ಜಿಲ್ಲೆಯ ಭೀಮಾ ತೀರದಲ್ಲಿ ಪಂಪ್‌ಸೆಟ್‌ ಕೇಬಲ್‌ ಕಳ್ಳರ ಹಾವಳಿ ಜೋರಾಗುತ್ತಿದೆ. ರಾತ್ರಿ ಕರೆಂಟ್‌ ಹೋದ ತಕ್ಷಣವೇ ತಮ್ಮ ಕೈಚಳಕ ತೋರಿಸುತ್ತಿರುವ ಕಳ್ಳರು ಬೆಲೆಬಾಳುವ ಕೇಬಲ್‌ಗಳನ್ನು ಹೊತ್ತೊಯ್ದು ರೈತರನ್ನು ಕಂಗಾಲಾಗಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿಜಿಲ್ಲೆಯ ಭೀಮಾ ತೀರದಲ್ಲಿ ಪಂಪ್‌ಸೆಟ್‌ ಕೇಬಲ್‌ ಕಳ್ಳರ ಹಾವಳಿ ಜೋರಾಗುತ್ತಿದೆ. ರಾತ್ರಿ ಕರೆಂಟ್‌ ಹೋದ ತಕ್ಷಣವೇ ತಮ್ಮ ಕೈಚಳಕ ತೋರಿಸುತ್ತಿರುವ ಕಳ್ಳರು ಬೆಲೆಬಾಳುವ ಕೇಬಲ್‌ಗಳನ್ನು ಹೊತ್ತೊಯ್ದು ರೈತರನ್ನು ಕಂಗಾಲಾಗಿಸುತ್ತಿದ್ದಾರೆ.ಬರಗಾಲದ ಸಮಸ್ಯೆ ಜತೆಗೆ ಸಾಲಸೋಲ ಮಾಡಿರುವ ಕೃಷಿಕರಿಗೆ ಪಂಪ್‌ಸೆಟ್‌ಗಳಿಂದ ಕೇಬಲ್‌ ಕಳವಾಗುತ್ತಿರುವುದು ತಲೆನೋವಾಗಿದೆ. ಮಣ್ಣೂರು, ಶೇಷಗಿರಿವಾಡಿ, ಕುಡಿಗನೂರ್‌ ಸಹಿತ ಗಾಣಗಾಪೂರವರೆಗೂ ಇರುವ ಭೀಮಾ ತೀರದ ಹತ್ತಾರು ಹಳ್ಳಿಗಳ ರೈತರು ಬೆಚ್ಚಿ ಬಿದ್ದಿದ್ದಾರೆ.ಸಾಲಸೋಲ ಮಾಡಿ ಕೇಬಲ್‌ ಹಾಕಿ ಇನ್ನೇನು ಅಳಿದುಳಿದ ಭೀಮಾ ನೀರನ್ನೆತ್ತಿ ಬೆಳೆ ಉಳಿಸಿಕೊಳ್ಳುವ ಹಂಬಲ ನಮ್ಮದಾಗಿದ್ದು ಕಳ್ಳರು ಕೇಬಲ್‌ಗಳನ್ನೇ ತುಂಡರಿಸಿಕೊಂಡು ಹೋಗುತ್ತಿದ್ದಾರೆ. ಇದರಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದೇವೆಂದು ಕೇಬಲ್‌ ಕಳವಿನಿಂದ ಕಂಗಾಲಾಗಿರುವ ಮಣ್ಣೂರಿನ ಅನೇಕ ರೈತರು ಗೋಳಾಡುತ್ತಿದ್ದಾರೆ.

1,700 ಮೀಟರ್‌ ಕೇಬಲ್‌ ಕಳವು!: ಅಫಜಲ್ಪುರ ತಾಲೂಕಿನ ಮಣ್ಣೂರು ಗ್ರಾಮದಲ್ಲಿ ಸೆ.17ರ ರಾತ್ರಿ 39 ಕ್ಕೂ ಹೆಚ್ಚು ರೈತರ ಕೇಬಲ್‌ ಕಳವು ಮಾಡಲಾಗಿದೆ. ರಾತ್ರಿ 10. 30 ರ ವರೆಗೂ ಅಂದು ರೈತರು ಕರೆಂಟ್‌ ಪೂರೈಕೆ ಇದ್ದಾಗ ಹೊಲಗದ್ದೆಗೆ ನೀರುಣಿಸಿದ್ದಾರೆ. ಬಳಿಕ ವಿದ್ಯುತ್‌ ಕಡಿತವಾದ್ದರಿಂದ ರೈತರು ಮನೆಗೆ ಹೋಗಿದ್ದಾರೆ. ಇದೇ ಸಂದರ್ಭ ಬಳಸಿಕೊಂಡ ಕಳ್ಳರು ಕೇಬಲ್‌ ಕಳವುಗೈದು ಪರಾರಿಯಾಗಿದ್ದಾರೆ. ಅಂದಾಜು 1,700 ಮೀ.ಕೇಬಲ್‌ ಕಳವಾಗಿದೆ ಎಂದು ರೈತರು ದೂರಿದ್ದಾರೆ. ಊರಲ್ಲಿ ಕಳೆದ 2 ತಿಂಗಳ ಹಿಂದೆ ನಡೆದ ಇಂತಹದ್ದೇ ಕಳವಿನ ಪ್ರಕರಣದಲ್ಲಿ 30 ರೈತರಿಗೆ ಸೇರಿದ್ದ 1,500 ಮೀಟರ್‌ ಕೇಬಲ್‌ ಕಳವುಗೈಯ್ಯಲಾಗಿತ್ತು. ಆದರೂ ರೈತರಿಗೆ ಭಾರಿ ಹಾನಿಯಾಗಿತ್ತು. ಇವೆರಡೂ ಪ್ರಕರಣಗಳಲ್ಲಿ ರೈತರ 2,700 ಮೀಟರ್‌ ಕೇಬಲ್‌ ಕಳವಾಗಿದ್ದು, ಅಂದಾಜು 16 ರಿಂದ 18 ಲಕ್ಷ ರು ನಷ್ಟವಾಗಿದೆ ಎಂದು ರೈತರು ಚಿಂತಾಕ್ರಾಂತರಾಗಿದ್ದಾರೆ. ಪೊಲೀಸರ ನಿರ್ಲಕ್ಷ್ಯ: ಇವೆರಡೂ ಪ್ರಕರಣಗಳ ಬಗ್ಗೆ ಪೊಲೀಸರ ಗಮನಕ್ಕೆ ತಂದರೂ ಇಂದಿಗೂ ಯಾವುದೇ ಕ್ರಮಕೈಗೊಂಡಿಲ್ಲ. ಸದರಿ ಕಳವಿನ ಪ್ರಕರಣಗಳು ನೇರವಾಗಿ ರೈತರನ್ನೇ ಹತಾಶರನ್ನಾಗಿ ಮಾಡಿದೆ. ಮಳೆ ಕೊರತೆಯಿಂದಾಗಿ ಬರಗಾಲದಲ್ಲಿದ್ದೇವೆ. ಸಾಲಸೋಲ ಮಾಡಿ ನಾವು ನೀರಾವರಿ ಮಾಡಿದ್ದೇವೆ. ಕೇಬಲ್‌ ರಾತ್ರೋರಾತ್ರಿ ಕಳವು ಮಾಡಲಾಗುತ್ತಿದ್ದರೂ ಪೊಲೀಸರು ಯಾಕೆ ಇನ್ನೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ರೈತರು ಪ್ರಶ್ನಿಸಿದ್ದಾರೆ.ನಾವು ಕೇಬಲ್‌ ಕಳವಾಗಿವೆ, ಕಳ್ಳರ ಹಿಡಿರಿ ಎಂದರೆ ಕೇಳೋದಿಲ್ಲ, ದೋ ನಂಬರ್ ಕೆಲ್ಸಾ ನಡಿಯೋ ಕಡೆ ಓಡೋಡಿ ಹೋಗ್ತಾರೆ. ನಮ್ಮ ಗೋಳು ಪೊಲೀಸರು ಎಂದು ಆಲಿಸುವರೋ ಎಂದು ಮಣ್ಣೂರನ ಭೀಮಾ ನದಿ ತೀರದ ನೀರಾವರಿ ರೈತರು ಗೋಳಾಡುತ್ತಿದ್ದಾರೆ.ರೈತ ಸಂಘ ಹಸಿರು ಸೇನೆ, ಕರವೇ ಹಾಗೂ ವಿವಿದ ರೈತ ಸಂಘಟನೆಗಳ ಮುಖಂಡರಾದ ಮಹಾಂತೇಶ ಜಮಾದಾರ್‌, ಮಂಜುನಾಥ ನೈಕೋಡಿ, ಕರವೇ ಉಮೇಶ, ಸಿದ್ದು, ಶ್ರೀಶೈಲ ಧೂಳೆ ಸಹಿತ ಅನೇಕರು ಪೊಲೀಸ್‌ ಠಾಣೆಗೆ ರೈತರೊಂದಿಗೆ ಹೋಗಿ ಪಿಎಸ್‌ಐ ಅವರಿಗೆ ಮನವಿ ಸಲ್ಲಿಸಿ ಕೇಬಲ್ ಕಳ್ಳರನ್ನು ತಕ್ಷಣ ಬಂಧಿಸಿ ರೈತರಿಗೆ ನ್ಯಾಯ ದೊರಕಿಸುವಂತೆ ಆಗ್ರಹಿಸಿದ್ದಾರೆ.

ಬರಗಾಲದ ತೊಂದರೆಯಲ್ಲಿರುವ ನಾವು ಕೇಬಲ್‌ ಮತ್ತೆ ಖರೀದಿಸುವ ಸ್ಥಿಯಲ್ಲಿಲ್ಲ. ಕಳ್ಳರ ಹಾವಳಿಗೆ ಸಾಕಾಗಿದೆ. ತಕ್ಷಣ ಪೊಲೀಸರು ರೈತರ ನೆರವಿಗೆ ಧಾವಿಸಬೇಕು. ಕಳ್ಳರ ತಂಡ ಪತ್ತೆ ಹಚ್ಚಿ ಕ್ರಮಕೈಗೊಳ್ಳಬೇಕು. ಪೊಲೀಸರು ತಕ್ಷಣ ತನಿಖೆ ಮಾಡಿ ಕಳ್ಳರನ್ನುಹಿಡಿದು ಕೇಬಲ್‌ ಜಪ್ತಿ ಮಾಡಿ ರೈತರಿಗೆ ನ್ಯಾಯ ಕೊಡಿಸಬೇಕು ಎಂದು ಕಲಬುರಗಿ ರೈತಸಂಘ, ಹಸಿರು ಸೇನೆ ಅಧ್ಯಕ್ಷ ಮಾಹಾಂತೇಶ ಜಮಾದಾರ್‌ ಹೇಳಿದರು.