ಮುಟ್ಟು ನೈಸರ್ಗಿಕ ಪ್ರಕ್ರಿಯೆ: ಡಾ.ಶಶಿಕಾಂತ

| Published : May 29 2024, 12:47 AM IST

ಸಾರಾಂಶ

ಕಲಕೇರಿ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರ ವ್ಯಾಪ್ತಿಯ ಅಂಗನವಾಡಿ ಕೇಂದ್ರದಲ್ಲಿ ಅಂತಾರಾಷ್ಟ್ರೀಯ ಮುಟ್ಟಿನ ನೈರ್ಮಲ್ಯ ದಿನದ ಅಂಗವಾಗಿ ಕಿಶೋರಿಯರಿಗೆ ಋತುಮಾನ ಆರೋಗ್ಯ ಮತ್ತು ನೈರ್ಮಲ್ಯ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ಮುಟ್ಟು ಎನ್ನುವುದು ಒಂದು ನೈಸರ್ಗಿಕ ಪ್ರಕ್ರಿಯೆ. ಸಾಮಾನ್ಯವಾಗಿ ಹೆಣ್ಣು ಮಕ್ಕಳಲ್ಲಿ ಋತುಸ್ರಾವ ಶುರುವಾಗುವುದು 12ನೇ ವಯಸ್ಸಿನ ಆಸುಪಾಸಿನಲ್ಲಿ ಮತ್ತು ಋತುಬಂಧ 50 ವರ್ಷದ ಆಸುಪಾಸಿನಲ್ಲಿ ಎಂದು ಕಲಕೇರಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶಶಿಕಾಂತ ಬಾಗೇವಾಡಿ ಹೇಳಿದರು.

ಮತಕ್ಷೇತ್ರದ ಕಲಕೇರಿ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರ ವ್ಯಾಪ್ತಿಯ ಅಂಗನವಾಡಿ ಕೇಂದ್ರದಲ್ಲಿ ಅಂತಾರಾಷ್ಟ್ರೀಯ ಮುಟ್ಟಿನ ನೈರ್ಮಲ್ಯ ದಿನದ ಅಂಗವಾಗಿ ಕಿಶೋರಿಯರಿಗೆ ಋತುಮಾನ ಆರೋಗ್ಯ ಮತ್ತು ನೈರ್ಮಲ್ಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಋತುಮಾಸ ಮತ್ತು ಋತುಸ್ರಾವದ ಕುರಿತು ಸವಿಸ್ತಾರವಾಗಿ ತಿಳಿಸಿದರು. ಜೊತೆಗೆ ಗರ್ಭಕೋಶದ ಕ್ಯಾನ್ಸರ್‌ನ್ನು ತಡೆಗಟ್ಟಲು ಇತ್ತೀಚೆಗೆ ಆವಿಷ್ಕರಿಸಿದ ಹುಮನ್ ಪೆಪಿಲೋಮ್‌ ವೈರಸ್ ಲಸಿಕೆಯ ಬಗ್ಗೆಯೂ ಮಾಹಿತಿ ನೀಡಿದರು.

ಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸಿದ ಅಪ್ಪಾಸಾಬ ಮಾಂಗ ಮಾತನಾಡಿ, ಮುಟ್ಟಿನ ನೈರ್ಮಲ್ಯ ಜೊತೆ ಒಳ್ಳೆಯ ಆಹಾರ ಸೇವನೆ ಮಾಡಬೇಕು ಎಂದು ಹೇಳಿದರು. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಡಿ.ಮೋತಿಭಾಯಿ ಮತ್ತು ಆಪ್ತ ಸಮಾಲೋಚಕರಾದ ಡಾ.ಸಂತೋಷ್ ತೆಂಗಳಿ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು. ಅಪ್ಪಾಸಾಬ ಮಾಂಗ ವಂದಿಸಿದರು. ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರಾದ ಹುಸೇನಬಿ ವಲ್ಲಿಭಾಯಿ, ಲಾಲಸಾಬ ನಾಯ್ಕೋಡಿ ಸೇರಿದಂತೆ ಗ್ರಾಮದ ಪ್ರಮುಖರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಕಿಶೋರಿಯರು ಮತ್ತು ಇತರರು ಪಾಲ್ಗೊಂಡಿದ್ದರು.