ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು (ರಷ್ಯಾ ವರದಿ)
ರಿಪಬ್ಲಿಕ್ ಆಫ್ ರಷ್ಯಾದ ಸೈಂಟ್ ಪೀಟರ್ಸ್ ಬರ್ಗ್‌ನಲ್ಲಿ ಆರಂಭವಾದ 2 ದಿನಗಳ ಬ್ರಿಕ್ಸ್ ಪ್ರಾಸಿಕ್ಯೂಷನ್ಸ್ ಸರ್ವಿಸಸ್ ಮುಖ್ಯಸ್ಥರ ಶೃಂಗ ಸಭೆಯ ಮೊದಲ ದಿನ ಮಂಗಳವಾರ ಭಾರತದ ನಿಯೋಗ ಬ್ರಿಕ್ಸ್ ದೇಶಗಳ ರಾಜತಾಂತ್ರಿಕರ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಿದೆ.ಸುಪ್ರೀಂ ಕೋರ್ಟ್‌ನ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ.ನಟರಾಜ್ ನೇತೃತ್ವದ ಭಾರತದ ರಾಜತಾಂತ್ರಿಕ ನಿಯೋಗ ಭಾಗವಹಿಸಿದೆ. ಈ ನಿಯೋಗದ ನೇತೃತ್ವದಲ್ಲಿ ಭಾರತದ ರಾಜತಾಂತ್ರಿಕ ಮಾತುಕತೆಗಳು ಆರಂಭವಾಗಿವೆ. ಈ ಶೃಂಗಸಭೆಯಲ್ಲಿ ಬ್ರಿಕ್ಸ್ ರಾಷ್ಟ್ರಗಳಾದ ಬ್ರೆಜಿಲ್, ಅತಿಥೇಯ ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕಾ, ಇರಾನ್, ಈಜಿಪ್ಟ್, ಇಥಿಯೋಪಿಯಾ ಹಾಗೂ ಅರಬ್ ಎಮಿರೇಟ್ಸ್‌ನ ಸುಮಾರು 60 ಮಂದಿ ರಾಜತಾಂತ್ರಿಕರು ಪಾಲ್ಗೊಂಡಿದ್ದಾರೆ. ಮುಖ್ಯವಾಗಿ ಅರಬ್ ರಾಷ್ಟ್ರ, ದಕ್ಷಿಣ ಆಫ್ರಿಕಾ, ರಷ್ಯಾ ಸೇರಿದಂತೆ ಬ್ರಿಕ್ಸ್ ದೇಶಗಳೊಂದಿಗೆ ರಾಜತಾಂತ್ರಿಕ ಸಂಬಂಧ ಹಾಗೂ ಕ್ರಿಮಿನಲ್‌ಗಳ ಗಡಿಪಾರು ವಿಚಾರದಲ್ಲಿ ಮೊದಲ ದಿನ ಮಾತುಕತೆ ನಡೆಸಲಾಗಿದೆ. ರಾಜತಾಂತ್ರಿಕ ಒಪ್ಪಂದ ಬುಧವಾರ ಕೊನೆಯ ದಿನದ ಶೃಂಗಸಭೆಯಲ್ಲಿ ನಡೆಯಲಿದೆ. ಈ ಶೃಂಗಸಭೆಯಲ್ಲಿ ಬ್ರಿಕ್ಸ್ ರಾಷ್ಟ್ರಗಳ ನಡುವೆ ಅಪರಾಧಿಗಳ ಹಸ್ತಾಂತರ, ಭ್ರಷ್ಟಾಚಾರ ಅಪರಾಧ ಮತ್ತು ಅಪರಾಧಿಗಳ ಸೊತ್ತು ವಶಪಡಿಸುವ ಅಂಶಗಳು ಪ್ರಮುಖವಾಗಿ ಪ್ರಸ್ತಾಪಗೊಳ್ಳುತ್ತವೆ.
ಅರಬ್ ಎಮಿರೇಟ್ಸ್ ಬಾಂಧವ್ಯ ವೃದ್ಧಿ ಪ್ರಸ್ತಾಪ:ಭಾರತದ ಜೊತೆ ಉತ್ತಮ ಬಾಂಧವ್ಯ ವೃದ್ಧಿಗೆ ಅರಬ್ ಎಮಿರೇಟ್ಸ್ ರಾಷ್ಟ್ರಗಳು ಉತ್ಸುಕ ತೋರಿಸಿವೆ. ಈ ಕುರಿತು ಶೃಂಗ ಸಭೆಯಲ್ಲಿ ಅರಬ್ ಎಮಿರೇಟ್ಸ್‌ನ ಅಟಾನಮಿ ಜನರಲ್ ಡಾ.ಅಹ್ಮದ್ ಸೈಫ್ ಶಂಶಿ ಅವರು ಭಾರತದ ರಾಜತಾಂತ್ರಿಕ ನಿಯೋಗದೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಅರಬ್ ರಾಷ್ಟ್ರಗಳಲ್ಲಿ ಸುಮಾರು 40 ಲಕ್ಷದಷ್ಟು ಭಾರತೀಯರು ಇದ್ದು, ಅವರ ಹಿತಾಸಕ್ತಿ ಕಾಪಾಡುವ ಬಗ್ಗೆ ಒತ್ತು ನೀಡುವಂತೆ ದ್ವಿಪಕ್ಷೀಯ ಮಾತುಕತೆ ವೇಳೆ ಭಾರತದ ರಾಜತಾಂತ್ರಿಕ ನಿಯೋಗ ಪ್ರಸ್ತಾಪಿಸಿದೆ.
ಕ್ರಿಮಿನಲ್ಸ್ ಗಡಿಪಾರಿಗೆ ಸಹಕಾರ:ದಕ್ಷಿಣ ಆಫ್ರಿಕಾ ಮತ್ತು ರಷ್ಯಾ ಜೊತೆಗಿನ ದ್ವಿಪಕ್ಷೀಯ ಮಾತುಕತೆ ಅನೌಪಚಾರಿಕವಾಗಿ ನಡೆಸಲಾಗಿದೆ. ಈ ಮಾತುಕತೆಯಲ್ಲಿ ಭಾರತದೊಂದಿಗೆ ಉಭಯ ರಾಷ್ಟ್ರಗಳ ಸ್ನೇಹಾಚಾರ ವೃದ್ಧಿಯ ಜೊತೆಗೆ ಅಂತಾರಾಷ್ಟ್ರೀಯ ಕ್ರಿಮಿನಲ್‌ಗಳ ಗಡಿಪಾರು ಕುರಿತಂತೆ ಪರಸ್ಪರ ಸಹಕಾರ ಕೋರಲಾಗಿದೆ. ಮುಂದಿನ ದಿನಗಳಲ್ಲಿ ಕ್ರಿಮಿನಲ್ಸ್‌ಗಳ ಗಡಿಪಾರು ಪ್ರಕ್ರಿಯೆ ಸರಳಗೊಳಿಸುವ ನಿಟ್ಟಿನಲ್ಲೂ ಈ ಮಾತುಕತೆ ನಡೆಸಲಾಗಿದೆ. ಈ ಕುರಿತು ಅಧಿಕೃತ ದ್ವಿಪಕ್ಷೀಯ ಮಾತುಕತೆ ಎರಡನೇ ದಿನ ನಡೆಯಲಿದೆ.
2025ರಲ್ಲಿ ಬ್ರೆಜಿಲ್ ಆತಿಥ್ಯ :ಮುಂದಿನ 2025ರಲ್ಲಿ ಬ್ರಿಕ್ಸ್ ರಾಷ್ಟ್ರಗಳ ರಾಜತಾಂತ್ರಿಕ ಶೃಂಗಸಭೆ ಬ್ರೆಜಿಲ್‌ನಲ್ಲಿ ನಡೆಸಲು ನಿರ್ಧರಿಸಲಾಗಿದೆ. ಚೀನಾ, ಇರಾನ್ ಜೊತೆ ಮಾತುಕತೆಯಿಂದ ದೂರ ಉಳಿದ ಭಾರತ
ಶೃಂಗ ಸಭೆಯ ಎರಡು ದಿನಗಳ ಕಾಲವೂ ಬ್ರಿಕ್ಸ್ ಸದಸ್ಯ ರಾಷ್ಟ್ರಗಳಾದ ನೆರೆಯ ಚೀನಾ ಹಾಗೂ ಇರಾನ್ ಜೊತೆ ಭಾರತ ರಾಜತಾಂತ್ರಿಕ ಮಾತುಕತೆಯಿಂದ ದೂರ ಉಳಿಯಲು ನಿರ್ಧರಿಸಿದೆ. ಬ್ರಿಕ್ಸ್‌ನ ಸದಸ್ಯ ರಾಷ್ಟ್ರಗಳು ಚೀನಾ ಹಾಗೂ ಇರಾನ್ ಜೊತೆ ಮಾತುಕತೆ ನಡೆಸಿದರೂ ಭಾರತ ಮಾತ್ರ ಸದ್ಯದ ಪರಿಸ್ಥಿತಿಯಲ್ಲಿ ಮಾತುಕತೆ ನಡೆಸುವುದು ಬೇಡ ಎಂಬ ನಿರ್ಧಾರಕ್ಕೆ ಬಂದಿದೆ. ಇದರಿಂದಾಗಿ ಚೀನಾ ಮತ್ತು ಇರಾನ್‌ನ ಪ್ರತಿನಿಧಿಗಳು ಇದ್ದರೂ ಭಾರತದ ರಾಜತಾಂತ್ರಿಕ ನಿಯೋಗ ಮಾತುಕತೆಯಿಂದ ದೂರವೇ ಉಳಿಯುವಂತಾಯಿತು.