ಧರ್ಮ ಪರಿಪಾಲನೆಯಿಂದ ಜೀವನದಲ್ಲಿ ಶ್ರೇಯಸ್ಸು

| Published : Apr 14 2024, 01:48 AM IST

ಸಾರಾಂಶ

ಪ್ರಕೃತಿ ಮಾನವನನ್ನು ಸೃಷ್ಠಿಸಿದರೆ, ಸಂಸ್ಕಾರ ಆದರ್ಶ ವ್ಯಕ್ತಿಗಳನ್ನು ಸೃಷ್ಟಿಸುತ್ತದೆ. ಆಡಿದ ಮಾತು ಉಳಿಸಿಕೊಳ್ಳುವುದೇ ನಿಜವಾದ ಧರ್ಮ. ಭೌತಿಕ ಬದುಕಿನಿಂದ ಉಂಟಾಗುವ ಅತೃಪ್ತಿ ಮತ್ತು ಅಸಮಾಧಾನ ನಿವಾರಣೆಗೆ ಧರ್ಮವೊಂದೇ ಸುಲಭ ಮಾರ್ಗ.

ಹುಬ್ಬಳ್ಳಿ:

ಭೌತಿಕ ಬದುಕಿಗೆ ಸಂಪತ್ತಷ್ಟೇ ಮುಖ್ಯವಲ್ಲ. ಅದರೊಟ್ಟಿಗೆ ಧರ್ಮ ಪ್ರಜ್ಞೆ ಮತ್ತು ಸದಾಚಾರ ಬೆಳೆದು ಬರಬೇಕು. ಶುದ್ಧವಾದ ಬುದ್ಧಿ ಸಂಪತ್ತಿನ ಆಗರ. ಧರ್ಮ ಪರಿಪಾಲನೆಯಿಂದ ಜೀವನದಲ್ಲಿ ಸುಖ, ಶಾಂತಿ ಮತ್ತು ಶ್ರೇಯಸ್ಸು ಪ್ರಾಪ್ತವಾಗುವುದು ಎಂದು ಬಾಳೆಹೊನ್ನೂರು ರಂಭಾಪುರಿ ಡಾ. ವೀರಸೋಮೇಶ್ವರ ಶ್ರೀ ಅಭಿಪ್ರಾಯಪಟ್ಟರು.ಅವರು ಶನಿವಾರ ತಾಲೂಕಿನ ಹಳ್ಯಾಳ ಗ್ರಾಮದಲ್ಲಿ ಜ. ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಜಾತ್ರಾ ಮಹೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಪ್ರಕೃತಿ ಮಾನವನನ್ನು ಸೃಷ್ಠಿಸಿದರೆ, ಸಂಸ್ಕಾರ ಆದರ್ಶ ವ್ಯಕ್ತಿಗಳನ್ನು ಸೃಷ್ಟಿಸುತ್ತದೆ. ಆಡಿದ ಮಾತು ಉಳಿಸಿಕೊಳ್ಳುವುದೇ ನಿಜವಾದ ಧರ್ಮ. ಭೌತಿಕ ಬದುಕಿನಿಂದ ಉಂಟಾಗುವ ಅತೃಪ್ತಿ ಮತ್ತು ಅಸಮಾಧಾನ ನಿವಾರಣೆಗೆ ಧರ್ಮವೊಂದೇ ಸುಲಭ ಮಾರ್ಗ. ಬಿತ್ತಿದ ಬೀಜದಂತೆ ಫಸಲು ಹೇಗೋ ಹಾಗೆ ನಮ್ಮ ಆಚರಣೆಯಂತೆ ಫಲ ಪ್ರಾಪ್ತಿ ಎಂದರು.

ಕರ್ತವ್ಯ, ಶಿಸ್ತು, ಶ್ರದ್ಧೆ, ಛಲ ಮತ್ತು ಸಮರ್ಪಣಾ ಮನೋಭಾವವನ್ನು ಮನುಷ್ಯ ಬೆಳೆಸಿಕೊಳ್ಳಬೇಕಾದ ಅಗತ್ಯವಿದೆ. ಜ. ರೇಣುಕಾಚಾರ್ಯರು ಬೋಧಿಸಿದ ಶಿವಾದ್ವೈತ ಸಿದ್ಧಾಂತದ ಜ್ಞಾನ ಜೀವ ಜಗತ್ತಿಗೆ ಸಂಜೀವಿನಿಯಾಗಿದೆ. ಜ್ಞಾನ ಕ್ರಿಯಾ ಬದುಕಿನೊಂದಿಗೆ ಸಾಮಾಜಿಕ ಮೌಲ್ಯ ಎತ್ತಿ ಹಿಡಿದ ಕೀರ್ತಿ ಜ. ರೇಣುಕಾಚಾರ್ಯರಿಗೆ ಸಲ್ಲುತ್ತದೆ ಎಂದು ಹೇಳಿದರು.

ನೇತೃತ್ವ ವಹಿಸಿದ್ದ ಸುಳ್ಳ ಪಂಚಗೃಹ ಹಿರೇಮಠದ ಶಿವಸಿದ್ಧರಾಮೇಶ್ವರ ಶಿವಾಚಾರ್ಯರು ಆಶೀರ್ವಚನ ನೀಡಿದರು. ಗುರುನಾಥಗೌಡ ಮಾದಾಪುರ, ಬಿ.ಡಿ. ನಾಗನಗೌಡ್ರ, ಟಾಕನಗೌಡ ಗಬ್ಬೂರು, ಬಸವರಾಜ ಹಸರಡ್ಡಿ, ವಿಜಯಕುಮಾರ ಬೆಳವಟಗಿ, ಖಾದರಸಾಬ್‌ ನದಾಫ್‌, ಮಾರುತಿ ಅಮರಗೋಳ, ಗಂಗಾಧರಸ್ವಾಮಿ ಹಿರೇಮಠ, ಗಂಗಾಧರ ನಾಗನಗೌಡ್ರ ಸೇರಿದಂತೆ ಹಲವರಿದ್ದರು. ಸಮಾರಂಭಕ್ಕೂ ಮುನ್ನ ಜ. ರೇಣುಕಾಚಾರ್ಯ ಧರ್ಮ ರಥೋತ್ಸವ ಸಹಸ್ರಾರು ಜನರ ಮಧ್ಯೆ ಸಂಭ್ರಮದಿಂದ ಜರುಗಿತು.