ದಾಬಸ್‍ಪೇಟೆ: ತ್ಯಾಮಗೊಂಡ್ಲು ಗ್ರಾಪಂ ಪಿಡಿಒ ರೇಖಾ ಅವರು ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಂಡು ಸದಸ್ಯರ ವಿರುದ್ಧ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿರುವುದಲ್ಲದೆ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ ಗ್ರಾಪಂ ಸದಸ್ಯರು ಸಭೆ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.
ಗ್ರಾಪಂ ಸದಸ್ಯ ನಾಗೇಂದ್ರ ಟಿ.ಎನ್.ಮಾತನಾಡಿ, ಪಿಡಿಒ ವಿರುದ್ಧ ಮೇಲಧಿಕಾರಿಗಳಿಗೆ ದಾಖಲೆಗಳ ಸಹಿತ ದೂರು ಕೊಟ್ಟರೂ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳೇ ಪಿಡಿಒಗೆ ಶ್ರೀರಕ್ಷೆಯಾಗಿದ್ದಾರೆ. ನಮ್ಮ ವಾರ್ಡ್‍ನಲ್ಲಿ ಅನಕ್ಷರಸ್ಥರೇ ಹೆಚ್ಚಾಗಿದ್ದು, ಖಾತೆಗೆ ಅರ್ಜಿ ಬರೆದುಕೊಂಡು ಪಂಚಾಯತಿಗೆ ಹೋದರೆ ಅರ್ಜಿದಾರರನ್ನೇ ಕಳಿಸಲು ಹೇಳುತ್ತಾರೆ. ಅವರು ಹೋದರೆ ಗದರಿಸಿ ಸದಸ್ಯರಿಗೆ ಏನೂ ಹೇಳದಂತೆ ಧಮ್ಮಿ ಹಾಕುತ್ತಾರೆ. ಲಂಚವಿಲ್ಲದೆ ಗ್ರಾಪಂನಲ್ಲಿ ಯಾವುದೇ ಕೆಲಸವಾಗುತ್ತಿಲ್ಲ. ನಪ್ರತಿನಿಧಿಗಳಿಗೆ ಬೆಲೆ ಇಲ್ಲದಂತಾಗಿದೆ. ಕೇಳಿದರೆ ಉಢಾಪೆ ಉತ್ತರ ನೀಡುತ್ತಾರೆ. ಪಂಚಾಯಿತಿಯಲ್ಲಿ ಖಾತೆ ಮಾಡಿಸಲು ಅಧಿಕಾರಿಗಳೇ ಮಧ್ಯವರ್ತಿಗಳನ್ನು ಬಿಟ್ಟು ಬಡವರಿಂದ ಹಣ ವಸೂಲಿ ಮಾಡಿಸುತ್ತಿದ್ದಾರೆ. ಕೂಡಲೇ ಪಿಡಿಒ ಅವರನ್ನು ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿದರು.ವ್ಯಾಪಾರಿಗಳಿಗೆ ಬೆದರಿಕೆ:
ಗ್ರಾಪಂನಿಂದಲೇ ರಸ್ತೆ ಬದಿ ವ್ಯಾಪಾರಿಗಳಿಗೆ ಅಂಗಡಿ ಕಟ್ಟಿಸಿಕೊಡಲಾಗಿದೆ, ಕೇವಲ ಅಂಗಡಿ ಕಟ್ಟಿಕೊಟ್ಟು ಮೂಲ ಸೌಲಭ್ಯ ಕಲ್ಪಿಸಿಕೊಟ್ಟಿಲ್ಲ, 40 ಸಾವಿರ ಮುಂಗಡ ಹಣ ಹಾಗೂ ತಿಂಗಳಿಗೆ ಮೂರುವರೆ ಸಾವಿರ ಬಾಡಿಗೆ ನಿಗದಿ ಮಾಡಿದ್ದಾರೆ. ಆದರೆ ಕುಡಿಯಲು ನೀರಿಲ್ಲ. ಶೌಚಗೃಹಗಳಿಗೆ ಬೀಗ ಹಾಕಲಾಗಿದೆ, ಬಿಸಿಲು ಹೆಚ್ಚಾಗಿರುವ ಕಾರಣ ತರಕಾರಿ, ಹೂವು, ಹಣ್ಣು ಬೇಗ ಬಾಡುತ್ತಿವೆ. ನಮ್ಮ ಖರ್ಚಿನಲ್ಲಿ ಅಂಗಡಿ ಮುಂದೆ 5 ಅಡಿಗಳಿಗೆ ಶೀಟ್ ಹಾಕಿಕೊಳ್ಳಲು ಅನುಮತಿ ಕೇಳಿದರೆ ಕೊಡದೆ ಅಂಗಡಿ ಬಿಡಿ ಎಂದು ಬೆದರಿಸುತ್ತಾರೆ ಎಂದು ಪಿಡಿಒ ವಿರುದ್ಧ ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದರು.ಎಲ್ಲ ಅವ್ಯವಹಾರಕ್ಕೂ ದಾಖಲೆಯಿದೆ:
ಕಾಮಗಾರಿ ನಡೆಸದೆ ಬಿಲ್ ಮಾಡಿಸಿಕೊಂಡು ವಂಚನೆ ಎಸಗಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ನೆಲಮಂಗಲ ತಾಪಂ ಇಒ ತನಿಖೆ ನಡೆಸಿ, ಸತ್ಯಾಂಶ ಕಂಡು ಬಂದಿದ್ದರೂ ಕ್ರಮ ಕೈಗೊಂಡಿಲ್ಲ, ನಾನು ಅಧ್ಯಕ್ಷನಾಗಿದ್ದ ಅವಧಿಯಲ್ಲಿ ನನ್ನ ಗಮನಕ್ಕೆ ಬರದೆ 2.5 ಲಕ್ಷ ಬಿಲ್ ಮಾಡಿಸಿ ಹಣ ಲಪಟಾಯಿಸಿ ಸಿಕ್ಕಿ ಬಿದ್ದಿದ್ದರು. ಪಿಡಿಒ ಮಾಡಿರುವ ಅವ್ಯವಹಾರದ ಪ್ರತಿಯೊಂದಕ್ಕೂ ದಾಖಲೆಯಿದೆ ಎಂದು ಗ್ರಾಪಂ ಮಾಜಿ ಅಧ್ಯಕ್ಷ ಟಿ.ಎಚ್. ಮಲ್ಲೇಶ್ ಆರೋಪಿಸಿದರು.
ಲೋಕಾಯುಕ್ತಕ್ಕೆ ದೂರು:
ಇತ್ತೀಚೆಗೆ ಸಂತೆ ತೆರಿಗೆ ಹರಾಜನ್ನು ಸದಸ್ಯರ ಗಮನಕ್ಕೆ ತರದೇ ಅಧ್ಯಕ್ಷರು ಹಾಗೂ ಪಿಡಿಒ ಇಬ್ಬರೇ ಸೇರಿಕೊಂಡು ಮಾಡಿದ್ದಾರೆ. ಈ ಬಗ್ಗೆ ಮೇಲಧಿಕಾರಿಗಳು ಕ್ರಮವಹಿಸದೇ ಇದ್ದರೆ ಲೋಕಾಯುಕ್ತಕ್ಕೆ ದೂರು ಸಲ್ಲಿಸುತ್ತೇನೆ ಎಂದು ಗ್ರಾಪಂ ಸದಸ್ಯ ನಾಗೇಂದ್ರ ಎಚ್ಚರಿಸಿದರು.ಪೋಟೋ 1 :
ತ್ಯಾಮಗೊಂಡ್ಲು ಗ್ರಾಮ ಪಂಚಾಯಿತಿ ಪಿಡಿಒ ರೇಖಾ ವಿರುದ್ಧ ಗ್ರಾಮ ಸದಸ್ಯರೊಂದಿಗೆ ಬೀದಿಬದಿ ವ್ಯಾಪಾರಿಗಳು ಹಣ್ಣು, ತರಕಾರಿ ಸುರಿದು ಪ್ರತಿಭಟನೆ ನಡೆಸಿದರು.