ಕರಗುತ್ತಿದೆ ಚಿಲಕಲನೇರ್ಪು ನಲ್ಲ ಗುಟ್ಟಾ ಗುಡ್ಡ

| Published : Oct 09 2024, 01:35 AM IST

ಸಾರಾಂಶ

ಚೇಳೂರುನಿಂದಾ ಚಿಲಕಲನೇರ್ಪು ಗ್ರಾಮಕ್ಕೆ ಇತ್ತಿಚೆಗೆ ಡಾಂಬರಿಕರಣ ಮಾಡಲಾಗಿದ್ದು ರಸ್ತೆಯ ಎರಡು ಬದಿಯಲ್ಲಿ ಮಣ್ಣು ಹಾಕಬೇಕೆಂದು ಗುತ್ತಿಗೆದಾರರು ಯಾವುದೆ ಇಲಾಖೆಯಿಂದ ಪರವಾನಗಿ ಪಡೆಯದೆ ಅಕ್ರಮವಾಗಿ ಗುಡ್ಡವನ್ನು ಅಗೆದು ಖಾಲಿ ಮಾಡುತ್ತಿದ್ದಾರೆ. ಇದಕ್ಕೆ ಸಂಬಂಧಪಟ್ಟ ಇಲಾಖೆಯ ಅನುಮತಿ ಪಡೆದಿಲ್ಲ.

ಕನ್ನಡಪ್ರಭ ವಾರ್ತೆ ಚೇಳೂರು

ತಾಲೂಕಿನ ನಲ್ಲ ಗುಟ್ಟಾ ಗುಡ್ಡದಲ್ಲಿ ಮಣ್ಣು ಲೂಟಿಕೋರರ ಹಾವಳಿ ಹೆಚ್ಚಾಗಿದ್ದು ಹಿಟಾಚಿಗಳನ್ನು ಬಳಸಿ ಅಕ್ರಮವಾಗಿ ಮಣ್ಣು ತೆಗೆದು ದೊಡ್ಡ ದೊಡ್ಡ ಲಾರಿಗಳಲ್ಲಿ ಸಾಗಿಸುತ್ತಿದ್ದು ,ದಿನೇ ದಿನೇ ಗುಡ್ಡ ಬರಿದಾಗುತ್ತಿದೆ. ತಾಲೂಕಿನ ಚಿಲಕಲನೇರ್ಪು ಗ್ರಾಮದಲ್ಲಿ ಕೆಲವು ಮಣ್ಣು ದಂದೆ ಕೋರರು ಕಳೆದ ಎರಡು ಮೂರು ದಿನಗಳಿಂದ ಗುಡ್ಡವನ್ನು ಕೊರೆದು ಮಣ್ಣು ಲೂಟಿ ಮಾಡುತ್ತಿದ್ದರು. ಅದೇ ಗ್ರಾಮದಲ್ಲಿ ಇರುವ ಸಂಬಂಧಿಸಿದ ನಾಡಕಚೇರಿ ಅಧಿಕಾರಿಗಳು ಹಾಗೂ ಮೇಲಧಿಕಾರಿಗಳು ಈ ಗಣಿ ಅಕ್ರಮ ತಡೆಯುವಲ್ಲಿ ಜಾಣ ವೌನ ತಾಳಿದ್ದಾರೆ. ಇದರಿಂದ ಇಲ್ಲಿ ನಡೆಯುವ ಅಕ್ರಮ ಗಣಿಗಾರಿಕೆ ಹಿಂದೆ ರಾಜಕೀಯ ಪ್ರಭಾವಿಗಳ ಕೃಪೆಯಿದೆ ಎಂಬುದು ಸ್ಥಳೀಯರ ಗಂಭೀರ ಆರೋಪವಾಗಿದೆ.ಯಾವುದೇ ಪರವಾನಗಿ ಪಡೆದಿಲ್ಲ

ಚೇಳೂರುನಿಂದಾ ಚಿಲಕಲನೇರ್ಪು ಗ್ರಾಮಕ್ಕೆ ಇತ್ತಿಚೆಗೆ ಡಾಂಬರಿಕರಣ ಮಾಡಲಾಗಿದ್ದು ರಸ್ತೆಯ ಎರಡು ಬದಿಯಲ್ಲಿ ಮಣ್ಣು ಹಾಕಬೇಕೆಂದು ಗುತ್ತಿಗೆದಾರರು ಯಾವುದೆ ಇಲಾಖೆಯಿಂದ ಪರವಾನಗಿ ಪಡೆಯದೆ ಅಕ್ರಮವಾಗಿ ಗುಡ್ಡವನ್ನು ಅಗೆದು ಖಾಲಿ ಮಾಡುತ್ತಿದ್ದಾರೆ. ಯಾರೇ ಆಗಲಿ ಸರ್ಕಾರಿ ಜಮೀನಿನ ಮಣ್ಣು ಬಳಸುವ ಮೊದಲು ಗಣಿ, ಅರಣ್ಯ ಹಾಗೂ ಕಂದಾಯ ಇಲಾಖೆ ಅನುಮತಿ ಪಡೆಯುವುದು ಕಡ್ಡಾಯ.

ರೈತರು ಜಮೀನಿನ ಮಣ್ಣನ್ನು ಕೃಷಿಗಾಗಿ ಸಾಗಿಸಿದರೂ ಹಿಡಿದು ಪ್ರಕರಣ ದಾಖಲಿಸುವ ಅಧಿಕಾರಿಗಳು ಈಗ ಬೃಹತ್ ಹಿಟಾಚಿ ಹಾಗೂ ಟಿಪ್ಪರ್ ಲಾರಿ ಲೋಡ್ ಮಣ್ಣನ್ನು ಅಕ್ರಮವಾಗಿ ಸಾಗಿಸುತ್ತಿದ್ದರೂ ಸುಮ್ಮನಿರುವುದು ಅನುಮಾನ ಮೂಡಿಸುತ್ತಿದೆ ಎನ್ನುತ್ತಿದ್ದಾರೆ ಸ್ಥಳೀಯರು.

ಸರ್ಕಾರದ ಖಜಾನೆಗೆ ನಷ್ಟ

ಈ ಗುಡ್ಡದಲ್ಲಿ ಕೇವಲ ಮಣ್ಣು ಲೂಟಿ ಮಾಡುವುದಲ್ಲದೇ ಲೂಟಿಕೋರರು ಸರ್ಕಾರದಿಂದ ಯಾವುದೇ ಪರವಾನಗಿ ಪಡೆದಿಲ್ಲ,ಮಣ್ಣು ಸಾಗಾಣಿಕೆ ಮಾಡುವವರು ಸರ್ಕಾರಕ್ಕೆ ಒಂದು ನಯಾ ಪೈಸೆಯಷ್ಟು ರಾಯಧನವನ್ನೂ ಪಾವತಿಸಿಲ್ಲ ಎಂಬ ದೂರುಗಳು ಕೇಳಿಬಂದಿವೆ. ಇದರಿಂದ ಸರ್ಕಾರದ ಖಜಾನೆಗೆ ಆದಾಯ ನಷ್ಟವಾಗುತ್ತಿದೆ. ಗುಡ್ಡ ಅಗೆದು ಅಕ್ರಮ ಗಣಿಗಾರಿಕೆ ನಡೆಸುವುದು ಕಾನೂನಿನ ಪ್ರಕಾರ ಅಪರಾಧ, ಇದರಿಂದ ಪರಿಸರಕ್ಕೆ ಹಾನಿಯಾಗುವುದರ ಜತೆಗೆ ಬೆಲೆ ಬಾಳುವ ಸಂಪತ್ತು ಹಾಡಹಗಲೇ ಲೂಟಿ ಮಾಡುವುದು ಅಕ್ಷಮ್ಯ. ಕೂಡಲೆ ಸಂಬಂಧಿಸಿದ ಅಧಿಕಾರಿಗಳು ಚಿಲಕಲನೇರ್ಪು ಗುಡ್ಡದಲ್ಲಿ ನಡೆದಿರುವ ಅಕ್ರಮ ಮಣ್ಣು ಲೂಟಿ ಮಾಡಿರುವರ ವಿರುದ್ಧ ಕಾನೂನಿನ ಕ್ರಮ ಜರುಗಿಸಬೇಕು ಎಂದು ಪರಿಸರವಾದಿಗಳು ಒತ್ತಾಯಿಸಿದ್ದಾರೆ.

ಕೋಟ್.....ಚಿಲಕಲನೇರ್ಪು ಗ್ರಾಮದ ಸರ್ವೆ ನಂಬರ್ ೮೮ ನಲ್ಲಿ ೧೬೦ ಎಕರೆ ಇರುವ ಗುಡ್ಡ ಪ್ರದೇಶದಲ್ಲಿ ಅಕ್ರಮವಾಗಿ ಮಣ್ಣು ತೆಗೆಯುತ್ತಿರುವ ವಿಷಯ ತಿಳಿಯುತ್ತಿದ್ದಂತೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಮಣ್ಣು ತುಂಬುತ್ತಿದ್ದ ಜೆಸಿಬಿ ಹಾಗೂ ಲಾರಿ ಚಾಲಕರಿಗೆ ಎಚ್ಚರಿಕೆ ನೀಡಲಾಗಿದೆ. ಅನುಮತಿ ಇಲ್ಲದೆ ಮಣ್ಣು ತೆಗೆದರೆ ಶಿಸ್ತು ಕ್ರಮ ಜರುಗಿಸುವುದಾಗಿ ತಿಳಿಸಲಾಗಿದೆ.

- ಶ್ರೀನಿವಾಸಲು ನಾಯ್ಡು, ತಹಸೀಲ್ದಾರ್‌