ನಗರಸಭೆ ಏಕಪಕ್ಷೀಯ ನಿರ್ಣಯ ರದ್ದತಿಗೆ ಸದಸ್ಯರ ಆಗ್ರಹ

| Published : Jul 13 2024, 01:37 AM IST

ಸಾರಾಂಶ

ಚಿಕ್ಕಮಗಳೂರು, ನಗರಸಭೆಯಲ್ಲಿ ಪ್ರತಿ ವಿಷಯಕ್ಕೆ ಅನುಮೋದನೆ ಪಡೆದು ಮಂಜೂರಾತಿ ನೀಡಬೇಕೆಂಬ ಸಂವಿಧಾನಾತ್ಮಕವಾದ ಹಕ್ಕನ್ನು ನಗರಸಭೆ ಅಧ್ಯಕ್ಷರು ಗಾಳಿಗೆ ತೂರಿದ್ದಾರೆ ಎಂದು ನಗರಸಭೆ ಬಿಜೆಪಿ ಸದಸ್ಯರು ಆರೋಪಿಸಿದ್ದಾರೆ.

ಸಂವಿಧಾನಾತ್ಮಕ ಹಕ್ಕನ್ನು ಗಾಳಿಗೆ ತೂರಿದ ಅಧ್ಯಕ್ಷರು: ಬಿಜೆಪಿ ಸದಸ್ಯರ ಆರೋಪಿ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ನಗರಸಭೆಯಲ್ಲಿ ಪ್ರತಿ ವಿಷಯಕ್ಕೆ ಅನುಮೋದನೆ ಪಡೆದು ಮಂಜೂರಾತಿ ನೀಡಬೇಕೆಂಬ ಸಂವಿಧಾನಾತ್ಮಕವಾದ ಹಕ್ಕನ್ನು ನಗರಸಭೆ ಅಧ್ಯಕ್ಷರು ಗಾಳಿಗೆ ತೂರಿದ್ದಾರೆ ಎಂದು ನಗರಸಭೆ ಬಿಜೆಪಿ ಸದಸ್ಯರು ಆರೋಪಿಸಿದ್ದಾರೆ.

ಜು.10 ರಂದು ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಸರಿಯಾಗಿ ಸಭೆ ನಡೆಸದೆ, ವಿಷಯ ಚರ್ಚಿಸದೆ 1 ರಿಂದ 68 ವಿಷಯಗಳಿಗೆ ಅನುಮೋದನೆ ದೊರೆತಿದೆ ಎಂದು ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಅವರಿಗೆ ಶುಕ್ರವಾರ ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಸಿದೆ.

ಸಂವಿಧಾನ ಬದ್ಧವಾದ ಕಾನೂನು ಗೌರವಿಸುವ ಅಧಿಕಾರಿಗಳು ಅಧ್ಯಕ್ಷರೊಂದಿಗೆ ಕೈಜೋಡಿಸಿರುವುದು ಬೇಸರದ ಸಂಗತಿ, ಪೌರಾಯುಕ್ತರು ಸಮ್ಮತಿಸಿರುವ ಬಗ್ಗೆ ಜಿಲ್ಲಾಧಿಕಾರಿಗಳು ಗಮನ ಹರಿಸಬೇಕೆಂದು ಆಗ್ರಹಿಸಿದರು.

ಇನ್ನು ಉಳಿದ 10 ದಿನಗಳ ಅಧಿಕಾರದ ಅವಧಿಯಲ್ಲಿ 12 ಕೋಟಿ ರು.ಗಳ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆಸಲು ಅಧ್ಯಕ್ಷರು ಪ್ರಯತ್ನಿಸಿರುವುದು ಮೇಲ್ನೋಟಕ್ಕೆ ಗಮನಕ್ಕೆ ಬಂದಿದ್ದು, ಅಜೆಂಡದಲ್ಲಿಯೂ ಇದೆ ಇದನ್ನು ತಡೆಯಲು ಪ್ರತಿಪಕ್ಷ ಸದಸ್ಯರಾದ ನಾವು ವಿರೋಧಿಸುತ್ತೇವೆ ಎಂದು ಸಭೆಯಲ್ಲಿ ಏಕಪಕ್ಷೀಯ ನಿರ್ಧಾರ ಕೈಗೊಂಡರೆಂದು ದೂರಿದರು. ಈವರೆಗೆ ಅಧ್ಯಕ್ಷರು ನಡೆಸಿರುವ ಕಳಪೆ ಕಾಮಗಾರಿ, ಕಮಿಷನ್‌ ದುರಾಸೆ, ಅಧಿಕಾರದ ಆಸೆಯಿಂದ ನಗರಸಭೆ ಅಧೋಗತಿಗೆ ತಲುಪಿದೆ. ಈ ಸಂಬಂಧ ಇಂದು ಜಿಲ್ಲೆಯ ಎಲ್ಲಾ ಶಾಸಕರು, ಉಸ್ತುವಾರಿ ಸಚಿವರು, ಉಸ್ತುವಾರಿ ಕಾರ್ಯದರ್ಶಿಗಳು ಕೆಡಿಪಿ ಸಭೆಯಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ನ್ಯಾಯ ಕೇಳಲು ಆಗಮಿಸಿದ್ದೇವೆ ಎಂದು ಹೇಳಿದರು. ಕಾನೂನು ವಿರುದ್ಧವಾಗಿ ನಗರಸಭೆಯಲ್ಲಿ 13 ಜನರ ಪರವಾಗಿ ಸುಳ್ಳು ಹೇಳಿರುವ ಕುರಿತು ಸಭೆ ನಡಾವಳಿಗಳನ್ನು ರದ್ದುಪಡಿಸು ವಂತೆ ಕೋರಿ ಮನವಿ ನೀಡಿದ್ದು, ಸಚಿವರು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಟಿ. ರಾಜಶೇಖರ್‌, ಕವಿತಾ ಶೇಖರ್, ಅರುಣ್‌ಕುಮಾರ್, ಮಧುಕುಮಾರ್‌ ರಾಜ್‌ ಅರಸ್, ಸುಜಾತ ಶಿವಕುಮಾರ್, ರೂಪ ಕುಮಾರ್, ಗೋಪಿ, ಅನು ಮಧುಕರ್, ಮಣಿಕಂಠ, ವಿಫುಲ್‌ಕುಮಾರ್‌ ಜೈನ್, ರಾಜು, ಅಮೃತೇಶ್‌ ಚೆನ್ನಕೇಶವ, ದೀಪ ರವಿಕುಮಾರ್, ಭವ್ಯ ಮಂಜುನಾಥ್, ಲಲಿತಾ ರವಿನಾಯ್ಕ ಹಾಜರಿದ್ದರು.12 ಕೆಸಿಕೆಎಂ 4ಚಿಕ್ಕಮಗಳೂರು ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಇತ್ತೀಚೆಗೆ ನಡೆದ ಸಾಮಾನ್ಯ ಸಭೆಯಲ್ಲಿ ಏಕ ಪಕ್ಷೀಯವಾಗಿ ತೆಗೆದುಕೊಂಡಿರುವ ನಿರ್ಣಯವನ್ನು ರದ್ದು ಪಡಿಸುವಂತೆ ಆಗ್ರಹಿಸಿ ಬಿಜೆಪಿ ನಗರಸಭೆ ಸದಸ್ಯರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್‌ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.