ಕನ್ನಡಪ್ರಭ ವಾರ್ತೆ ಮಂಡ್ಯ
ಅವಧಿ ಮುಗಿದ ಬಳಿಕವೂ ರಾಜೀನಾಮೆ ನೀಡದೆ ಮೊಂಡುತನ ಪ್ರದರ್ಶಿಸುತ್ತಿದ್ದಾರೆಂದು ಆರೋಪಿಸಿ ಜಿಲ್ಲಾ ಕುರುಬರ ಸಂಘದ ಸದಸ್ಯರು ಅಧ್ಯಕ್ಷ ಎಂ.ಸುರೇಶ್ ಅವರಿಗೆ ಘೇರಾವ್ ಹಾಕಿ ಮೈಮೇಲೆ ಕಪ್ಪು ಮಸಿ ಎರಚಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಗುರುವಾರ ನಗರದ ಕುರುಬರ ಸಂಘದ ಆವರಣದಲ್ಲಿ ನಡೆಯಿತು.ಅಧ್ಯಕ್ಷರ ಅವಧಿ ಮುಗಿದು ಇಪ್ಪತ್ತು ದಿನಗಳಾದರೂ ರಾಜೀನಾಮೆ ನೀಡದೆ ಉದ್ಧಟತನ ಪ್ರದರ್ಶಿಸುತ್ತಿರುವುದು ಸರಿಯಲ್ಲ. ಸಂಘದ ಬೈಲಾ ಪ್ರಕಾರ ಸಂಘಕ್ಕೆ ಚುನಾವಣೆ ನಡೆಸಬೇಕು. ಏಕಪಕ್ಷೀಯವಾಗಿ ಅಧ್ಯಕ್ಷರು ಅಧಿಕಾರದಲ್ಲಿ ಮುಂದುವರೆಯುತ್ತಾ ಭಂಡತನ ತೋರುತ್ತಿದ್ದಾರೆ. ಸಂಘದ ಹಿತದೃಷ್ಟಿಯಿಂದ ಇದು ಒಳ್ಳೆಯ ಬೆಳವಣಿಗೆಯಲ್ಲ. ಕೂಡಲೇ ರಾಜೀನಾಮೆ ನೀಡುವಂತೆ ಬಿಗಿಪಟ್ಟು ಹಿಡಿದರು.
ಪೊಲೀಸರು ಸ್ಥಳಕ್ಕೆ ಆಗಮಿಸಿ ಅಧ್ಯಕ್ಷರು ಸೇರಿದಂತೆ ಸದಸ್ಯರನ್ನು ಸಮಾಧಾನಪಡಿಸಲು ಯತ್ನಿಸಿದರು. ಆದರೂ ಬಿಡದೆ ಸದಸ್ಯರು ಅಧ್ಯಕ್ಷ ಸುರೇಶ್ ಅವರನ್ನು ತರಾಟೆಗೆ ತೆಗೆದುಕೊಂಡರು. ಪೊಲೀಸರ ರಕ್ಷಣೆಯಲ್ಲಿ ಸಂಘದ ಆವರಣದಿಂದ ಕಾರಿನಲ್ಲಿ ತೆರಳಲು ಯತ್ನಿಸಿದಾಗ ಸದಸ್ಯರು ಮತ್ತೆ ಘೇರಾವ್ ಹಾಕಿ ಪ್ರತಿಭಟಿಸಿದರು. ಈ ವೇಳೆ ಪೊಲೀಸರು ಸದಸ್ಯರನ್ನು ಸಮಾಧಾನಪಡಿಸಿ ಅಧ್ಯಕ್ಷರು ತೆರಳುವುದಕ್ಕೆ ಅನುವು ಮಾಡಿಕೊಟ್ಟರು.ನಡೆದಿದ್ದೇನು?
ಜಿಲ್ಲಾ ಕುರುಬರ ಸಂಘದಲ್ಲಿ ಗುರುವಾರ ಅಧ್ಯಕ್ಷ ಎಂ.ಸುರೇಶ್ ಆಡಳಿತ ಮಂಡಳಿ ಸಭೆ ಕರೆದಿದ್ದರು. ಬೆಳಗ್ಗೆ ೧೧ ಗಂಟೆ ವೇಳೆಗೆ ಸದಸ್ಯರು ಸಂಘದ ಆವರಣದಲ್ಲಿ ಬಂದು ಸೇರಿದ್ದರು. ಅಧ್ಯಕ್ಷರು ಕಾರಿನಲ್ಲಿ ಸಂಘದ ಆವರಣಕ್ಕೆ ಪ್ರವೇಶಿಸುತ್ತಿದ್ದಂತೆಯೇ ಸದಸ್ಯರು ಅವರನ್ನು ಸುತ್ತುವರಿದರು. ಅವಧಿ ಮುಗಿದರೂ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯುತ್ತಿರುವುದಕ್ಕೆ ಆಕ್ರೋಶ, ಅಸಹನೆ ವ್ಯಕ್ತಪಡಿಸಿದರು. ಘೇರಾವ್ ಹಾಕಿ ಪ್ರತಿಭಟನೆ ನಡೆಸಿದರು.
ಜಿಲ್ಲಾಧ್ಯಕ್ಷರ ಅಧಿಕಾರವಧಿ ಮಾ.೬ರಂದೇ ಮುಕ್ತಾಯವಾಗಿದೆ. ಆದರೂ ಇದುವರೆಗೆ ರಾಜೀನಾಮೆ ನೀಡಿಲ್ಲ. ಚುನಾವಣೆಗೆ ಸಂಬಂಧಿಸಿದ ಚಟುವಟಿಕೆಗಳನ್ನೂ ಆರಂಭಿಸಿಲ್ಲ. ಹಿಂದಿನ ಆಡಳಿತ ಮಂಡಳಿಯವರನ್ನೇ ಜೊತೆಯಲ್ಲಿಟ್ಟುಕೊಂಡು ಸರ್ವಾಧಿಕಾರಿಯಂತೆ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆದಿದ್ದಾರೆ. ಕುರುಬರ ಸಂಘದ ಆವರಣದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ವಿದ್ಯಾರ್ಥಿನಿಲಯದ ಕಾಮಗಾರಿಯಲ್ಲಿ ಹಣ ಲಪಟಾಯಿಸಬೇಕೆನ್ನುವುದೇ ಇವರ ಹುನ್ನಾರವಾಗಿದೆ. ಅದಕ್ಕಾಗಿ ಮತ್ತೊಂದು ಅವಧಿಗೆ ಈಗಿನ ಆಡಳಿತ ಮಂಡಳಿಯನ್ನು ಮುಂದುವರೆಸಲು ಕುತಂತ್ರ ನಡೆಸುತ್ತಿದ್ದಾರೆ ಎಂದು ಹರಿಹಾಯ್ದರು.
ಡಿ.೨೮ರ ಸಭೆಯ ಬಗ್ಗೆ ಸುಳ್ಳು ಮಾಹಿತಿ:ಹಿಂದಿನ ಆಡಳಿತ ಮಂಡಳಿಯನ್ನು ಮುಂದುವರೆಸದೆ, ಚುನಾವಣೆ ನಡೆಸುವಂತೆ ಡಿ.೨೮ರಂದು ನಡೆದ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯಲ್ಲೂ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ಅಂದಿನ ಸಭೆಯೂ ಸಹ ರದ್ದಾಗಿತ್ತು ಆದರೂ ಸಹ, ಅಧ್ಯಕ್ಷ ಎಂ.ಸುರೇಶ್ ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡು ಸಭೆಯಲ್ಲಿ ನಿರ್ಣಯವಾಗಿದೆ ಎಂದು ಸುಳ್ಳು ಮಾಹಿತಿ ನೀಡಿ ಆಡಳಿತ ಮಂಡಳಿಯನ್ನು ಮುಂದುವರೆಸಿದ್ದಾರೆ ಎಂದು ಕಿಡಿಕಾರಿದರು.
ಅಧ್ಯಕ್ಷ ಸುರೇಶ್ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತ ದಡದಪುರ ಶಿವಣ್ಣ ಅವರ ಬಲದಿಂದ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದ ಸದಸ್ಯರು, ಸಂಘದ ಬೈಲಾ ಪ್ರಕಾರ ಅಧಿಕಾರವಧಿ ಮುಗಿದ ಐದು ವರ್ಷಕ್ಕೆ ಅಧ್ಯಕ್ಷರು ರಾಜೀನಾಮೆ ನೀಡಬೇಕು. ಬಳಿಕ ಅವರೇ ಚುನಾವಣೆಗೆ ಮತ್ತೆ ಸ್ಪರ್ಧಿಸಿ ಗೆದ್ದು ಬರಲಿ. ಮತ್ತೆ ಅಧ್ಯಕ್ಷರಾಗಿ ಅಧಿಕಾರ ನಡೆಸಲಿ. ಆದರೆ ಹಿಂಭಾಗಿಲಿನಿಂದ ಅಧಿಕಾರ ಹಿಡಿಯುವ ಆಟ ಬೇಡ ಎಂದು ಹರಿಹಾಯ್ದರು.ಕಪ್ಪು ಮಸಿ ಎರಚಿದ ಸದಸ್ಯರು:
ಸದಸ್ಯರ ಪ್ರತಿಭಟನೆ, ಆಕ್ರೋಶದ ಮಾತುಗಳಿಗೆ ಮನ್ನಣೆಯನ್ನು ನೀಡದೆ ಉಡಾಫೆಯಾಗಿ ಉತ್ತರ ನೀಡುತ್ತಾ ಅಧ್ಯಕ್ಷ ಎಂ.ಸುರೇಶ್ ಮುನ್ನಡೆಯುತ್ತಿದ್ದಾಗ ರೊಚ್ಚಿಗೆದ್ದ ಕೆಲ ಸದಸ್ಯರು ಮೈಮೇಲೆ ಕಪ್ಪು ಮಸಿ ಎರಚಿದರು. ಹಿಂದೆ, ಮುಂದೆಯೆಲ್ಲಾ ಕಪ್ಪು ಮಸಿ ಎರಚಿ ಆಕ್ರೋಶ ಹೊರಹಾಕಿದರು. ಈ ಸಮಯದಲ್ಲಿ ಅಧ್ಯಕ್ಷರ ಕಡೆಯವರು ಪೊಲೀಸರಿಗೆ ಕರೆ ಮಾಡಿ ವಿಷಯ ಮುಟ್ಟಿಸಿದರು.ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿದರು, ಪೊಲೀಸರ ಎದುರೇ ಅಧ್ಯಕ್ಷನಿಗೆ ಸದಸ್ಯರು ತರಾಟೆ ತೆಗೆದುಕೊಂಡರು. ಬಳಿಕ ಪೊಲೀಸರ ರಕ್ಷಣೆಯಲ್ಲಿ ಅಧ್ಯಕ್ಷ ಸುರೇಶ್ ಸ್ಥಳದಿಂದ ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದಾಗ ಸದಸ್ಯರು ಕಾರಿನ ಮುಂದೆ ಘೇರಾವ್ ಹಾಕಿ ಪ್ರತಿಭಟನೆ ನಡೆಸಲು ಮುಂದಾದರು. ಬಳಿಕ ಪೊಲೀಸರು ಸದಸ್ಯರನ್ನು ಸಮಾಧಾನಪಡಿಸಿ ಅಧ್ಯಕ್ಷ ಸುರೇಶ್ ಅವರನ್ನು ಕಳುಹಿಸಿಕೊಟ್ಟರು.
ಪ್ರತಿಭಟನೆಯಲ್ಲಿ ಚಂದಹಳ್ಳಿ ಶ್ರೀಧರ್, ಸ್ವಾಮಿ, ಶ್ರೀರಂಗಪಟ್ಟಣ ಮಂಜು, ಮದ್ದೂರು ಬೀರೇಶ್, ಅಣಸಾಲೆ ಶಿವಣ್ಣ, ಶಿವರಾಮು, ಗೋಪಾಲ್, ರಮೇಶ್ ಸೇರಿದಂತೆ ಸೇರಿದಂತೆ ಹಲವರು ಹಾಜರಿದ್ದರು.