ಬಿಡಾಡಿ ದನಗಳ ಹಾವಳಿ: ಸಂಚಾರಕ್ಕೆ ಸಂಚಕಾರ

| Published : Oct 27 2024, 02:37 AM IST / Updated: Oct 27 2024, 02:38 AM IST

ಸಾರಾಂಶ

ಬಿಡಾಡಿ ದನಗಳನ್ನು ನಿಯಂತ್ರಿಸುವಂತೆ ಸಾರ್ವಜನಿಕರು ಲಿಖಿತ ಮನವಿ ಕೊಟ್ಟರೂ ನಗರಸಭೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ

ಶಿವಾನಂದ ಪಿ.ಮಹಾಬಲಶೆಟ್ಟಿ

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಜಾನುವಾರು ಮಾಲೀಕರು ತಮ್ಮ ಎಮ್ಮೆ, ಹಸುಗಳು ಹಾಲು ಹಿಂಡಿಕೊಂಡು ಬೀದಿಗೆ ಬಿಡುವ ಪ್ರವೃತ್ತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ರಬಕವಿ-ಬನಹಟ್ಟಿ ಅವಳಿ ನಗರಗಳಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಬಿಡಾಡಿ ದನಗಳ ಸಂಖ್ಯೆ ಅಧಿಕವಾಗಿದೆ. ರಸ್ತೆಯಲ್ಲಿ ಸಂಚರಿಸುವ ವಾಹನ ಚಾಲಕರು ಹರಸಾಹಸ ಪಡುವಂತಾಗಿದ್ದು, ರಸ್ತೆ ಸಂಚಾರಕ್ಕೇ ಸಂಚಕಾರ ಬಂದಂತಿದೆ.

ಬನಹಟ್ಟಿ ನಗರದ ಗಾಂಧಿ ವೃತ್ತ, ಸೋಮವಾರ ಪೇಟೆ, ಮಂಗಳವಾರ ಪೇಟೆ, ರಬಕವಿ ನಗರದ ಹೊಸಪೇಟೆ ಲೈನ್, ಢಪಳಾಪೂರ ಕಿರಾಣಿ ಅಂಗಡಿ ಬಳಿ, ಶಂಕರಲಿಂಗ ದೇವಸ್ಥಾನ ಸರ್ಕಲ್‌ನ ಮುಖ್ಯ ರಸ್ತೆಯ ಮೇಲೆ ದನಗಳು ಅಡ್ಡಾದಿಡ್ಡಿಯಾಗಿ ಕೂತು ವಾಹನ ಸವಾರರಿಗೆ ಕಂಟಕ ಮಾಡುತ್ತಿವೆ. ಕೆಲವೊಮ್ಮೆ ವಾಹನಗಳು ದನಗಳ ಕಾಲುಗಳ ಮೇಲೆಯೇ ಹಾದು ಹೋಗಿರುವ ಘಟನೆಗಳೂ ನಡೆದಿವೆ. ಆದರೂ ದನಗಳ ಮಾಲೀಕರು ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ದ್ವಿಚಕ್ರ ಸೇರಿದಂತೆ ಉಳಿದ ವಾಹನಗಳ ಸವಾರರಿಗೆ ನಿತ್ಯ ಸಂಚಾರ ಸವಾಲಾಗಿದೆ.

ನಗರಸಭೆ ಹಿಂದೆ ಇದಕ್ಕೆ ಕಡಿವಾಣ ಹಾಕುವಲ್ಲಿ ಅಗತ್ಯ ಕ್ರಮ ಜರುಗಿಸಿತ್ತು. ಇದೀಗ ಹೊಸ ಅಧ್ಯಕ್ಷ-ಉಪಾಧ್ಯಕ್ಷರು ಆಯ್ಕೆಗೊಂಡಿದ್ದು ಬರುವ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಂಡು ಅಧಿಕಾರಿಗಳ ಜೊತೆ ಸಮಾಲೋಚಿಸಿ ಜಾನುವಾರುಗಳ ನಿಯಂತ್ರಣಕ್ಕಾಗಿ ಮಾಲೀಕರಿಗೆ ಕಠಿಣ ದಂಡ ವಿಧಿಸುವ ಮೂಲಕ ಸುಗಮ ಸಂಚಾರಕ್ಕೆ ಮಹತ್ವದ ನಿರ್ಧಾರ ಕೈಗೊಳ್ಳಬೇಕೆಂಬುದು ನಾಗರಿಕರ ಒತ್ತಾಯವಾಗಿದೆ.

ಬಿಡಾಡಿ ದನಗಳನ್ನು ನಿಯಂತ್ರಿಸುವಂತೆ ಸಾರ್ವಜನಿಕರು ಲಿಖಿತ ಮನವಿ ಕೊಟ್ಟರೂ ನಗರಸಭೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ದೂರವಾಣಿ ಕರೆ ಮಾಡಿ ತಿಳಿಸಿದರೂ ಜನರ ಮನವಿಗೆ ಕವಡೆ ಕಾಸಿನ ಬೆಲೆ ನೀಡುತ್ತಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ವಿಜಯಕುಮಾರ ಮಧುರಖಂಡಿ ಆರೋಪಿಸಿದ್ದಾರೆ.

ಗೂಳಿ-ಕತ್ತೆಗಳ ಹಾವಳಿ:

ಅವಳಿ ಪಟ್ಟಣದಲ್ಲಿ ಗೂಳಿ ಹಾಗೂ ಕತ್ತೆಗಳ ಹಾವಳಿ ಹೆಚ್ಚಿದೆ. ಪಟ್ಟಣದ ಮಧ್ಯ ಭಾಗದ ವೃತ್ತಗಳಲ್ಲಿ ಕಾದಾಟಕ್ಕಿಳಿದು ಸಾರ್ವಜನಿಕರ ಸಂಚಾರಕ್ಕೆ ಅಡಚಣೆ ಉಂಟು ಮಾಡುತ್ತಿವೆ. ಬೀದಿ ನಾಯಿಗಳ ಹಾವಳಿಯೂ ಮಿತಿ ಮೀರಿದ್ದು, ಜನತೆ ನಿತ್ಯ ತೊಂದರೆ ಅನುಭವಿಸಬೇಕಾಗಿದೆ.

ರಸ್ತೆ ಮೇಲಿರುವ ಬಿಡಾಡಿ ದನಗಳನ್ನು ಗೋಶಾಲೆಗಳಿಗೆ ಹಸ್ತಾಂತರಿಸಿ ಮಾಲೀಕರಿಗೆ ದಂಡ ವಿಧಿಸುವಂತೆ ನಗರಸಭೆ ಅಧಿಕಾರಿಗಳಿಗೆ ಮನವಿ ಮಾಡಿದ್ದು, ಇದರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಪ್ರಶಾಂತ ಕೊಳಕಿ ಒತ್ತಾಯಿಸಿದ್ದಾರೆ.

ರಸ್ತೆ ಮೇಲೆ ದನಗಳನ್ನು ಬಿಡುವ ಮಾಲೀಕರನ್ನು ಗುರುತಿಸಿ ಎಚ್ಚರಿಕೆ ನೀಡಲಾಗಿದೆ. ರಸ್ತೆ ಮೇಲೆ ದನಗಳು ಕಂಡು ಬಂದರೆ ತಕ್ಷಣ ಗೋಶಾಲೆಗೆ ಕಳಿಸುವಂತೆ ಸಂಬಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಜಗದೀಶ ಈಟಿ, ಪೌರಾಯುಕ್ತರು, ರಬಕವಿ-ಬನಹಟ್ಟಿ.

ಅವಳಿ ನಗರಗಳ ಪ್ರವೇಶಿಸುತ್ತಿದ್ದಂತೆ ಬಿದರಿ ಸಮುದಾಯ ಭವನ ಬಳಿ ಕತ್ತೆಗಳು ಯರ‍್ರಾಬರ‍್ರಿಯಾಗಿ ಅಲೆದಾಡುತ್ತವೆ. ವೈಭವ ಚಿತ್ರಮಂದಿರದಿಂದ ಎಂ.ಎಂ.ಬಂಗ್ಲೆ, ಮುಖ್ಯ ಮಾರುಕಟ್ಟೆ ಪ್ರದೇಶ, ರಬಕವಿಯ ಮುಖ್ಯರಸ್ತೆ, ಮುತ್ತೂರ ಗಲ್ಲಿ, ತರಕಾರಿ ಮಾರುಕಟ್ಟೆ, ಹಳೆಯ ಬಸ್ ನಿಲ್ದಾಣದ ಬಳಿ ಬಿಡಾಡಿ ದನಗಳ ಹಾವಳಿ ಮಿತಿಮೀರಿದೆ. ನಗರಸಭೆ ತಕ್ಷಣ ಅಗತ್ಯ ಕ್ರಮ ಕೈಗೊಂಡು ಜನತೆಗೆ ನೆಮ್ಮದಿ ನೀಡಬೇಕಿದೆ.

ರವಿ ದೇಸಾಯಿ, ಯುವ ಉದ್ಯಮಿ, ರಬಕವಿ.