ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಯೋಜಿಸಿದ್ದ ಮಾನಸಿಕ ಆರೋಗ್ಯದ ಕುರಿತ ಕಾರ್ಯಾಗಾರಕ್ಕೆ ಕರ್ನಾಟಕ ಉಚ್ಛ ನ್ಯಾಯಾಲಯ ನ್ಯಾಯಾಧೀಶ ಆರ್.ದೇವದಾಸ್ ಚಾಲನೆ ನೀಡಿ, ಆರೋಗ್ಯ ರಕ್ಷಣೆಯ ಕುರಿತು ಕಿವಿಮಾತು ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಸಮಾಜದಲ್ಲಿ ನಾವೆಲ್ಲ ದೇಹ ಮಾತ್ರವಲ್ಲ, ಮನಸ್ಸಿನ ಆರೋಗ್ಯ ಕಾಪಾಡಿಕೊಳ್ಳುವುದು ಸಹ ಬಹಳ ಮುಖ್ಯವಾಗುತ್ತದೆ ಎಂದು ಕರ್ನಾಟಕ ಉಚ್ಛ ನ್ಯಾಯಾಲಯ ನ್ಯಾಯಧೀಶ ಆರ್.ದೇವದಾಸ್ ಹೇಳಿದರು.

ನಗರದ ಕುವೆಂಪು ರಂಗಮಂದಿರದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಜ್ಯ ಮಾನಸಿಕ ಆರೋಗ್ಯ ಪ್ರಾಧಿಕಾರ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪೊಲೀಸ್ ಇಲಾಖೆ, ವಕೀಲರ ಸಂಘಗಳ ಸಹಯೋಗದಲ್ಲಿ ಆಯೋಜಿಸಿದ್ದ ಮಾನಸಿಕ ಆರೋಗ್ಯದ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಸುಖ, ದುಃಖ ಎಲ್ಲದಕ್ಕೂ ಮನಸ್ಸೇ ಮುಖ್ಯ ಕಾರಣ. ಪ್ರತಿದಿನ ನಾವು ಎಷ್ಟೋ ಜನರನ್ನು ಭೇಟಿಯಾಗುತ್ತೇವೆ. ವ್ಯವಹರಿಸುತ್ತೇವೆ, ವ್ಯಕ್ತಿಗತ ಭಿನ್ನಾಭಿಪ್ರಾಯಗಳು ಇರುತ್ತವೆ. ಆದರೆ, ಮಾನಸಿಕವಾಗಿ ಸದೃಢರಾಗಿದ್ದರೆ ನೋವು, ಹತಾಶೆಗೆ ಹೋಗುವುದಿಲ್ಲ ಎಂದರು.

ಕರ್ನಾಟಕ ಉಚ್ಛ ನ್ಯಾಯಾಲಯ ವಿಶ್ರಾಂತ ನ್ಯಾಯಮೂರ್ತಿ ಹಾಗೂ ರಾಜ್ಯ ಮಾನಸಿಕ ಆರೋಗ್ಯ ಪ್ರಾಧಿಕಾರ ಮಾರ್ಗದರ್ಶಕ ಎನ್.ಕುಮಾರ್ ಮಾತನಾಡಿ, ಮುಂದುವರಿದ ದೇಶಗಳಲ್ಲಿ ಮಾನಸಿಕ ಕಾಯಿಲೆಗಳು ಹೆಚ್ಚಾಗಿ ಕಂಡುಬರುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಮಾನಸಿಕ ಕಾಯಿಲೆಯೇ ನಂ.1 ಆಗುವ ಸಾಧ್ಯತೆ ಇದೆ. ದೈಹಿಕ ಖಾಯಿಲೆಗೆ ವೈದ್ಯರನ್ನು ಹುಡುಕಿ ಚಿಕಿತ್ಸೆ ಪಡೆದು ಅದನ್ನು ಎಲ್ಲರ ಹತ್ತಿರ ಹಂಚಿಕೊಳ್ಳುತ್ತೇವೆ. ಆದರೆ, ಮಾನಸಿಕ ಸಮಸ್ಯೆಗಳನ್ನು ಮುಚ್ಚಿಡುವ, ಕಳಂಕವೆಂಬಂತೆ ನೋಡುತ್ತೇವೆ. ಹಿಂದೆಲ್ಲ ಮಾನಸಿಕ ರೋಗಕ್ಕೆ ಮದ್ದಿಲ್ಲ ಎನ್ನುತ್ತಿದ್ದರು, ರೋಗಿಗಳನ್ನು ಜೈಲುವಾಸಿಗಳಂತೆ ಉಪಚರಿಸುತ್ತಿದ್ದರು. ಆದರೆ, ಮಾನಸಿಕ ಆರೋಗ್ಯ ಕಾಯ್ದೆ ಜಾರಿ ಆದಾಗಿನಿಂದ ಅವರಿಗೆ ಇತರೆ ರೋಗಿಗಳಂತೆ ಒಂದೇ ವಾರ್ಡಿನಲ್ಲಿ ತಾರತಮ್ಯವಿಲ್ಲದೆ ಉಪಚರಿಸಲಾಗುತ್ತಿದೆ. ಶೇ.90 ರೋಗ ನಿಯಂತ್ರಣದಲ್ಲಿಡಬಹುದು. ಈ ಬಗ್ಗೆ ಎಲ್ಲರಲ್ಲಿ ಅರಿವು ಹೆಚ್ಚಬೇಕು ಎಂದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಡಿ.ರಣದೀಪ್ ಮಾತನಾಡಿ, ಮಾನಸಿಕ ಆರೋಗ್ಯದ ಶಿಕ್ಷಣ ಮತ್ತು ಚಿಕಿತ್ಸೆ ಹಾಗೂ ಇದಕ್ಕೆ ಸಂಬಂಧಿಸಿದ ಕಾಯ್ದೆ- ಕಾನೂನುಗಳ ಅನುಷ್ಠಾನದಲ್ಲಿ ನಮ್ಮ ರಾಜ್ಯ ದೇಶದಲ್ಲಿ ಪ್ರಥಮ ಸ್ಥಾನದಲ್ಲಿದೆ. ವೈದ್ಯರಲ್ಲಿ ಹಾಗೂ ಸಮಾಜದಲ್ಲಿ ಮಾನಸಿಕ ಆರೋಗ್ಯದ ಕುರಿತು ಅರಿವು ಹೆಚ್ಚುತ್ತಿದೆ. ಮಾನಸಿಕ ಆರೋಗ್ಯ ಕಾಪಾಡುವಲ್ಲಿ ಇಲಾಖೆಗಳ ಸಮನ್ವಯ ಮತ್ತು ಸಾರ್ವಜನಿಕರ ಪಾತ್ರ ಮಹತ್ವದ್ದಾಗಿದೆ ಎಂದರು.

ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಂಜುನಾಥ ನಾಯಕ್ ಸ್ವಾಗತಿಸಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಟಿ.ಕೆ. ಅನಿಲ್ ಕುಮಾರ್, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೈಶಂಕರ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಬಿ.ಜಿ.ಶಿವಮೂರ್ತಿ, ಜಿ.ಪಂ ಸಿಇಒ ಸ್ನೇಹಲ್ ಸುಧಾಕರ ಲೋಖಂಡೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್, ಡಾ.ಪುಷ್ಪಲತಾ ಮತ್ತಿತರರು ಇದ್ದರು.