ಸಾರಾಂಶ
ನರಗುಂದ: ಈಗ ಮಹಿಳೆಯರೇ ಹೆಚ್ಚಾಗಿ ಶಾಶ್ವತ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದು, ಪುರುಷರು ಕುಟುಂಬ ಕಲ್ಯಾಣ ಯೋಜನೆ ಕಾರ್ಯಕ್ರಮದಲ್ಲಿ ಭಾಗವಹಿಸುವುದು ತುಂಬಾ ಕಡಿಮೆ ಎಂದು ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಪುಷ್ಪಾ ಪಾಟೀಲ ಹೇಳಿದರು.
ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು, ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಲಯ ಮತ್ತು ಶ್ರೀ ಚಿನ್ನಾಂಬಿಕ ಇನ್‌ಸ್ಟಿಟ್ಯೂಟ್ ಆಫ್ ಪ್ಯಾರಾ ಮೆಡಿಕಲ್ ಕಾಲೇಜು ಆಶ್ರಯದಲ್ಲಿ ಗುರುವಾರ ಎನ್.ಎಸ್.ವಿ. ಪಕ್ಷಾಚರಣೆ ಅಂಗವಾಗಿ ಜಾಥಾ ಮತ್ತು ಮೈಕಿಂಗ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಸಂತಾನಹರಣ ಶಸ್ತ್ರಚಿಕಿತ್ಸೆಯಲ್ಲಿ ಗಾಯ, ಹೊಲಿಗೆ ಇರುವುದಿಲ್ಲ. ಚಿಕಿತ್ಸಾ ವಿಧಾನಕ್ಕೆ ಕೇವಲ 5ರಿಂದ 10 ನಿಮಿಷಗಳಲ್ಲಿ ಮಾತ್ರ ಸಾಕು. ಶಸ್ತ್ರಚಿಕಿತ್ಸೆಯಾದ 30 ನಿಮಿಷಗಳ ಆನಂತರ ಮನೆಗೆ ಹೋಗಬಹುದು. ಎನ್.ಎಸ್.ವಿ.ಯಿಂದ ಪುರುಷರಲ್ಲಿ ಲೈಂಗಿಕ ಸಾಮರ್ಥ್ಯ ಕಡಿಮೆಯಾಗುವುದಿಲ್ಲ. ಪುರುಷತ್ವಕ್ಕೆ ಹಾನಿಯಾಗುವುದಿಲ್ಲ. ಯಾವುದೇ ರೀತಿಯ ದೈಹಿಕ ನಿಶ್ಶಕ್ತಿ ಉಂಟಾಗುವುದಿಲ್ಲ. ಒಂದು ವೇಳೆ ಕೆಲಸವು ಶ್ರಮದಾಯಕವಾಗಿದ್ದಲ್ಲಿ ಶಸ್ತ್ರಚಿಕಿತ್ಸೆಯಾದ 48 ಗಂಟೆಗಳ ಆನಂತರ ಕೆಲಸಕ್ಕೆ ಹೋಗಬಹುದು ಎಂದರು. ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಜಿ.ವಿ. ಕೊಣ್ಣೂರ ಮಾತನಾಡಿ, ನಂ. 21ರಿಂದ ಡಿ. 4ರ ವರೆಗೆ ಪುರುಷ ಸಂತಾನಹರಣ ಶಸ್ತ್ರಚಿಕಿತ್ಸೆಯ ಪಕ್ಷಾಚರಣೆಯಿದ್ದು, ಕುಟುಂಬ ಕಲ್ಯಾಣ ಯೋಜನೆಯಲ್ಲಿ ಪುರುಷರ ಸಹಭಾಗಿತ್ವಕ್ಕೆ ಉತ್ತೇಜನ ನೀಡಿ ಅರ್ಹ ಪುರುಷ ಫಲಾನುಭವಿಗಳಿಗೆ ಎನ್‌ಎಸ್‌ವಿ ಶಸ್ತ್ರಚಿಕಿತ್ಸೆ ಮಾಡಿಸುವುದೇ ಪಕ್ಷಾಚರಣೆಯ ಉದ್ದೇಶವಾಗಿದೆ ಎಂದು ತಿಳಿಸಿದರು.ತಾಲೂಕು ಆರೋಗ್ಯಾಧಿಕಾರಿ ಡಾ. ರೇಣುಕಾ ಕೊರವನವರ ಮಾತನಾಡಿ, ಮಹಿಳೆಯರಿಗೆ ಗರ್ಭಾವಸ್ಥೆಯಿಂದ ಹಿಡಿದು ಹೆರಿಗೆಯಾಗಿ ಮಕ್ಕಳ ಪಾಲನೆ-ಪೋಷನೆ, ಮಕ್ಕಳಿಗೆ ಲಸಿಕೆ ಕೊಡಿಸುವುದು, ಕುಟುಂಬ ಕಲ್ಯಾಣ ಕಾರ್ಯಕ್ರಮದಲ್ಲಿ ಸಂತಾನ ನಿಯಂತ್ರಣಕ್ಕಾಗಿ ತಾತ್ಕಾಲಿಕ ಮತ್ತು ಶಾಶ್ವತ ವಿಧಾನಗಳನ್ನು ಅಳವಡಿಸುವುದು - ಇವೆಲ್ಲವು ಮಹಿಳೆಯರಿಗಾಗಿಯೇ ಸೀಮಿತವಾಗಿವೆ. ಕುಟುಂಬದಲ್ಲಿ ಪುರುಷರ ಸಹಭಾಗಿತ್ವವೇ ಇಲ್ಲದಂತಾಗಿದೆ. ಕಾರಣ ಮಹಿಳೆಯರಿಗೆ ಆರೋಗ್ಯ ಸಮಸ್ಯೆಗಳಿದ್ದಲ್ಲಿ, ರಕ್ತಹೀನತೆಯಿಂದ ಬಳಲುತ್ತಿದ್ದಲ್ಲಿ, ಪುರುಷರು ಎನ್.ಎಸ್.ವಿ. ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬಹುದು. ಇದರ ಸದುಪಯೋಗವನ್ನು ಅರ್ಹ ಪುರುಷರು ಪಡೆದುಕೊಳ್ಳಲು ಆರೋಗ್ಯ ಇಲಾಖೆಯ ಸ್ಥಳೀಯ ಆಶಾ, ಆರೋಗ್ಯ ಸಿಬ್ಬಂದಿ ಮತ್ತು ಸರ್ಕಾರಿ ಆಸ್ಪತ್ರೆಗಳನ್ನು ಸಂಪರ್ಕಿಸಲು ತಿಳಿಸಿದರು.
ಇದೇ ಸಂದರ್ಭದಲ್ಲಿ ಜಾಥಾ ಕಾರ್ಯಾಕ್ರಮವನ್ನು ಶ್ರೀ ಸಿದ್ದೇಶ್ವರ ಕಾಲೇಜನ ಆವರಣದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಘೋಷಣೆಗಳನ್ನು ಕೂಗುತ್ತಾ, ಕರಪತ್ರಗಳನ್ನು ವಿತರಿಸುತ್ತಾ, ವಾಹನದಲ್ಲಿ ಮೈಕಿಂಗ್ ಮೂಲಕ ಜನ ಜಾಗೃತಿ ಮೂಡಿಸಲಾಯಿತು.ಕಾಲೇಜಿನ ಪ್ರಾಂಶುಪಾಲರಾದ ನಾಗೇಶ ಅಪ್ಪೋಜಿ, ಸಿ.ಎಫ್. ಕುಂಬಾರ, ಎಂ.ಪಿ. ಶಿಗ್ಗಾಂವಕರ, ಶಿವಾನಂದ ಕುರಹಟ್ಟಿ, ಬಸವರಾಜ ಕೌಜಗೇರಿ, ಎ.ಎಂ. ಕಾಡದೇವರಮಠ, ಐ.ಬಿ. ಗುಳ್ಳನ್ನವರ, ರೇಖಾ ಹಿರೆಹೋಳಿ, ಭಾರತಿ ಮಾರಿಹಾಳ, ಅಶ್ವಿನಿ ಕುರಿ, ಲಕ್ಷ್ಮೀ ಮನಿಗೇನಿ, ಹನುಮಂತ ಭರಮಸಾಲಿ, ಎಫ್.ಎಚ್. ಹುಬ್ಬಳ್ಳಿ, ಆಶಾ ಕಾರ್ಯಕರ್ತೆಯರು ಮತ್ತು ಉಪನ್ಯಾಸಕರು ಇದ್ದರು.