ಮಾದಿಗ ಸಮುದಾಯದವರು ಕಾಲಂ 61ರಲ್ಲಿ ಮಾದಿಗ ಎಂದು ಬರೆಸಿ: ಮರಿಯಪ್ಪ ಸಿದ್ದಣ್ಣವರ

| Published : May 16 2025, 02:04 AM IST / Updated: May 16 2025, 02:05 AM IST

ಮಾದಿಗ ಸಮುದಾಯದವರು ಕಾಲಂ 61ರಲ್ಲಿ ಮಾದಿಗ ಎಂದು ಬರೆಸಿ: ಮರಿಯಪ್ಪ ಸಿದ್ದಣ್ಣವರ
Share this Article
  • FB
  • TW
  • Linkdin
  • Email

ಸಾರಾಂಶ

ಡಂಬಳದ ಮಾದಿಗ ಸಮುದಾಯದವರ ಬಡಾವಣೆ, ಡಾ. ಬಿ.ಆರ್. ಅಂಬೇಡ್ಕರ್‌ ಕಾಲನಿಯಲ್ಲಿ ಬುಧವಾರ ಒಳಮೀಸಲಾತಿ ಸಮೀಕ್ಷೆ ಕುರಿತು ಭಿತ್ತಿಪತ್ರಗಳ ಮೂಲಕ ಅವರು ಜಾಗೃತಿ ಮೂಡಿಸಿದ ಮಾದಿಗ ಸಮಾಜದ ಮುಖಂಡ ಮರಿಯಪ್ಪ ಸಿದ್ದಣ್ಣವರ, ಒಳಮೀಸಲಾತಿ ಸಮೀಕ್ಷೆಯಲ್ಲಿ ಕಾಲಂ ನಂ. 61ರದಲ್ಲಿ ಮಾದಿಗ ಸಮುದಾಯದವರು ಮಾದಿಗ ಎಂದು ಬರೆಸಬೇಕು ಎಂದರು.

ಡಂಬಳ: ಒಳಮೀಸಲಾತಿ ಸಮೀಕ್ಷೆಯಲ್ಲಿ ಕಾಲಂ ನಂ. 61ರದಲ್ಲಿ ಮಾದಿಗ ಸಮುದಾಯದವರು ಮಾದಿಗ ಎಂದು ಬರೆಸಬೇಕು ಎಂದು ಮಾದಿಗ ಸಮಾಜದ ಮುಖಂಡ ಮರಿಯಪ್ಪ ಸಿದ್ದಣ್ಣವರ ಹೇಳಿದರು.

ಇಲ್ಲಿ ಮಾದಿಗ ಸಮುದಾಯದವರ ಬಡಾವಣೆ, ಡಾ. ಬಿ.ಆರ್. ಅಂಬೇಡ್ಕರ್‌ ಕಾಲನಿಯಲ್ಲಿ ಬುಧವಾರ ಈ ಕುರಿತು ಭಿತ್ತಿಪತ್ರಗಳ ಮೂಲಕ ಅವರು ಜಾಗೃತಿ ಮೂಡಿಸಿದರು.

ಒಳಮೀಸಲಾತಿ ಕಲ್ಪಿಸಲು ಸರ್ಕಾರ ನಿಯೋಜನೆ ಮಾಡಿರುವ ಗಣತಿದಾರರು ಪ್ರತಿಯೊಂದು ಮನೆಗೆ ಭೇಟಿ ನೀಡಿ ಕುಟುಂಬದ ಅಗತ್ಯ ಮಾಹಿತಿ ಪಡೆಯಬೇಕು. ನಮ್ಮ ಸಮುದಾಯ ಅನ್ಯಾಯ, ದಬ್ಬಾಳಿಕೆ ಹಾಗೂ ಅಸ್ಪೃಶ್ಯತೆಯಂತಹ ಘೋರ ಶೋಷಣೆಗೆ ಒಳಗಾಗಿದೆ. ಈ ಸಮೀಕ್ಷೆಯ ಮೂಲಕ ನಮ್ಮ ಸಮುದಾಯ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಬುಡ್ಗ ಜಂಗಮ ಹಾಗೂ ಬೇಡ ಜಂಗಮರ ಹೆಸರಿನಲ್ಲಿ ಕೆಲವೊಂದು ಮೇಲ್ವರ್ಗದ ಜನರು ನಾವು ಪರಿಶಿಷ್ಟ ಸಮುದಾಯಕ್ಕೆ ಸೇರಿದವರು ಎಂದು ಗಣತಿಯಲ್ಲಿ ನೋಂದಣಿ ಮಾಡಿಕೊಳ್ಳುತ್ತಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ನಮ್ಮ ಸಮುದಾಯದ ಪ್ರತಿಯೊಂದು ಕುಟುಂಬವೂ ಮಾದಿಗ ಎಂದು ಬರೆಸಬೇಕು ಎಂದು ಸಲಹೆ ನೀಡಿದರು.

ಯುವ ಮುಖಂಡರಾದ ಮಲ್ಲಿಕಾರ್ಜುನ ಗೌಡಣ್ಣವರ, ನಿಂಗಪ್ಪ ಮಾದರ ಮಾತನಾಡಿ, ಸರ್ಕಾರ ಗಣತಿಯನ್ನು ಪಾರದರ್ಶಕವಾಗಿ ಮಾಡಿಸಬೇಕು. ರಾಜ್ಯದ ಪರಿಶಿಷ್ಟ ಸಮುದಾಯದ ಪ್ರತಿಯೊಂದು ಕುಟುಂಬ ಗಣತಿ ಕಾರ್ಯದಲ್ಲಿ ವಂಚಿತರಾಗದಂತೆ ಸರ್ಕಾರ ಅಗತ್ಯ ಕ್ರಮ ತಗೆದುಕೊಳ್ಳಬೇಕು. ಪಡಿತರ ಚೀಟಿಯಲ್ಲಿ ಹೆಸರು ಇಲ್ಲದಿರುವ ದಂಪತಿ ಅಥವಾ ಕುಟುಂಬಗಳ ಆಧಾರ್‌ ಕಾರ್ಡ್‌ ಅಥವಾ ಅದಕ್ಕೆ ಪೂರಕವಾದ ದಾಖಲೆಗಳನ್ನು ಪಡೆದು, ಗಣತಿಯಲ್ಲಿ ನೋಂದಣಿಗೆ ಅವಕಾಶ ನೀಡಬೇಕು. ಈ ಗಣತಿ ನಮ್ಮ ಸಮುದಾಯದ ಸಮಗ್ರ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಆ ಹಿನ್ನೆಲೆಯಲ್ಲಿ ಗಣತಿದಾರರು ಸಮೀಕ್ಷೆಗೆ ಮನೆಗೆ ಬಂದಾಗ ಅವರನ್ನು ಗೌರವದಿಂದ ಕಾಣಬೇಕು ಎಂದು ಸಲಹೆ ನೀಡಿದರು.

ಸಮಾಜದ ಮುಖಂಡರಾದ ನಿಂಗಪ್ಪ ಮಾದರ, ದುರಗಪ್ಪ ಗೋವಿನಕೊಪ್ಪ, ಅಶೋಕ ತಳಗೇರಿ, ಶಿಕ್ಷಕ ಗುಡದಪ್ಪ ತಳಗೇರಿ, ಭೀಮಪ್ಪ ತಳಗೇರಿ, ಲಕ್ಷ್ಮಣ ಬೆಟಗೇರಿ, ಮುತ್ತಪ್ಪ ಪೂಜಾರ, ಸೇಕಪ್ಪ ಮಾದರ, ಮರಿಯಪ್ಪ ಎನ್. ದೊಡ್ಡಮನಿ, ಸುರೇಶ ವಡ್ಡಟ್ಟಿ, ಮಲ್ಲಪ್ಪ ಹಳ್ಳಿಕೇರಿ, ಬಸಪ್ಪ ವಗ್ಗರಣಿ, ಸುರೇಶ ಪೂಜಾರ ಭಾಗವಹಿಸಿದ್ದರು.