ಸಾರಾಂಶ
ಸದಸ್ಯರ ಅಗತ್ಯತೆಗಳನ್ನು ಕಾಲಕಾಲಕ್ಕೆ ಪೂರೈಸುವುದರ ಮೂಲಕ ವಿಶ್ವಾಸಾರ್ಹತೆಗೆ ಪಾತ್ರವಾಗಿರುವ ಸಹಕಾರ ಕ್ಷೇತ್ರದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಪೂರಕ ಶಕ್ತಿ ತುಂಬುವ ಕಾರ್ಯ ಎಲ್ಲರಿಂದಾಗಬೇಕು.
ಶಿರಸಿ: ಸಹಕಾರಿ ಕ್ಷೇತ್ರದ ಮೂಲಕ ಜಿಲ್ಲೆಯ ಜನಸಾಮಾನ್ಯರ ಆಶೋತ್ತರಗಳು, ಅಗತ್ಯತೆಗಳನ್ನು ಪೂರೈಸುವ ಕಾರ್ಯವನ್ನು ಸಹಕಾರ ಸಂಘ, ಸಂಸ್ಥೆಗಳು ಮಾಡುತ್ತ ಬಂದಿವೆ. ಅದರಂತೆ ಸದಸ್ಯರೂ ಸಹಕಾರ ಕ್ಷೇತ್ರದ ಬಲವರ್ಧನೆಗೆ ಶ್ರಮಿಸಬೇಕೆಂದು ಹಿರಿಯ ಸಹಕಾರಿ ಜಿ.ಎಂ. ಹೆಗಡೆ ಹುಳಗೋಳ ತಿಳಿಸಿದರು.ನಗರದ ಟಿಎಂಎಸ್ ಸಭಾಂಗಣದಲ್ಲಿ ಸೋಮವಾರ ನಡೆದ ದಿ ಚೇತನಾ ಪ್ರಿಂಟಿಂಗ್ ಆ್ಯಂಡ್ ಪಬ್ಲಿಷಿಂಗ್ ಕೋ- ಆಪ್ ಸೊಸೈಟಿಯ ೩೬ನೇ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಮಾತನಾಡಿ, ಸದಸ್ಯರ ಅಗತ್ಯತೆಗಳನ್ನು ಕಾಲಕಾಲಕ್ಕೆ ಪೂರೈಸುವುದರ ಮೂಲಕ ವಿಶ್ವಾಸಾರ್ಹತೆಗೆ ಪಾತ್ರವಾಗಿರುವ ಸಹಕಾರ ಕ್ಷೇತ್ರದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಪೂರಕ ಶಕ್ತಿ ತುಂಬುವ ಕಾರ್ಯ ಎಲ್ಲರಿಂದಾಗಬೇಕು ಎಂದರು.
ಸಂಘದ ಉಪಾಧ್ಯಕ್ಷ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಮಾತನಾಡಿ, ಜಿಲ್ಲೆಯ ಪ್ರಾಥಮಿಕ ಪತ್ತಿನ ಸಹಕಾರಿ ಸಂಘಗಳು, ಸೌಹಾರ್ದ ಬ್ಯಾಂಕುಗಳು, ತಾಲೂಕು ಹುಟ್ಟುವಳಿಗಳ ಮಾರಾಟ ಸಂಘಗಳು, ಬ್ಯಾಂಕ್‌ಗಳು ಈ ಸಂಸ್ಥೆಗೆ ಪೂರಕ ಆಹಾರವಾಗಿದೆ. ಸಂಘ-ಸಂಸ್ಥೆಗಳ, ಜನಸಾಮಾನ್ಯರ ಮುದ್ರಣ ಅಗತ್ಯತೆಗಳನ್ನು ಸರಿಯಾದ ವೇಳೆಗೆ, ಸ್ಪಷ್ಟವಾಗಿ ಒದಗಿಸುತ್ತ ಲಾಭದ ಹಾದಿಯಲ್ಲಿ ಸಂಸ್ಥೆ ಮುನ್ನಡೆಯುತ್ತಿರುವುದು ಸಂತಸದ ಸಂಗತಿ ಎಂದರು.ಸಂಸ್ಥೆಯ ಮುಖ್ಯಕಾರ್ಯನಿರ್ವಾಹಕ ಪ್ರಸಾದ ಹೆಗಡೆ ಕಡಬಾಳ ವರದಿ ವಾಚಿಸಿ, ೨೦೨೩- ೨೪ನೇ ಸಾಲಿನಲ್ಲಿ ಸಂಘವು ₹೩,೯೫,೮೭೮.೪೦ ನಿವ್ವಳ ಲಾಭಗಳಿಸಿದೆ. ಒಟ್ಟೂ ೩೦೮ ಷೇರು ಸದಸ್ಯರನ್ನು ಹೊಂದಿರುವ ಸಂಸ್ಥೆಯಲ್ಲಿ ₹೨.೪೫ ಲಕ್ಷ ಷೇರು ಬಂಡವಾಳ, ಒಟ್ಟೂ ನಿಧಿಗಳು ₹೧೪೪.೪೨ ಲಕ್ಷ ಇದ್ದು, ₹೫೧.೮೨ ಲಕ್ಷ ಗುಂತಾವಣೆಯಿದೆ. ಷೇರು ಸದಸ್ಯರ ಹಾಗೂ ಸಂಘದ ಮೇಲಿನ ಅಭಿಮಾನದಿಂದ ಮುದ್ರಣ ಕಾರ್ಯವನ್ನು ನೀಡುತ್ತಾ ಬಂದಿರುವ ಗ್ರಾಹಕರೆಲ್ಲರ ಸಹಕಾರದಿಂದ ಈ ಬಾರಿ ಒಟ್ಟೂ ₹೧.೨೩ ಕೋಟಿಗೂ ಅಧಿಕ ಮುದ್ರಣ ಕಾರ್ಯವನ್ನು ಮಾಡಿದೆ ಎಂದರು.ಸಭೆಯಲ್ಲಿ ಹಿರಿಯ ಸಹಕಾರಿ ಜಿ.ಟಿ. ಹೆಗಡೆ ತಟ್ಟೀಸರ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. ಗಿರಿಧರ ಕಬ್ನಳ್ಳಿ ನಿರೂಪಿಸಿದರು. ಸುರೇಶ ಹೆಗಡೆ, ಹಕ್ಕಿಮನೆ ವಂದಿಸಿದರು.