ಸಾರಾಂಶ
ಸರ್ಕಾರದ ಆದೇಶದಂತೆ ಕ್ರಮ । ಉಳ್ಳವರನ್ನು ತೆರವುಗೊಳಿಸದ ಕಂದಾಯ ಇಲಾಖೆ ದಲಿತರ ಮೇಲೆ ಶೀಘ್ರ ಕ್ರಮವೇಕೆ?
ಕನ್ನಡಪ್ರಭ ವಾರ್ತೆ, ಬೀರೂರುಹಿರೇನಲ್ಲೂರು ಹೋಬಳಿಯ ಮೇಲನಹಳ್ಳಿ ಗ್ರಾಮದ ಸರ್ಕಾರಿ ಬೀಳಿನಲ್ಲಿ ನಿರ್ಮಿಸಿದ್ದ 58 ಗುಡಿಸಲುಗಳನ್ನು ಪೊಲೀಸರ ನೆರವಿನೊಂದಿಗೆ ಕಂದಾಯ ಇಲಾಖೆ ಅಧಿಕಾರಿಗಳು ಶನಿವಾರ ತೆರವುಗೊಳಿಸಿದರು.ಸರ್ವೆ ನಂ. 22ರಲ್ಲಿ 20 ಎಕರೆ 16 ಗುಂಟೆ ಸರ್ಕಾರಿ ಬೀಳು ಇದೆ. ಈ ಜಾಗಕ್ಕಾಗಿ ನಮೂನೆ 57ರಲ್ಲಿ ಅರ್ಜಿ ಸಲ್ಲಿಸಿರುವ ರೈತರು ಮತ್ತು ಇದೇ ಗ್ರಾಮದ ಪರಿಶಿಷ್ಟ ಜಾತಿಯ ನಿವೇಶನ ರಹಿತರ ನಡುವೆ ಈಗ ಪೈಪೋಟಿ ಆರಂಭವಾಗಿತ್ತು. ವಸತಿ ರಹಿತರು 58 ಗುಡಿಸಲುಗಳನ್ನು ನಿರ್ಮಿಸಿದ್ದರು. ಇವು ಅನಧಿಕೃತ ಗುಡಿಸಲು ಎಂದು ಆರೋಪಿಸಿ ಬಂದ ದೂರು ಆಧರಿಸಿ ತೆರವು ಕಾರ್ಯಾಚರಣೆಯನ್ನು ಕಂದಾಯ ಇಲಾಖೆ ಅಧಿಕಾರಿಗಳು ಮಾಡಿದರು.
ಕಡೂರು ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ, ಕಂದಾಯ ನಿರೀಕ್ಷಕ ರವಿ ಹಾಗೂ ಇತರೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಜೆಸಿಬಿ ಮೂಲಕ ಗುಡಿಸಲು ತೆರವುಗೊಳಿಸಿದರು. ಇದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದರೂ ಪೊಲೀಸರ ನೆರವಿನೊಂದಿಗೆ ಕಾರ್ಯಾಚರಣೆ ನಡೆಸಿದರು.ತಹಸೀಲ್ದಾರ್ ಪೂರ್ಣಿಮಾ ಮಾತನಾಡಿ, ‘ಈ ಜಾಗದಲ್ಲಿ ಈ ಹಿಂದೆ ಸಾಗುವಳಿ ಮಾಡುತ್ತಿದ್ದವರು ಕಂದಾಯ ಪಾವತಿಸದ ಕಾರಣ ಜಮೀನು ಸರ್ಕಾರಿ ಬೀಳಾಗಿದೆ. ಇದೇ ಸರ್ಕಾರಿ ಬೀಳಿನ 5 ಎಕರೆ ಪ್ರದೇಶದಲ್ಲಿ ಕೆಲವರು ಅಕ್ರಮವಾಗಿ ಗುಡಿಸಲು ನಿರ್ಮಿಸಿಕೊಂಡಿದ್ದರು. ಅದನ್ನು ನಿಯಮಾನುಸಾರ ಹಾಗೂ ಸರ್ಕಾರದ ಆದೇಶದಂತೆ ತೆರವು ಮಾಡಿದ್ದೇವೆ. ಪರಿಶಿಷ್ಟ ಜಾತಿಯವರು ನಿವೇಶನಕ್ಕೆ ಒತ್ತಾಯಿಸಿರುವ ಕಾರಣ ಈ ಗ್ರಾಮ ವ್ಯಾಪ್ತಿಯಲ್ಲಿ ‘94–ಸಿ’ಯಲ್ಲಿ ನಿವೇಶನ ರಹಿತರನ್ನು ಪಟ್ಟಿ ಮಾಡಲು ಸೂಚಿಸಲಾಗಿದೆ. ಪರಿಶೀಲನೆ ಬಳಿಕ ವಸತಿ ಕಲ್ಪಿಸಲು ಕ್ರಮ ವಹಿಸಲಾಗುವುದು ಎಂದರು.ಇದೇ ಜಮೀನಿಗೆ ನಮೂನೆ 57ರಲ್ಲಿ ಅರ್ಜಿ ಸಲ್ಲಿಸಿರುವ ರೈತರ ಅರ್ಜಿಗಳನ್ನು ಬಗರ್ ಹುಕುಂ ಸಮಿತಿ ಮುಂದೆ ಇರಿಸ ಲಾಗುವುದು. ಭೂಮಿ ಮಂಜೂರು ಮಾಡುವುದು ಅಥವಾ ತಿರಸ್ಕರಿಸುವುದು ಸಮಿತಿ ತೀರ್ಮಾನ. ಸದ್ಯಕ್ಕೆ ಈ ಭೂಮಿ ಕಂದಾಯ ಇಲಾಖೆ ಸುಪರ್ದಿಯಲ್ಲಿ ಇರಲಿದೆ ಎಂದು ಹೇಳಿದರು.-- ಕೋಟ್ಸ್-- ಮೇಲನಹಳ್ಳಿ ಗ್ರಾಮದ ಮಾದಿಗ ಜನಾಂಗಕ್ಕೆ ಸೇರಿದ ಬಡವರ್ಗದ ಜನರು ತಮಗೆ ನಿವೇಶನವಿಲ್ಲ. ಬದುಕುವುದು ಕಷ್ಟ ಸಾಧ್ಯ ಎನ್ನುವ ಮಾಹಿತಿಯನ್ನು ಶಾಸಕರು ಮತ್ತು ಗ್ರಾಮ ಪಂಚಾಯ್ತಿ ಗಮನಕ್ಕೆ ತಂದು ಸರ್ಕಾರಿ ಜಮೀನಿನಲ್ಲಿ ತಮ್ಮ ಬದುಕು ಕಟ್ಟಿ ಕೊಳ್ಳಲು ಚಿಕ್ಕಗೂಡು ನಿರ್ಮಿಸಿ ಕೊಳ್ಳಲು ಗುಡಿಸಲು ನಿರ್ಮಿಸಿ ವಾಸಿಸುತ್ತಿದ್ದರು. ಆದರೆ ತಾಲೂಕು ಆಡಳಿತ ಏಕಾ ಏಕಿ ದಲಿತರ ಮೇಲೆ ದೌರ್ಜನ್ಯ ಮಾಡಿ ಗುಡಿಸಲುಗಳನ್ನು ನೆಲಸಮ ಮಾಡಿರವುದು ದಲಿತರಿಗೆ ಮಾಡಿರುವ ದ್ರೊಹ, ಇದನ್ನು ಇಲ್ಲಿಗೆ ನಿಲ್ಲಿಸಲಾಗುವುದಿಲ್ಲ. ಅವರಿಗೆ ನಿವೇಶನ ನೀಡುವವರೆಗು ಹೋರಾಟ ಮುಂದುವರಿಯಲಿದೆ.
- ಶೂದ್ರ ಶ್ರೀನಿವಾಸ್,ಕರ್ನಾಟಕ ಬ್ಲೂ ಆರ್ಮಿ ರಾಜ್ಯಾಧ್ಯಕ್ಷ.-
ಇದೇ ಜಮೀನಿನ ಪಕ್ಕದಲ್ಲಿ ಅಜ್ಜಂಪುರ ತಾಲೂಕಿನ ರೈತನೊರ್ವ ಇದೇ ಸರ್ವೆ ನಂ. 22ರಲ್ಲಿ ಅಕ್ರಮವಾಗಿ ಸಾಗುವಳಿ ಮಾಡಿ ಸದ್ಯ ಜಮೀನಿನಲ್ಲಿ ಅಡಕೆ ಬೆಳೆಯುತ್ತಿದ್ದಾನೆ. ಇದನ್ನು ತಹಸೀಲ್ದಾರ್ ಗಮನಕ್ಕೆ ತಂದರು ಸಹ ತೆರವು ಮಾಡಲಿಲ್ಲ ಯಾಕೆ?. ಇದೇ ಮೇಲನಹಳ್ಳಿ ಗ್ರಾಮದಲ್ಲಿ ಸವರ್ಣಿಯರು 100 ಎಕರೆಗು ಅಧಿಕ ಬೀಳಿನಬಲ್ಲಿ ಸಾಗುವಳಿ ಮಾಡುತ್ತಿದ್ದರು. ಶಾಸಕರಾಗಲಿ, ದಂಡಾಧಿಕಾರಗಳಿ ಕ್ರಮ ವಹಿಸಿಲ್ಲ ಏಕೆ. ದಲಿತ ಮೇಲೆ ದರ್ಪ ತೋರುವ ಅಧಿಕಾರಿಗಳು ಉಳ್ಳವರ ಮೇಲೆ ಯಾಕೆ ಕ್ರಮಕೈಗೊಳ್ಳುತ್ತಿಲ್ಲ.- ಕಲ್ಲಪ್ಪ ಮೇಲನಹಳ್ಳಿ.-
ನಿವಾಸಿಗಳ ವೇದನೆ:ಪೋಲಿಸರನ್ನು ಕಂಡ ಗುಡಿಸಲು ನಿರ್ಮಿಸಿಕೊಂಡಿದ್ದ ನಿವಾಸಿಗಳು ಸ್ವಾಮಿ ನಮಗೆ ಮನೆ ಇಲ್ಲ. ಇದೆ ನಮ್ಮ ಮನೆ ದಯಮಾಡಿ ಗುಡಿಸಲು ಉರುಳಿಸಬೇಡಿ, ಎಂಟು ಸಾವಿರ ಸಾಲ ಮಾಡಿ ಇಂತ ಪುಟ್ಟ ಗುಡಿಸಲನ್ನು ಕಟ್ಟಿಕೊಂಡಿದ್ದೇನೆ ನಮ್ಮ ಬದುಕನ್ನು ಬೀದಿಗೆ ತರಬೇಡಿ ಎಂದು ಅಂಗಲಾಚುತ್ತಿದ್ದದ್ದು ಕಂಡು ಬಂತು.17 ಬೀರೂರು 5ಬೀರೂರು ಸಮೀಪದ ಮೇಲನಹಳ್ಳಿ ಸರ್ಕಾರಿ ಬೀಳಿನಲ್ಲಿ ಅಕ್ರಮವಾಗಿ ನಿರ್ಮಿಸಲಾದ ಗುಡಿಸಲುಗಳನ್ನು ಕಂದಾಯ ಇಲಾಖೆಯು ಪೊಲೀಸ್ ಇಲಾಖೆ ಅಧಿಕಾರಿಗಳು ತೆರವುಗೊಳಿಸಿದರು