಜಿಸಲಾಗಿದ್ದ ಸಂಜೀವಿನಿ ಸಂತೆ ಮೇಳವು ಗ್ರಾಮೀಣ ಮಹಿಳೆಯರ ಕೌಶಲಕ್ಕೆ ಸಾಕ್ಷಿಯಾಯಿತು.ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿಗಳಾದ ಸಚಿನ್ ಅವರು ಉದ್ಘಾಟಿಸಿ, ಮೇಳದ ಯಶಸ್ಸಿನ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ವೇದಿಕೆಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಮೇಶ್, ಪಂಚಾಯಿತಿ ಕಾರ್ಯದರ್ಶಿ ಕುಮಾರಸ್ವಾಮಿ ಹಾಗೂ ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾದ ತಾರಕುಮಾರಿ ಹಾಗೂ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಗಮನ ಸೆಳೆದ ಸ್ವದೇಶಿ ಉತ್ಪನ್ನಗಳು: ವಿವಿಧ ಸ್ವಸಹಾಯ ಗುಂಪುಗಳ ಮಹಿಳೆಯರು ತಮ್ಮ ಸಂಘಗಳ ವತಿಯಿಂದ ತಯಾರಿಸಿದ ವೈವಿಧ್ಯಮಯ ಉತ್ಪನ್ನಗಳನ್ನು ಪ್ರದರ್ಶನ ಹಾಗೂ ಮಾರಾಟಕ್ಕಿಟ್ಟಿದ್ದರು. ವಿಶೇಷವಾಗಿ ಮನೆಯಲ್ಲೇ ತಯಾರಿಸಿದ ಶುಚಿಯಾದ ಉಪ್ಪಿನಕಾಯಿ, ವಿವಿಧ ರೀತಿಯ ಕುರುಕಲು ತಿಂಡಿಗಳು ಮತ್ತು ಸಾಂಪ್ರದಾಯಿಕ ಆಹಾರ ಪದಾರ್ಥಗಳು, ಕೈಮಗ್ಗದ ಬಟ್ಟೆಗಳು ಹಾಗೂ ಕರಕುಶಲ ವಸ್ತುಗಳು, ತಾಜಾ ಹಣ್ಣು ಮತ್ತು ತರಕಾರಿಗಳು ಸಾರ್ವಜನಿಕರ ಗಮನ ಸೆಳೆದವು.ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಮೇಶ್ ಅವರು ಮಾತನಾಡಿ, ಸಂಜೀವಿನಿ ಸಂತೆ ಮೇಳವು ಮಹಿಳೆಯರ ಸ್ವಾವಲಂಬಿ ಬದುಕಿಗೆ ದೊಡ್ಡ ಉತ್ತೇಜನ ನೀಡುತ್ತಿದೆ. ಮಹಿಳೆಯರು ಸಮಾಜದ ಮುಖ್ಯ ವಾಹಿನಿಗೆ ಬರಲು ಹಾಗೂ ಆರ್ಥಿಕವಾಗಿ ಸದೃಢರಾಗಲು ಈ ವೇದಿಕೆ ಅತ್ಯಂತ ಸಹಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.ಗ್ರಾಮದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮೇಳಕ್ಕೆ ಭೇಟಿ ನೀಡಿ, ಮಹಿಳೆಯರು ತಯಾರಿಸಿದ ವಸ್ತುಗಳನ್ನು ಖರೀದಿಸುವ ಮೂಲಕ ಅವರಿಗೆ ಪ್ರೋತ್ಸಾಹ ನೀಡಿದರು.