ಸಾರಾಂಶ
ತಿಪಟೂರು : ಇನ್ನು ಮೂರು ನಾಲ್ಕು ತಿಂಗಳಲ್ಲಿ ಬೆಂಗಳೂರಿನಿಂದ ತಿಪಟೂರಿಗೆ ಮತ್ತೊಂದು ಮೆಮೊ ರೈಲನ್ನು ಓಡಿಸಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಕೇಂದ್ರ ರೈಲ್ವೆ ಖಾತೆ ಸಹಾಯಕ ಸಚಿವ ಸೋಮಣ್ಣ ತಿಳಿಸಿದರು.
ತಾಲೂಕಿನ ಅರಳಗುಪ್ಪೆಯಲ್ಲಿ ಯಶವಂತಪುರ ಚಿಕ್ಕಮಗಳೂರು ರೈಲು ಹೆಚ್ಚುವರಿ ನಿಲುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಬೆಂಗಳೂರು ತುಮಕೂರಿಗೆ ಮೆಮೊ ರೈಲನ್ನು ಬಿಟ್ಟಿರುವುದರಿಂದ ಪ್ರತಿದಿನ ಸಾವಿರಾರು ಪ್ರಯಾಣಿಕರಿಗೆ ಅನುಕೂಲವಾಗಿದೆ. ಕೇವಲ 20 ರು. ಕೊಟ್ಟರೆ ತುಮಕೂರು ಬೆಂಗಳೂರಿಗೆ ಪ್ರಯಾಣಿಸಬಹುದು.
ಅದೇ ರೀತಿ ಬೆಂಗಳೂರಿನಿಂದ ತಿಪಟೂರಿಗೂ ಒಂದು ವಿಶೇಷ ರೈಲು ಓಡಿಸಲು ಜನರು ಬೇಡಿಕೆ ಇಟ್ಟಿದ್ದಾರೆ. ಅದನ್ನು ಬರುವ ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಜಾರಿಗೊಳಿಸಲಾಗುವುದು ಎಂದರು.ತುಮಕೂರಿನಲ್ಲಿ ವಂದೇ ಭಾರತ್ ರೈಲು ನಿಲುಗಡೆ ಕೊಟ್ಟಿದ್ದೇವೆ. ತಿಪಟೂರಿನಲ್ಲಿ ಎರಡು ಜನಶತಾಬ್ದಿ ರೈಲುಗಳಿಗೆ ನಿಲುಗಡೆ ಕೊಟ್ಟಿದ್ದೇವೆ. ಸಂಪಿಗೆ ರೋಡ್‌ನಲ್ಲಿ ಹಾಗೂ ಇಂದು ಅರಳಗುಪ್ಪೆಯಲ್ಲಿ ಚಿಕ್ಕಮಗಳೂರು ಯಶವಂತಪುರ ರೈಲು ನಿಲುಗಡೆ ಮಾಡುತ್ತಿದ್ದೇವೆ. ಆರು ತಿಂಗಳು ಇಲ್ಲಿಂದ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆಯನ್ನು ನೋಡಿಕೊಂಡು ಇನ್ನೂ ಹೆಚ್ಚುವರಿ ರೈಲುಗಳ ನಿಲುಗಡೆ ಮಾಡಬೇಕಾ ಎಂದು ನಿರ್ಧರಿಸುತ್ತೇವೆ ಎಂದರು.
ಕಳೆದ ಆರು ತಿಂಗಳಲ್ಲಿ ತುಮಕೂರು ಜಿಲ್ಲೆಯಲ್ಲಿ ೫೭೦೦ ಕೋಟಿ ರೂಪಾಯಿಗಳ ಕಾಮಗಾರಿಯನ್ನು ಮಂಜೂರು ಮಾಡಿಸಿ ಟೆಂಡರ್ ಕರೆಯಲಾಗಿದೆ. ತುಮಕೂರು ರಾಯದುರ್ಗ ಸುಮಾರು ವರ್ಷದಿಂದ ನೆನೆಗುದಿಗೆ ಬಿದ್ದಿತ್ತು. ತುಮಕೂರು ದಾವಣಗೆರೆ ಆಗುವುದೇ ಇಲ್ಲ ಎಂದು ತಿಳಿಸಿದ್ದರು. ಆದರೆ ಈ ಎರಡೂ ಮಾರ್ಗದ ಕೆಲಸವನ್ನು ಆರಂಭಿಸಿ 2027ಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಕರೆಸಿ ಲೋಕಾರ್ಪಣೆ ಮಾಡಲಿದ್ದೇನೆ ಎಂದು ತಿಳಿಸಿದರು. ತುಮಕೂರು ಶಾಸಕ ಜ್ಯೋತಿ ಗಣೇಶ್, ಮಾಜಿ ಸಚಿವ ಬಿ.ಸಿ.ನಾಗೇಶ್, ಜೆಡಿಎಸ್ ಮುಖಂಡ ಶಾಂತಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ರವಿ ಹೆಬ್ಬಾಕ, ಉಪವಿಭಾಗಾಧಿಕಾರಿ ಸಪ್ತಶ್ರೀ, ತಹಸೀಲ್ದಾರ್ ಪವನ್‌ಕುಮಾರ್, ರೈಲ್ವೆ ಅಧಿಕಾರಿಗಳು ಇನ್ನಿತರರು ಉಪಸ್ಥಿತರಿದ್ದರು.