Menace of Wild Elephants: Torchlight Procession Seeking a Permanent Solution

-ಕಾಡಾನೆ ಓಡಿಸುವ ಕ್ರಮ ಸ್ಥಗಿತಗೊಳಿಸಲು ಆಗ್ರಹ । ಅಂಬೇಡ್ಕರ್ ಹೋರಾಟ ವೇದಿಕೆ ಪ್ರತಿಭಟನೆಕನ್ನಡಪ್ರಭ ವಾರ್ತೆ ಆಲ್ದೂರು

ಕಾಡಾನೆಗಳ ನಿರಂತರ ಉಪಟಳಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕು ಹಾಗೂ ಚಿಕ್ಕಮಗಳೂರು, ಮೂಡಿಗೆರೆ ತಾಲೂಕು ವ್ಯಾಪ್ತಿಗೆ ಆಪರೇಷನ್ ಗಜ ಕಾರ್ಯಾಚರಣೆ ಮೂಲಕ ಕಾಡಾನೆಗಳನ್ನು ಓಡಿಸುವ ಕ್ರಮವನ್ನು ತಕ್ಷಣ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿ ಅಂಬೇಡ್ಕರ್ ಹೋರಾಟ ವೇದಿಕೆಯಿಂದ ಆಲ್ದೂರಿನಲ್ಲಿ ಪಂಜಿನ ಮೆರವಣಿಗೆ ನಡೆಸಿ ಪ್ರತಿಭಟಿಸಲಾಯಿತು.

ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಸರ್ಕಾರ ಮತ್ತು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ವೇದಿಕೆ ಮುಖಂಡ ಹೆಡದಾಳು ಕುಮಾರ್ ಮಾತನಾಡಿ, ಸಕಲೇಶಪುರ, ಬಿಕ್ಕೋಡು ಭಾಗಗಳಲ್ಲಿ ಸಂಚರಿಸುತ್ತಿದ್ದ 55 ಆನೆಗಳ ಗುಂಪನ್ನು ಸಚಿವ ಶಿವಲಿಂಗೇಗೌಡರು ಪ್ರಭಾವ ಬಳಸಿ ಭದ್ರಾ ಅಭಯಾರಣ್ಯಕ್ಕೆ ಓಡಿಸಲು ಪ್ರಯತ್ನಿಸುತ್ತಿರುವುದು ಖಂಡನೀಯ. ಇದರಿಂದ ಮಲೆನಾಡಿನ ರೈತರು, ಕೂಲಿ ಕಾರ್ಮಿಕರ ಬದುಕಿಗೆ ಮತ್ತಷ್ಟು ತೊಂದರೆಯಾಗಲಿದೆ ಎಂದು ಆರೋಪಿಸಿದರು.

ವೇದಿಕೆ ಅಧ್ಯಕ್ಷ ಎಚ್.ನವರಾಜು ಮಾತನಾಡಿ, ಹಾಸನದಲ್ಲಿ ಅರಣ್ಯ ಭೂಮಿ ಇಲ್ಲ, ಮೂಡಿಗೆರೆ ವ್ಯಾಪ್ತಿಯಲ್ಲಿ 1.25 ಲಕ್ಷ ಹೆಕ್ಟೇರ್ ಅರಣ್ಯ ಭೂಮಿ ಇದೆ ಎಂಬ ಕಾರಣ ನೀಡಿ ಆನೆಗಳನ್ನು ಇಲ್ಲಿಗೆ ಸ್ಥಳಾಂತರಿಸುವ ಪ್ರಯತ್ನ ಸರಿಯಲ್ಲ. ಸಣ್ಣ ರೈತರ ಕಾಫಿ ತೋಟಗಳಿಗೆ ಆನೆಗಳ ಗುಂಪು ನುಗ್ಗಿದರೆ ತೋಟಗಳೇ ನಾಶವಾಗುತ್ತವೆ. ಮೂಡಿಗೆರೆ ಕ್ಷೇತ್ರದಲ್ಲಿ ಈಗಾಗಲೇ ನಾಲ್ವರು ಕಾರ್ಮಿಕರು ಆನೆ ದಾಳಿಗೆ ಜೀವ ಕಳೆದುಕೊಂಡಿದ್ದಾರೆ. ಆನೆಗಳನ್ನು ಓಡಿಸುವ ಪ್ರಸ್ತುತ ಕಾರ್ಯಾಚರಣೆ ವೈಜ್ಞಾನಿಕವಾಗಿಲ್ಲ ಎಂದು ಆಕ್ಷೇಪಿಸಿದರು.

ಬಸಗೋಡು ಗ್ರಾಮದಲ್ಲಿ ತೋಟದ ಮಾಲೀಕ ಭರತ್ ಗೌಡ ಕಾರ್ಮಿಕರ ಮೇಲೆ ನಡೆಸಿದ ಅಮಾನುಷ ಹಲ್ಲೆ ಪ್ರಕರಣದಲ್ಲಿ ಆರೋಪಿಯನ್ನು ಕೂಡಲೇ ಬಂಧಿಸಬೇಕು. ಹುಣಸೆಮಕ್ಕಿ ಗ್ರಾಮದ ಮಹಿಳೆಯ ಕೊಲೆ ಪ್ರಕರಣದ ಸಮಗ್ರ ತನಿಖೆ ನಡೆಸಬೇಕು. ಇಲ್ಲದಿದ್ದರೆ ಪೊಲೀಸ್ ಠಾಣೆ ಎದುರು ಅಹೋರಾತ್ರಿ ಧರಣಿ ನಡೆಸಲಾಗುವುದು. ಆನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸದಿದ್ದರೆ ಚಿಕ್ಕಮಗಳೂರು-ಮೂಡಿಗೆರೆ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು.

ಮುಖಂಡರಾದ ಕೃಷ್ಣಮೂರ್ತಿ ಮತ್ತು ಹೆಡದಾಳು ಮಂಜುನಾಥ್ ಮಾತನಾಡಿ, ಆನೆಗಳಿಗಾಗಿ ಹಾಸನ ಭಾಗದಲ್ಲಿಯೇ ಸಮರ್ಪಕ ಆಹಾರ ಮತ್ತು ಪರಿಸರ ವ್ಯವಸ್ಥೆ ಕಲ್ಪಿಸಿ ಅವು ಅಲ್ಲಿಯೇ ಬದುಕುವಂತೆ ಮಾಡಬೇಕು. ಆಪರೇಷನ್ ಗಜ ಕಾರ್ಯಾಚರಣೆಯನ್ನು ಸರ್ಕಾರ ಕೂಡಲೇ ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದರು.

ನಂತರ ಸಬ್ ಇನ್ಸ್‌ಪೆಕ್ಟರ್ ಜಿ.ಎ. ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ವಸಂತ್ ಆಲ್ದೂರು, ಉಮೇಶ್ ದೇವರಹಳ್ಳಿ, ಇಂದ್ರೇಶ್ ಯಲಗುಡಿಗೆ, ಪುಟ್ಟರಾಜು ಹೆಡದಾಳು, ಕಠಾರದಹಳ್ಳಿ ಗಣೇಶ್, ನಾಗೇಶ್ ಡಿಜೆ, ಕಿರಣ್, ಆಟೋ ಸಂಘದ ಅಧ್ಯಕ್ಷ ಲೋಕೇಶ್, ನೊಜ್ಜೆಪೇಟೆ ಜಗದೀಶ್, ರಮೇಶ್, ಡಿಎಸ್ಎಸ್ ತಾಲೂಕು ಪದಾಧಿಕಾರಿ ಶಿವಣ್ಣ, ಯೋಗೇಶ್ ಸತ್ತಿಹಳ್ಳಿ, ಮಾಚಗೊಂಡನಹಳ್ಳಿ, ಗಿರಿಜಾ ಶಂಕರ್, ಭದ್ರಯ್ಯ, ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಮುಸ್ತಫ ಇದ್ದರು.