ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ತಾಲೂಕು ಕಚೇರಿಯಲ್ಲಿ ಹೆಚ್ಚಾಗಿರುವ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಬೇಕುವಂತೆ ತಹಸೀಲ್ದಾರ್ ಪರುಶುರಾಮ್ ಸತ್ತಿಗೇರಿ ಅವರಿಗೆ ರೈತರು ದೂರು ನೀಡಿದರು.ಪಟ್ಟಣ ತಾಲೂಕು ಕಚೇರಿಗೆ ಆಗಮಿಸಿದ ರೈತ ಸಂಘದ ಕಾರ್ಯಕರ್ತರು ತಹಸೀಲ್ದಾರ್‌ಗೆ ಮನವಿ ಸಲ್ಲಿಸಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ನೋಂದಣಾಧಿಕಾರಿ ಹಾಗೂ ಸರ್ವೇ ಇಲಾಖೆಗಳಲ್ಲಿ ರೈತರು ಹಾಗೂ ಸಾರ್ವಜನಿಕರ ಕೆಲಸ ಸರಿಯಾದ ಸಮಯಕ್ಕೆ ಆಗುತ್ತಿಲ್ಲ. ರೈತರು ಹಾಗೂ ಸಾರ್ವಜನಿಕರು ನೇರವಾಗಿ ಕಚೇರಿಗೆ ಬಂದರೆ ಕೆಲಸಗಳನ್ನು ಮಾಡಿಕೊಡುತ್ತಿಲ್ಲ. ಬದಲಾಗಿ ಮಧ್ಯವರ್ತಿಗಳು ಯಾರು ಬಂದಿದ್ದಾರೆ ಎಂದೇ ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಮಧ್ಯವರ್ತಿಗಳ ಹಾವಳಿ ತಪ್ಪಿಸಬೇಕು ಎಂದು ಆಗ್ರಹಿಸಿದರು.ಸರ್ವೇ ಕಚೇರಿಯಲ್ಲಿ ಕೇವಲ ದಳ್ಳಾಳುಗಳು ಹಾಗೂ ರಿಯಲ್ ಎಸ್ಟೇಟ್‌ಗಳ ಕೆಲಸ ಮಾತ್ರ ಸುಗಮವಾಗಿ ನಡೆಯುತ್ತಿದೆ. ಆದರೆ, ಯಾವುದೇ ರೈತರ ಕೆಲಸಗಳು ಸಹ ನಡೆಯುತ್ತಿಲ್ಲ. ಉಪ ನೋಂದಣಾಧಿಕಾರಿ ಕಚೇರಿ ಸರಿಯಾದ ಸಮಯಕ್ಕೆ ಕೆಲಸಕ್ಕೆ ಹಾಜರಾಗುತ್ತಿಲ್ಲ. ಯಾವಾಗ ಬರುತ್ತಾರೆ, ಯಾವಾಗ ಹೋಗುತ್ತಾರೆ ಒಂದೂ ತಿಳಿಯುತ್ತಿಲ್ಲ ಎಂದು ದೂರಿದರು.
ಯಾವೊಬ್ಬ ಅಧಿಕಾರಿಗಳೂ ಹೊರ ಹೋಗುವಾಗ ಎಲ್ಲಿಗೆ ಹೋಗುತ್ತಿದ್ದೇನೆ ಎಂದು ಹಾಜರಾತಿಯಲ್ಲಿ ಬರೆದು ಸಹಿ ಮಾಡಿ ಹೋಗುವ ಪ್ರೌವೃತ್ತಿ ಬೆಳಸಿಕೊಂಡಿಲ್ಲ. ಹಾಜರಾತಿಯಲ್ಲಿ ನಮೂದಿಸಿದರೆ ಇದರಿಂದ ಸಾರ್ವಜನಿಕರು ಹಾಗೂ ರೈತರಿಗೆ ಅನುಕೂಲವಾಗಲಿದೆ. ಅಧಿಕಾರಿಗಳು ಬರುವಿಕೆಗಾಗಿ ರೈತರು ಕಾಯುವ ಸ್ಥಿತಿ ತಪ್ಪುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಗ್ರಾಮಲೆಕ್ಕಿಗರಿಗೆ ನಿಗದಿಯಾದ ಗ್ರಾಮಗಳಿಗೆ ತೆರಳಿ ಕೆಲಸ ಮಾಡಬೇಕು. ಇದರಿಂದ ವಯೋವೃದ್ಧರು, ವಿಕಲಚೇತನರಿಗೆ ಮಾಶಾಸನ ಸೇರಿದಂತೆ ಇತರೆ ಸರ್ಕಾರದ ಸೌಲಭ್ಯ ಪಡೆದುಕೊಳ್ಳಲು ಅನುಕೂಲವಾಗಿದೆ. ಈ ನಿಟ್ಟಿನಲ್ಲಿ ಆದೇಶ ನೀಡಬೇಕು ಎಂದು ಆಗ್ರಹಿಸಿದರು.
ತಾಲೂಕು ಸರ್ವೇ ಅಧಿಕಾರಿ ಒಬ್ಬರೆ ಕರ್ತವ್ಯ ನಿರ್ವಹಿಸುತ್ತಿದ್ದು, ಕಳೆದ 2 ವರ್ಷಗಳ ಹಳೇ ಪ್ರಕರಣಗಳು ಇನ್ನು ಹಾಗೆ ಇಳಿದುಕೊಂಡಿವೆ. ಇದರಿಂದ ರೈತರಿಗೆ ಅನಾನುಕೂಲ ಉಂಟಾಗಿದೆ. ತಾವು ಮೇಲಾಧಿಕಾರಿಗಳು ಅಥವಾ ಸರ್ಕಾರದ ಗಮನಕ್ಕೆ ತಂದು ತಾಲೂಕಿಗೆ ಮತ್ತೊಬ್ಬ ಸರ್ವೇ ಅಧಿಕಾರಿಯನ್ನು ನೇಮಿಸಿಕೊಳ್ಳುವಂತೆ ಮನವಿ ಮಾಡಿದರು.ತಾಲೂಕಿನಾದ್ಯಂತ ಅರಣ್ಯ ಪ್ರದೇಶ ಸೇರಿದಂತೆ ಇತರೆಡೆಗಳಲ್ಲಿ ಎಗ್ಗಿಲ್ಲದೆ ಗಣಿಗಾರಿಕೆ ನಡೆಯುತ್ತಿದೆ. ಕೆಆರ್‌ಎಸ್ ಅಣೆಕಟ್ಟೆ ಸುತ್ತಲಿನ 20 ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಸದಂತೆ ಆದೇಶವಿದ್ದರೂ ಸಹ ರಾಜಾರೋಷವಾಗಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಇದಕ್ಕೆ ಕಡಿವಾಣ ಹಾಕುವಂತೆ ಆಗ್ರಹಿಸಿದರು.
ರೈತರ ಮನವಿ ಆಲಿಸಿದ ತಹಸೀಲ್ದಾರ್ ತಾವು ದೂರಿರುವ ಸಮಸ್ಯೆಗಳನ್ನು ಶೀಘ್ರ ಪರಿಹರಿಸಲಾಗುವುದು. ಅಕ್ರಮ ಗಣಿಗಾರಿಕೆ ತಡೆಗೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ. ತಂಡ ರಚಿಸಿ ಕಾರ್ಯಪ್ರೌವೃತ್ತರಾಗುವುದಾಗಿ ಭರವಸೆ ನೀಡಿದರು.ಈ ವೇಳೆ ಮೇಳಾಪುರ ಸ್ವಾಮಿಗೌಡ, ದೊಡ್ಡಪಾಳ್ಯ ಜಯರಾಮ್, ಶ್ರೀನಿವಾಸ ಅಗ್ರಹಾರ ಶಂಕರೇಗೌಡ, ಬಾಬುರಾಯನಕೊಪ್ಪಲು ಬಿ.ಎಸ್ ರಮೇಶ್, ನಾಗೇಂದ್ರ, ಎಂ.ಶೆಟ್ಟಹಳ್ಳಿ ಪುರುಷೋತ್ತಮ. ಪಾಲಹಳ್ಳಿ ರಾಮೇಗೌಡ ಸೇರಿದಂತೆ ಇತರರು ಇದ್ದರು.