ಸಾರಾಂಶ
ಮಂಡ್ಯ ಮಂಜುನಾಥ
ಕನ್ನಡಪ್ರಭ ವಾರ್ತೆ ಮಂಡ್ಯಮೈಸೂರು ವಿಶ್ವ ವಿದ್ಯಾಲಯದ ಅಧೀನದಲ್ಲಿದ್ದ ಮಂಡ್ಯ ಜಿಲ್ಲೆ ಪೂರ್ಣ ಪ್ರಮಾಣದ ವಿಶ್ವವಿದ್ಯಾಲಯವಾಗಿ ಏಳು ವರ್ಷಗಳ ಹಿಂದೆ ಹೊರಹೊಮ್ಮಿತ್ತು. ವಿಶ್ವವಿದ್ಯಾಲಯಕ್ಕೆ ಅಗತ್ಯವಿರುವ ಸೌಲಭ್ಯಗಳು, ಬೋಧಕ-ಬೋಧಕೇತರ ಸಿಬ್ಬಂದಿ ನೇಮಕಕ್ಕೆ ಸರ್ಕಾರಗಳು ತೋರಿದ ನಿರ್ಲಕ್ಷ್ಯದಿಂದಾಗಿ ವಿಶ್ವ ವಿದ್ಯಾಲಯ ಪ್ರಗತಿಯತ್ತ ಮುನ್ನಡೆಯಲೇ ಇಲ್ಲ. ಇದೀಗ ರಾಜ್ಯ ಸರ್ಕಾರ ಮಂಡ್ಯ ವಿಶ್ವ ವಿದ್ಯಾಲಯವನ್ನು ಮತ್ತೆ ಮೈಸೂರು ವಿಶ್ವ ವಿದ್ಯಾಲಯದೊಂದಿಗೆ ವಿಲೀನಗೊಳಿಸುವ ತೀರ್ಮಾನಕ್ಕೆ ಮುಂದಾಗಿದೆ.
ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಗುರುವಾರ (ಫೆ.೧೩) ಮಹತ್ವದ ಸಭೆ ನಡೆಯಲಿದೆ ಎಂದು ತಿಳಿದುಬಂದಿದ್ದು, ರಾಜ್ಯ ಸರ್ಕಾರ ಮಂಡ್ಯ ವಿವಿಗೆ ಕೊನೆಯ ಮೊಳೆ ಹೊಡಯುವ ಸಾಧ್ಯತೆಗಳಿದ್ದು, ವಿದ್ಯಾರ್ಥಿಗಳ ಭವಿಷ್ಯ ಅತಂತ್ರ ಸ್ಥಿತಿಗೆ ಸಿಲುಕುವ ಸಾಧ್ಯತೆಗಳಿವೆ.ಸ್ವಾಯತ್ತ ವಿಶ್ವ ವಿದ್ಯಾಲಯವಾಗಿ ಘೋಷಣೆಯಾಗಿ ಏಳು ವರ್ಷಗಳಾದರೂ ಮಂಡ್ಯ ವಿಶ್ವವಿದ್ಯಾಲಯ ಪೂರಕವಾದ ಸೌಲಭ್ಯಗಳನ್ನು ಹೊಂದಲು ಸಾಧ್ಯವಾಗಲಿಲ್ಲ. ನಿರೀಕ್ಷಿತ ರೀತಿಯಲ್ಲಿ ಸರ್ಕಾರದಿಂದ ಅನುದಾನವೂ ಬಿಡುಗಡೆಯಾಗಲಿಲ್ಲ. ಬೋಧಕ-ಬೋಧಕೇತರ ಸಿಬ್ಬಂದಿ ನೇಮಕಕ್ಕೂ ಸರ್ಕಾರ ಅವಕಾಶ ನೀಡಲಿಲ್ಲ. ಕಾಲೇಜು ಶಿಕ್ಷಣ ಇಲಾಖೆ ಬೋಧಕರು ಮತ್ತು ಅತಿಥಿ ಉಪನ್ಯಾಸಕರ ನೆರವಿನಿಂದ ಬೋಧನೆಯನ್ನು ಮುಂದುವರೆಸಿಕೊಂಡು ಬರಲಾಗಿತ್ತು.
ಈ ನಡುವೆ ಕಾಲೇಜು ಶಿಕ್ಷಣ ಇಲಾಖೆ, ಅತಿಥಿ ಉಪನ್ಯಾಸಕರ ನಡುವೆ ಮುಸುಕಿನ ಗುದ್ದಾಟ ಹಾಗೂ ಹಿಂದೆ ಮಂಡ್ಯ ವಿವಿ ಕುಲಪತಿಗಳಾಗಿದ್ದವರ ನಡುವೆ ಸಂಘರ್ಷ, ಪರೀಕ್ಷಾ ಪ್ರಕ್ರಿಯೆಯಲ್ಲಿ ಗೊಂದಲ, ದೋಷಗಳಿಂದ ಕೂಡಿದ ಅಂಕಪಟ್ಟಿಯಿಂದಾಗಿ ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನ ಸ್ಥಿತಿಯನ್ನು ತಲುಪಿತ್ತು. ಮಂಡ್ಯ ವಿಶ್ವವಿದ್ಯಾಲಯಕ್ಕೆ ಪೂರಕ ಅನುದಾನ, ಸೌಲಭ್ಯ, ಬೋಧಕ-ಬೋಧಕೇತರ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡು ಬಲವರ್ಧನೆಗೊಳಿಸುವಲ್ಲಿ ಸರ್ಕಾರ ವಿಫಲವಾಯಿತು..ಮಂಡ್ಯ ವಿಶ್ವವಿದ್ಯಾಲಯದೊಂದಿಗೆ ಸ್ಥಾಪನೆಯಾಗಿದ್ದ ಇತರೆ ನೂತನ ವಿಶ್ವವಿದ್ಯಾಲಯಗಳಿಗೂ ಅಗತ್ಯ ನೆರವು, ಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗದಿರುವುದರಿಂದ ಹಿಂದೆ ಇದ್ದ ಮಾದರಿಯಲ್ಲೇ ಆಯಾ ವಿಶ್ವವಿದ್ಯಾಲಯಗಳಲ್ಲೇ ವಿಲೀನಗೊಳಿಸುವುದಕ್ಕೆ ಸರ್ಕಾರ ಮುಂದಾಗಿದೆ ಎನ್ನಲಾಗಿದೆ.ಸರ್ಕಾರಗಳಿಂದ ಸಿಗದ ಸ್ಪಂದನೆ
ಮಂಡ್ಯ ವಿಶ್ವವಿದ್ಯಾಲಯಕ್ಕೆ ಬೇಕಾದ ೧೭೭ ಬೋಧಕ ಹಾಗೂ ೫೫ ಬೋಧಕೇತರ ಹುದ್ದೆಗಳಿಗೆ ಉನ್ನತ ಶಿಕ್ಷಣ ಇಲಾಖೆ ಮಂಜೂರಾತಿ ನೀಡಲಿಲ್ಲ. ಕಾಲೇಜು ಶಿಕ್ಷಣ ಇಲಾಖೆಯಲ್ಲಿ ನೇಮಕವಾಗಿ ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ೨೮ ಬೋಧಕ ಸಿಬ್ಬಂದಿಯವರ ಆಪ್ಟ್-ಇನ್ ಮತ್ತು ಆಪ್ಟ್-ಔಟ್ ವಿಚಾರದಲ್ಲಿ ಸರ್ಕಾರ ಶೀಘ್ರ ಕ್ರಮ ಕೈಗೊಳ್ಳಲಿಲ್ಲ.ರೂಸಾ ಅನುದಾನದಲ್ಲಿ ಕಟ್ಟಡಗಳನ್ನು ಮಾತ್ರ ನಿರ್ಮಿಸಿದ್ದು, ಪ್ರವೇಶದ್ವಾರ, ಕಮಾನು ಜೊತೆಗೆ ಭದ್ರತಾ ಸಿಬ್ಬಂದಿ ಕೊಠಡಿ, ಕಾಂಪೌಂಡ್ ಗೋಡೆ ನಿರ್ಮಾಣ, ಪಾರ್ಕಿಂಗ್ ಸ್ಥಳ, ಹಳೇ ಕಟ್ಟಡಗಳಿಗೆ ಬಣ್ಣ ಸೇರಿದಂತೆ ಇನ್ನಿತರ ಕಾಮಗಾರಿಗಳಿಗೆ ಮಂಜೂರಾತಿ ಮತ್ತು ೫ ಕೋಟಿ ರು.ಅನುದಾನದ ಅಗತ್ಯವಿದ್ದರೂ ಸರ್ಕಾರ ಬಿಡುಗಡೆ ಮಾಡಲಿಲ್ಲ.
ವಿವಿದೋದ್ದೇಶದ ಕ್ರೀಡಾ ಕಾಂಪ್ಲೆಕ್ಸ್, ಶಾಪ್ಸ್, ಒಳಾಂಗಣ ಆಡಿಟೋರಿಯಂ, ಕುಲಪತಿ ಹಾಗೂ ಸಿಬ್ಬಂದಿಗೆ ವಸತಿಗೃಹ, ಸಿಂಥೆಟಿಕ್ ಟ್ರ್ಯಾಕ್, ಹೊರಾಂಗಣ ಕ್ರೀಡಾಂಗಣ ಇನ್ನಿತರ ಕಾಮಗಾರಿಗಳಿಗೆ ಅಂದಾಜು ೭೫ ಕೋಟಿ ರು. ಅವಶ್ಯಕವಿರುವುದಾಗಿ ಸರ್ಕಾರಕ್ಕೆ ಮಂಡ್ಯ ವಿವಿ ಕುಲಪತಿ ಪ್ರಸ್ತಾವನೆ ಕಳುಹಿಸಿದರೂ ನಯಾಪೈಸೆ ಹಣವನ್ನೂ ಬಿಡುಗಡೆ ಮಾಡಲಿಲ್ಲ. ೨೦೧೯ರಲ್ಲಿ ಮಂಡ್ಯ ವಿವಿ ಸ್ಥಾಪನೆ೨೦೧೯ರಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಮಂಡ್ಯ ಸರ್ಕಾರಿ ಮಹಾ ವಿದ್ಯಾಲಯಕ್ಕೆ ಏಕೀಕೃತ ವಿಶ್ವ ವಿದ್ಯಾನಿಲಯದ ಸ್ಥಾನಮಾನ ಘೋಷಿಸಿತ್ತು. ಇದರಿಂದ ಮಂಡ್ಯ ಜಿಲ್ಲೆ ಪೂರ್ಣ ಪ್ರಮಾಣದ ವಿಶ್ವ ವಿದ್ಯಾನಿಲಯವಾಗಿ ಇದೀಗ ಹೊರಹೊಮ್ಮಿತ್ತು. ಜಿಲ್ಲೆಯ ಯುವಕ-ಯುವತಿಯರು ಉನ್ನತ ಶಿಕ್ಷಣದಲ್ಲಿ ಸ್ನಾತಕೋತ್ತರ ಅಧ್ಯಯನ, ಡಾಕ್ಟರೇಟ್ ಅಧ್ಯಯನ ಇತ್ಯಾದಿಗಳಿಗೆ ಮೈಸೂರು, ಬೆಂಗಳೂರು, ಹಾಸನ ಸೇರಿದಂತೆ ಇನ್ನಿತರ ಜಿಲ್ಲೆಗಳಲ್ಲಿರುವ ವಿಶ್ವವಿದ್ಯಾಲಯ ಕಡೆ ಮುಖ ಮಾಡುವುದು ತಪ್ಪುವುದೆಂಬ ಭಾವನೆ ಎಲ್ಲರಲ್ಲೂ ಮೂಡಿತ್ತು.
ಉನ್ನತ ಶಿಕ್ಷಣದಲ್ಲಿ ಸ್ನಾತಕೋತ್ತರ ಅಧ್ಯಯನ, ಡಾಕ್ಟರೇಟ್ ಅಧ್ಯಯನ, ಸಂಶೋಧನೆಗೆ ಮುಕ್ತ ಅವಕಾಶ ಹಾಗೂ ಪ್ರಾದೇಶಿಕ ಸಮಾನತೆ ನೀಡುವ ದೃಷ್ಟಿಯಿಂದ ಮಂಡ್ಯ ಏಕೀಕೃತ ವಿಶ್ವ ವಿದ್ಯಾನಿಲಯವನ್ನು ಮಂಡ್ಯ ಜಿಲ್ಲಾ ವಿಶ್ವವಿದ್ಯಾನಿಲಯವಾಗಿ ಪರಿವರ್ತಿಸಿ ಸಚಿವ ಸಂಪುಟ ಅನುಮೋದಿಸಿತ್ತು. ಇದರಿಂದ ಮಂಡ್ಯ ಜಿಲ್ಲಾ ವ್ಯಾಪ್ತಿಯ ಸುಮಾರು ೪೭ಕ್ಕೂ ಹೆಚ್ಚಿನ ಪದವಿ ಕಾಲೇಜುಗಳು ಮಂಡ್ಯ ವಿಶ್ವವಿದ್ಯಾಲಯದ ಸಂಯೋಜನೆಗೆ ಒಳಪಟ್ಟಿದ್ದವು.ಮಂಡ್ಯ ವಿಶ್ವವಿದ್ಯಾನಿಲಯದಲ್ಲಿ ಕೌಶಲ್ಯಾಧಾರಿತ, ಸಂಶೋಧನಾತ್ಮಕ ಹಾಗೂ ತಾಂತ್ರಿಕವಾಗಿಯೂ ಶಿಕ್ಷಣವನ್ನು ಕಲಿಯುವುದಕ್ಕೆ ಪೂರಕವಾದ ಅವಕಾಶಗಳನ್ನು ಕಲ್ಪಿಸಿಕೊಡುವುದು. ಈ ಅವಕಾಶಗಳು ಜಿಲ್ಲೆಯ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಹೊರ ರಾಜ್ಯದ ಹಾಗೂ ವಿದೇಶ ವಿದ್ಯಾರ್ಥಿಗಳಿಗೂ ಸಂಶೋಧನೆಗೆ ಮುಕ್ತ ಅವಕಾಶ ಮಾಡಿಕೊಡುವ ಮಹತ್ವಾಕಾಂಕ್ಷೆ ಹೊಂದಲಾಗಿತ್ತು. ಮಂಡ್ಯ ಶಿಕ್ಷಣ ಕ್ಷೇತ್ರದ ಬೆಳವಣಿಗೆಯಲ್ಲಿ ಹೊಸ ಅಧ್ಯಾಯ ಶುರುವಾಗುವ ಆಶಾಭಾವನೆ ಮೂಡಿತ್ತು.