ಮೈಸೂರು ವಿವಿ ಘನತೆ ಉಳಿಸಲು ಮಂಡ್ಯ ವಿವಿ ವಿಲೀನ: ಸಚಿವ ಚಲುವರಾಯಸ್ವಾಮಿ

| Published : Feb 15 2025, 12:33 AM IST

ಮೈಸೂರು ವಿವಿ ಘನತೆ ಉಳಿಸಲು ಮಂಡ್ಯ ವಿವಿ ವಿಲೀನ: ಸಚಿವ ಚಲುವರಾಯಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಮಂಡ್ಯ ವಿವಿಯನ್ನು ಮೈಸೂರು ವಿವಿ ಜೊತೆ ವಿಲೀನಗೊಳಿಸುವುದಕ್ಕೆ ಹಣಕಾಸಿನ ಕೊರತೆಯೂ ಮತ್ತೊಂದು ಕಾರಣ. ಮಂಡ್ಯ ವಿಶ್ವವಿದ್ಯಾಲಯ ಸ್ಥಾಪನೆಯಾಗಿ ಐದು ವರ್ಷ ಕಳೆದರೂ ಪರಿಪೂರ್ಣ ವಿಶ್ವವಿದ್ಯಾಲಯವಾಗಲು ಸಾಧ್ಯವಾಗಿಲ್ಲ. ಯುಜಿಸಿಯಿಂದ ಅನುದಾನ ಕೊಡುತ್ತಿಲ್ಲ. ರಾಜ್ಯದಿಂದ ಅನುದಾನಕ್ಕೆ ಅವಕಾಶವಿಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ಮೈಸೂರು ವಿಶ್ವವಿದ್ಯಾಲಯಕ್ಕಿರುವ ಘನತೆ- ಗೌರವಗಳನ್ನು ಉಳಿಸುವ ಸಲುವಾಗಿ ಮಂಡ್ಯ ವಿಶ್ವವಿದ್ಯಾಲಯವನ್ನು ಅದರೊಂದಿಗೆ ವಿಲೀನಗೊಳಿಸುವುದಕ್ಕೆ ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ಮೈಸೂರು ವಿಶ್ವವಿದ್ಯಾಲಯ ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಶೈಕ್ಷಣಿಕ ಗುಣಮಟ್ಟ, ಪದವಿ ಪ್ರಮಾಣಪತ್ರಕ್ಕೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಳ್ಳೆಯ ಹೆಸರಿದೆ. ಮಂಡ್ಯ ಜಿಲ್ಲೆಯಲ್ಲಿ ವಿಶ್ವವಿದ್ಯಾಲಯ ಮಾಡುವುದರಿಂದ ಮೈಸೂರು ವಿಶ್ವವಿದ್ಯಾಲಯಯದ ಗಂಭೀರತೆ ಕಡಿಮೆಯಾಗಿದೆ ಎಂಬುದು ಹಲವರ ಅಭಿಪ್ರಾಯವಾಗಿತ್ತು. ಅದನ್ನು ಮನಗಂಡು ವಿಲೀನ ನಿರ್ಧಾರ ಕೈಗೊಂಡಿರುವುದಾಗಿ ಸುದ್ದಿಗಾರರಿಗೆ ತಿಳಿಸಿದರು.

ಹಣಕಾಸಿನ ಕೊರತೆಯೂ ಕಾರಣ:

ಮಂಡ್ಯ ವಿವಿಯನ್ನು ಮೈಸೂರು ವಿವಿ ಜೊತೆ ವಿಲೀನಗೊಳಿಸುವುದಕ್ಕೆ ಹಣಕಾಸಿನ ಕೊರತೆಯೂ ಮತ್ತೊಂದು ಕಾರಣ. ಮಂಡ್ಯ ವಿಶ್ವವಿದ್ಯಾಲಯ ಸ್ಥಾಪನೆಯಾಗಿ ಐದು ವರ್ಷ ಕಳೆದರೂ ಪರಿಪೂರ್ಣ ವಿಶ್ವವಿದ್ಯಾಲಯವಾಗಲು ಸಾಧ್ಯವಾಗಿಲ್ಲ. ಯುಜಿಸಿಯಿಂದ ಅನುದಾನ ಕೊಡುತ್ತಿಲ್ಲ. ರಾಜ್ಯದಿಂದ ಅನುದಾನಕ್ಕೆ ಅವಕಾಶವಿಲ್ಲ. ಇವೆಲ್ಲಾ ತೊಂದರೆಗಳಿರುವುದರಿಂದ ಮೈಸೂರು ವಿಶ್ವವಿದ್ಯಾಲಯದೊಂದಿಗೆ ವಿಲೀನಗೊಳಿಸುವುದೇ ಉತ್ತಮ ಎಂಬ ನಿರ್ಧಾರಕ್ಕೆ ಬರಲಾಗಿದೆ ಎಂದು ಹೇಳಿದರು.

ಮಂಡ್ಯಕ್ಕೆ ಐಐಟಿ ಸಿಗಲಿಲ್ಲ:

ಕೃಷಿ ವಿಶ್ವವಿದ್ಯಾಲಯ ಮಂಡ್ಯಕ್ಕೆ ಬರುವುದನ್ನು ಜೆಡಿಎಸ್‌ನವರು ಒಪ್ಪಲು ಹೇಗೆ ಸಾಧ್ಯ. ರೇವಣ್ಣ ಅವರಿಗೆ ಹಾಸನಕ್ಕೆ ಕೃಷಿ ವಿವಿ ಬರಬೇಕೆಂಬ ಆಸೆ ಇತ್ತು. ಅದು ಸಾಧ್ಯವಾಗಲಿಲ್ಲ. ಮಂಡ್ಯಕ್ಕೆ ಬಂದಿರುವುದಕ್ಕೆ ಅವರಿಗೆ ಸಹಿಸಲಾಗುತ್ತಿಲ್ಲ. ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ವೇಳೆ ಐಐಟಿ ಮಂಡ್ಯಕ್ಕೆ ಬರಬೇಕಿತ್ತು. ಕೆಆರ್‌ಎಸ್‌ನಲ್ಲಿ ತೆರೆಯುವುದಕ್ಕೆ ತಾಂತ್ರಿಕ ಸಮಿತಿಯೂ ವರದಿ ಕೊಟ್ಟಿತ್ತು. ಹಾಸನ- ಮಂಡ್ಯ ಕಿತ್ತಾಟದಲ್ಲಿ ರಾಯಚೂರಿಗೆ ಹೋಯಿತು. ಜೆಡಿಎಸ್‌ನವರಿಗೆ ಮಂಡ್ಯ ಜನರ ವೋಟು ಬೇಕೇ ಹೊರತು ಅಭಿವೃದ್ಧಿ ಬೇಕಿಲ್ಲ ಎಂದು ಕಟುವಾಗಿ ಹೇಳಿದರು.

ಮಂಡ್ಯಕ್ಕೆ ಕೃಷಿ ವಿವಿ ಆಗುವುದು ರೇವಣ್ಣನವರಿಗೆ ಇಷ್ಟ ಇಲ್ಲ. ಹೋರಾಟ ಮಾಡಿದರೆ ಮಾಡಲಿ, ಬೇಡ ಎಂದವರು ಯಾರು. ಸರ್ಕಾರದ ತೀರ್ಮಾನ ಅಂತಿಮವಲ್ಲವೇ ಎಂದು ತಿಳಿಸಿದರು.

ಉಪ ಸಮಿತಿ ರಚನೆ:

ಸಮಗ್ರ ಕೃಷಿ ವಿಶ್ವವಿದ್ಯಾಲಯ ಮಂಡ್ಯಕ್ಕೆ ಬೇಡ ಎಂದು ಯಾರೂ ಹೇಳಿಲ್ಲ. ಬೆಂಗಳೂರಿನ ಜಿಕೆವಿಕೆಯನ್ನು ಸಮಗ್ರ ವಿಶ್ವವಿದ್ಯಾಲಯ ಮಾಡಬೇಕು ಎಂಬುದು ಹಲವರ ಅಭಿಪ್ರಾಯವಾಗಿದೆ. ಕೃಷಿ ವಿವಿಗೆ ಸಂಬಂಧಿಸಿದಂತೆ ಯಾವುದನ್ನು ಯಾವುದಕ್ಕೆ ಸೇರಿಸಬೇಕು ಎಂಬ ಬಗ್ಗೆ ಮುಖ್ಯಮಂತ್ರಿಯವರು ಉಪ ಸಮಿತಿ ರಚಿಸಿ ನಂತರ ಕ್ಯಾಬಿನೇಟ್‌ನಲ್ಲಿ ತೀರ್ಮಾನಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಕುಡಿಯುವ ನೀರಿಗೆ ಅಡ್ಡಿ ಮಾಡಲಾಗದು:

ಬೆಂಗಳೂರಿಗೆ ಆರನೇ ಹಂತದ ಕುಡಿಯುವ ನೀರಿಗೆ ಜೆಡಿಎಸ್ ವಿರೋಧ ವ್ಯಕ್ತಪಡಿಸುತ್ತಿರುವ ಬಗ್ಗೆ ಕೇಳಿದಾಗ, ಕುಡಿಯುವ ನೀರನ್ನು ನೀಡಲಾಗದು ಎಂದು ಹೇಳಲಾಗುವುದಿಲ್ಲ. ಕೃಷಿಗೆ ಯಾವುದೇ ತೊಂದರೆಯಾಗದಂತೆ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ನಾಲೆಗಳ ಸಮಗ್ರ ಆಧುನೀಕರಣಗೊಳಿಸುವುದರೊಂದಿಗೆ ಸೋರಿಕೆಯಾಗುವ ನೀರನ್ನು ಪೂರೈಸುವುದಾಗಿ ಹೇಳಿದರು.

ರಾಜಣ್ಣ ಭೇಟಿ ವಿಚಾರ ಗೊತ್ತಿಲ್ಲ:

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಚಿವ ರಾಜಣ್ಣ ಅವರು ಭೇಟಿ ಮಾಡಿರುವ ಕುರಿತು ಪ್ರತಿಕ್ರಿಯಿಸಿ, ಅದರಲ್ಲೇನು ತಪ್ಪು, ವಿಷಯ ಇಲ್ಲದಿದ್ದರೂ ಅವರನ್ನು ನಾವು ಭೇಟಿ ಮಾಡುತ್ತೇವೆ. ಅವರನ್ನ ಭೇಟಿಯಾಗುವುದೇ ನಮಗೆ ಖುಷಿ.

ರಾಜಣ್ಣ ಯಾವ ವಿಚಾರಕ್ಕೆ ಭೇಟಿ ಮಾಡಿದ್ದಾರೋ ಗೊತ್ತಿಲ್ಲ. ಆದರೆ, ರಾಜಣ್ಣ ಭೇಟಿ ಮಾಡಿರುವುದು ತಪ್ಪಲ್ಲ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರದಲ್ಲಿ ಖರ್ಗೆ ಅವರು ಸೂಕ್ತ ಸಮಯಕ್ಕೆ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಾರೆ. ಅದರ ಬಗ್ಗೆ ನಾನೇಕೆ ಮಾತನಾಡಲಿ ಎಂದು ಚಲುವರಾಯಸ್ವಾಮಿ ತಿಳಿಸಿದರು.

ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಆಗಿರಲ್ಲ ಎಂಬ ಎಚ್ಡಿಕೆ ಹೇಳಿಕೆ ಕುರಿತು, ಕುಮಾರಸ್ವಾಮಿ ಎಂದೂ ಪೂರ್ಣಾವಧಿ ಸಿಎಂ ಆಗಿಲ್ಲ. ಅದಕ್ಕೆ ಅವರು ಹಾಗೆ ಹೇಳಿರುತ್ತಾರೆ ಎಂದು ಟಕ್ಕರ್ ನೀಡಿದ ಚಲುವರಾಯಸ್ವಾಮಿ, ೨೦೧೮ ರ ಚುನಾವಣೆಯಲ್ಲಿ ಬಹುಮತ ಬರದಿದ್ದರೆ ಪಕ್ಷವನ್ನೇ ವಿಸರ್ಜನೆ ಮಾಡುತ್ತೇನೆ ಎಂದಿದ್ದರು. ಆಮೇಲೆ ಕುಮಾರಸ್ವಾಮಿ ಏನು ಮಾಡಿದರು. ಅವರಿಗೆ ಸಿಎಂ ಆಗುವ ಅವಕಾಶ ಸಿಕ್ಕರೂ ಪೂರ್ಣಾವಧಿ ಸಿಎಂ ಆಗಲಿಲ್ಲ. ಅದಕ್ಕೆ ಬೇರೆಯವರಿಗೂ ಹೇಳುತ್ತಾರೆ ಎಂದು ಜರಿದರು.