Menace of wild elephants around the Thanigebailu Bhadra Wildlife Range
ತರೀಕೆರೆ: ತಣಿಗೆಬೈಲು ಭದ್ರ ವನ್ಯ ಜೀವಿ ವಲಯದ ಸುತ್ತಮುತ್ತಲ ಗ್ರಾಮಗಳ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಮೀತಿ ಮೀರಿದ್ದು ಗ್ರಾಮದ ರೈತರು ಬೆಳೆದಿರುವ ತೋಟದ ಬೆಳೆಗಳಾದ ಅಡಿಕೆ, ತೆಂಗು, ಬಾಳೆ, ಕಾಫಿ ಕಾಳು ಮೆಣಸು ಬೆಳೆಗಳು ಸೇರಿದಂತೆ ಅಲ್ಪ ಕಾಲದ ಬೆಳೆಗಳಾದ ಭತ್ತ ರಾಗಿ ಆಲೂಗಡ್ಡೆ, ಬಟಾಣಿ, ಜೋಳ, ಶೇಂಗಾ ಮುಂತಾದ ಬೆಳೆಗಳನ್ನು ತಿಂದು, ತುಳಿದು ಹಾಕಿ ಅಪಾರ ಪ್ರಮಾಣದ ಬೆಳೆಗಳನ್ನು ನಾಶ ಮಾಡುತ್ತಿದೆ.
ಕಳೆದ ಕೆಲ ದಿನಗಳಿಂದ ಪ್ರತಿ ದಿನ ಗ್ರಾಮಗಳತ್ತ ಬರುತ್ತಿರುವ ಕಾಡಾನೆಗಳ ದಾಳಿಯಿಂದ ಗ್ರಾಮಸ್ಥರು ಜೀವ ಭಯದಿಂದ ದಿನ ದೂಡುವಂತಾಗಿದ್ದು, ಹುಣಸೆಬೈಲು ಗ್ರಾಮದ ಗುಂಡಪ್ಪ ಎಂಬುವರು ತಮ್ಮ ಮನೆಯ ಮುಂದೆ ಕಟ್ಟಿ ಹಾಕಿದ್ದ ಹಸುವೊಂದನ್ನು ಕಾಡಾನೆ ತನ್ನ ಸೊಂಡಿಲಿನಿಂದ ಎತ್ತಿ ನೆಲಕ್ಕೆ ಹಾಕಿರುವ ಕಾರಣ ಹಸುವಿನ ಸೊಂಟ ಮತ್ತು ಕೈ ಕಾಲುಗಳಿಗೆ ಹಾನಿಯಾಗಿದೆ ಎಂದು ನಂದಿಬಟ್ಟಲು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಎನ್.ಪಿ. ಕೃಷ್ಣೇಗೌಡ ಆಪಾದಿಸಿದ್ದಾರೆ.ಸಂಜೆ 5 ಗಂಟೆಯ ನಂತರ ಭದ್ರ ಅಭಯಾರಣ್ಯದಿಂದ ಹೊರ ಬರುವ ಕಾಡಾನೆಗಳು ತಣಿಗೆಬೈಲು, ಹುಣಸೆಬೈಲು, ಜೈಪುರ, ನಂದಿಬಟ್ಟಲು, ಮುಂತಾದ ಗ್ರಾಮಗಳ ಸುತ್ತಮುತ್ತ ಸಂಚರಿಸುತ್ತಾ ರೈತರ ಬೆಳೆಗಳನ್ನು ಹಾಳು ಗೆಡುವುತ್ತಿರುವುದರ ಜೊತೆಗೆ ರೈತರು ತಮ್ಮ ಕೊಳವೆಬಾವಿಗಳಿಗೆ ಅಳವಡಿಸಿರುವ ಮೋಟಾರ್, ಕೇಬಲ್ ಪೈಪುಗಳನ್ನು ಕಿತ್ತು ಹಾಕುತ್ತಿರುವುದರಿಂದ ರೈತರು ತಮ್ಮ ತೋಟದ ಬೆಳೆಗಳಿಗೆ ನೀರನ್ನು ಹಾಯಿಸಲು ತೊಂದರೆ ಪಡುವಂತಾಗಿದ್ದು, ಗ್ರಾಮಸ್ಥರು ಸಂಜೆಯ ನಂತರ ತಮ್ಮ ಮನೆಗಳಿಂದ ಹೊರ ಬರಲು ಹೆದರಿಕೊಳ್ಳುವಂತಾಗಿದೆ ಎಂದು ಈ ಭಾಗದ ಗ್ರಾಮಸ್ಥರು ತಮ್ಮ ಆತಂಕ ವ್ಯಕ್ತ ಪಡಿಸಿದ್ದಾರೆ.
ಭದ್ರ ಅಭಯಾರಣ್ಯದಲ್ಲಿರುವ ಆನೆಗಳಲ್ಲಿ ಒಂದೆರಡು ಆನೆಗಳು ಗ್ರಾಮಗಳತ್ತ ಬರುತ್ತಿರುವುದು ತಮ್ಮ ಗಮನಕ್ಕೆ ಬಂದಿದ್ದು, ತಾವು ಮತ್ತು ತಮ್ಮ ಸಿಬ್ಬಂಧಿ ವರ್ಗದವರು ಸದಾ ಎಚ್ಚರದಿಂದಿದ್ದು ಆನೆಗಳು ಗ್ರಾಮಗಳತ್ತ ಬಾರದಂತೆ ತಡೆದು ವಾಪಸ್ಸು ಓಡಿಸಲು ಪ್ರಯತ್ನಿಸುತ್ತಿದ್ದರೂ ಕೆಲವೊಮ್ಮೆ ತಮ್ಮ ಸಿಬ್ಬಂದಿ ಕಣ್ಣು ತಪ್ಪಿಸಿ ಬರುತ್ತಿರುವ ಕಾಡಾನೆಗಳ ಸುಳಿವು ಸಿಕ್ಕ ತಕ್ಷಣ ತಮ್ಮ ಕಚೇರಿಗೆ ತಿಳಿಸುವಂತೆ ಗ್ರಾಮಸ್ಥರಿಗೆ ಮನವರಿಕೆ ಮಾಡಿದ್ದು ದೂರವಾಣಿ ಕರೆ ಬಂದ ತಕ್ಷಣ ಸ್ಥಳಕ್ಕೆ ದಾವಿಸಿ ಆನೆಗಳನ್ನು ಓಡಿಸಲು ಅಗತ್ಯ ಕ್ರಮ ಕೈಗೊಳ್ಳುತ್ತಿರುವುದಲ್ಲದೇ ಬೆಳೆ ನಷ್ಟದ ಪರಿಶೀಲನೆ ನಡೆಸಿ ಇಲಾಖಾ ವತಿಯಿಂದ ಸೂಕ್ತ ಪರಿಹಾರ ನೀಡಲಾಗುತ್ತಿದೆ ಎಂದು ಭದ್ರ ವನ್ಯ ಜೀವಿ ತಣಿಗೆಬೈಲು ವಲಯ ವಲಯ ಅರಣ್ಯಾಧಿಕಾರಿ ಬಿ.ಸುಧಾಕರ್ ತಿಳಿಸಿದ್ದಾರೆ.----------------
ಫೋಟೋ ಇದೆಃ28ಕೆಟಿಆರ್.ಕೆ.15ಃ ತರೀಕೆರೆ ಸಮೀಪದ ತಣಿಗೆಬೈಲು ಭದ್ರ ವನ್ಯ ಜೀವಿ ವಲಯದ ಕಾಡಾನೆಗಳ ದಾಳಿಯಿಂದ ರೈತರು ಬೆಳೆದಿದ್ದ ಭತ್ತದ ಫಸಲು ನಾಶವಾಗಿರುವುದು.
------------