ಕಲಬುರಗಿ ದಿವ್ಯ ಸಂಜೆ ಕಾರ್ಯಕ್ರಮದಲ್ಲಿ ಮೌಲ್ಯ ಶಿಕ್ಷಣದ ಪ್ರತಿಪಾದನೆ ಕನ್ನಡಪ್ರಭ ವಾರ್ತೆ ಕಲಬುರಗಿ ತೀವ್ರ ಸ್ಪರ್ಧೆಯ ಕಾರಣ ಸಮಕಾಲೀನ ಶಿಕ್ಷಣ ಪದ್ಧತಿಯಲ್ಲಿ ಬುದ್ಧಿವಂತರು ನಿರ್ಮಾಣವಾಗುತ್ತಾರೆ. ಅದರೆ ದಯೆ- ಹೃದಯ ಇರುವ ಹೃದಯವಂತರನ್ನು, ಚಾರಿತ್ರ್ಯವಂತರನ್ನು ರೂಪಿಸುತ್ತಿಲ್ಲ. ಕರುಣೆಯಿಲ್ಲದ ಬುದ್ಧಿವಂತರು ದಾನವರಾಗುತ್ತಾರೆ. ಇದು ಅತ್ಯಂತ ಅಪಾಯಕಾರಿ ವಿದ್ಯಮಾನ ಎಂದು ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್ ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ ಹೇಳಿದರು.ನಗರದಲ್ಲಿ ಬುಧವಾರ ನಡೆದ ದಿವ್ಯ ಸಂಜೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಶಿಕ್ಷಣ ತಜ್ಞ ಡಾ ಗುರುರಾಜ ಕರ್ಜಗಿ ಅವರ ಪ್ರಶ್ನೆಗಳಿಗೆ ಉತ್ತರಿಸಿದರು.

ಮೌಲ್ಯ ಶಿಕ್ಷಣವು ನಮ್ಮ ಶಿಕ್ಷಣ ಪದ್ಧತಿಯ ಅವಿಭಾಜ್ಯ ಅಂಗವಾಗಬೇಕು. ಇಂದು ಶಿಕ್ಷಕರಿಗೆ ಶಾಲೆಗಳಲ್ಲಿ ನೀತಿ ಕಥೆ ಹೇಳುವ ಸ್ವಾತಂತ್ರ್ಯವೂ ಇಲ್ಲವಾಗಿದೆ. ಶಿಕ್ಷಣವು ವ್ಯಾಪಾರವಾಗಿರುವ ದುರಂತದಿಂದ ಇಂತಹ ಸಂದರ್ಭ ಬಂದಿದೆ ಎಂದು ವಿಷಾದಿಸಿದರು.ಕಲಬುರ್ಗಿ ಜಿಲ್ಲೆಯ ಪ್ರಗತಿಗಾಗಿ ಶಿಕ್ಷಣ, ಆರೋಗ್ಯ ಮತ್ತು ಪೌಷ್ಠಿಕ ಆಹಾರ ನಮ್ಮ ಆದ್ಯತೆ ಆಗಬೇಕು. ಈ ಪ್ರದೇಶದಲ್ಲಿ ರಕ್ತಹೀನತೆ ದೊಡ್ಡ ಸಮಸ್ಯೆಯಾಗಿದ್ದು ಮಕ್ಕಳ ಎತ್ತರವೂ ಕಡಿಮೆಯಾಗುತ್ತಿದೆ. ಅಪೌಷ್ಠಿಕತೆ ಮಾನಸಿಕತೆಯ ಮೇಲೆಯೂ ಪರಿಣಾಮ ಬೀರುತ್ತದೆ. ಈ ಮೂರು ವಿಚಾರಗಳಲ್ಲಿ ನಮ್ಮ ಸಂಸ್ಥೆಯಿಂದ ಮತ್ತಷ್ಟು ಸೇವೆ ಒದಗಿಸಲು ಪ್ರಯತ್ನಿಸುತ್ತೇವೆ. ಶೀಘ್ರದಲ್ಲಿಯೇ ನಮ್ಮ ಕ್ಯಾಂಪಸ್ ಬಳಿ ಆಸ್ಪತ್ರೆಯನ್ನು ಆರಂಭಿಸುತ್ತೇವೆ ಎಂದು ಭರವಸೆ ನೀಡಿದರು.ಕಮಲಾಪುರ ತಾಲೂಕು ನವನಿಹಾಳ ಗ್ರಾಮದಲ್ಲಿರುವ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ವೇದಮಂತ್ರಗಳ ಪಾರಾಯಣದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಸತ್ಯಸಾಯಿ ಲೋಕ ಸೇವಾ ಗುರುಕುಲಂ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ವಾದ್ಯಗೋಷ್ಠಿ ಪ್ರಸ್ತುತಪಡಿಸಿದರು.ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ ಕೆ. ಶ್ರೀಕಂಠಮೂರ್ತಿ ಸ್ವಾಗತಿಸಿದರು. ಶಾಂತಿ ಬಾಲಮಂದಿರ ಟ್ರಸ್ಟ್ ಅಧ್ಯಕ್ಷ ಡಾ ಬಿ.ಎನ್.ನರಸಿಂಹಮೂರ್ತಿ ಪ್ರಸ್ತಾವನೆಗೈದರು. ಶರಣ ಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿ ಪೂಜ್ಯ ದೊಡ್ಡಪ್ಪ ಅಪ್ಪ, ಡಾ.ದಾಕ್ಷಾಯಿಣಿ ಉಪಸ್ಥಿತರಿದ್ದರು. ಪ್ರಶಾಂತಿ ಬಾಲ ಮಂದಿರ ಟ್ರಸ್ಟ್‌ನ ವಿಶ್ವಸ್ಥ ರಾಜಶೇಖರ್ ನಿರೂಪಿಸಿದರು.ಬಾಕ್ಸ್

ಕಲ್ಲನ್ನು ಶಿಲ್ಪವಾಗಿಸಿದ ಸದ್ಗುರು: ವಿದ್ಯಾರ್ಥಿಯ ನಮನ

ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ವಿದ್ಯಾರ್ಥಿಯೂ ಆಗಿರುವ ಕಮಲಾಪುರ ತಾಲೂಕು ನವನಿಹಾಳ ಗ್ರಾಮದ ಮಹದೇವ್ ಮಾತನಾಡಿ ಬಾಲ್ಯದಲ್ಲಿ ತಾನು ಎದುರಿಸಿದ ಸಂಕಷ್ಟದ ದಿನಗಳು ಹಾಗೂ ಸದ್ಗುರುಗಳ ಕರುಣೆಯಿಂದ ಒದಗಿದ ಅವಕಾಶಗಳ ಬಗ್ಗೆ ವಿವರಿಸಿದರು.

ಚಿಕ್ಕಂದಿನಲ್ಲಿಯೇ ನನ್ನ ತಾಯಿ ಆತ್ಮಹತ್ಯೆ ಮಾಡಿಕೊಂಡರು. ಅವಳ ಮರಣದ ನಂತರ ಅಜ್ಜಿಯ ಮನೆಯಲ್ಲಿದ್ದೆ. ಸಂಬಂಧಿಕರ ಮೂದಲಿಕೆಯು ನನ್ನ ಆತ್ಮವಿಶ್ವಾಸ ಕಿತ್ತುಕೊಂಡಿತ್ತು. ಆದರೆ ದೇವರ ದಯೆಯಿಂದ ನನಗೆ ಸತ್ಯ ಸಾಯಿ ಸಂಸ್ಥೆಯಲ್ಲಿ ಪ್ರವೇಶ ಸಿಕ್ಕಿತು. ಅಲ್ಲಿನ ಉಪಾಧ್ಯಾಯರ ಪ್ರೀತಿ-ಕರುಣೆಯಿಂದ ನನ್ನಲ್ಲಿ ಭಯ ಹೋಗಿ ಆತ್ಮವಿಶ್ವಾಸ ಮೂಡಿತು. ಇಂದು ನಿರರ್ಗಳವಾಗಿ ಇಂಗ್ಲಿಷ್ ಮಾತನಾಡುತ್ತೇನೆ. ಸಾವಿರಾರು ಜನರ ಎದುರು ನಿಂತು ಮಾತನಾಡುವ ಧೈರ್ಯ ಬಂದಿದೆ. ಕಲ್ಲು ಒಬ್ಬ ಶಿಲ್ಪಿಯ ಕೈಗೆ ಸಿಕ್ಕರೆ ಸುಂದರ ಶಿಲ್ಪವಾಗುತ್ತದೆ ಎಂದರು..