ಮೇರು ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ನಿಧನ

| Published : Apr 26 2024, 12:57 AM IST / Updated: Apr 26 2024, 08:24 AM IST

Dhareshwara

ಸಾರಾಂಶ

1957ರಲ್ಲಿ ಗೋಕರ್ಣದಲ್ಲಿ ಜನಿಸಿದ ಧಾರೇಶ್ವರ, ಪೆರ್ಡೂರು, ಅಮೃತೇಶ್ವರಿ, ಹಿರೇಮಹಾಲಿಂಗೇಶ್ವರ ಹಾಗೂ ಶಿರಸಿ ಮೇಳಗಳಲ್ಲಿ ಸುಮಾರು 47 ವರ್ಷಗಳ ಕಾಲ ಭಾಗವತರಾಗಿ ಜನ ಮೆಚ್ಚುಗೆ ಗಳಿಸಿದ್ದರು.

ಕಾರವಾರ: ಬಡಗುತಿಟ್ಟಿನ ಪ್ರಸಿದ್ಧ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ (67) ಗುರುವಾರ ನಸುಕಿನಲ್ಲಿ ಬೆಂಗಳೂರಿನಲ್ಲಿ ನಿಧನರಾದರು.

ಕೆಲ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಚಿಕಿತ್ಸೆಗೆ ಸ್ಪಂದಿಸದೆ ಅಸುನೀಗಿದರು. ಅವರಿಗೆ ಪತ್ನಿ, ಪುತ್ರ, ಪುತ್ರಿ ಹಾಗೂ ಅಪಾರ ಅಭಿಮಾನಿಗಳು ಇದ್ದಾರೆ.

1957ರಲ್ಲಿ ಗೋಕರ್ಣದಲ್ಲಿ ಜನಿಸಿದ ಧಾರೇಶ್ವರ, ಪೆರ್ಡೂರು, ಅಮೃತೇಶ್ವರಿ, ಹಿರೇಮಹಾಲಿಂಗೇಶ್ವರ ಹಾಗೂ ಶಿರಸಿ ಮೇಳಗಳಲ್ಲಿ ಸುಮಾರು 47 ವರ್ಷಗಳ ಕಾಲ ಭಾಗವತರಾಗಿ ಜನ ಮೆಚ್ಚುಗೆ ಗಳಿಸಿದ್ದರು. ಅವರ ನಿಧನಕ್ಕೆ ಯಕ್ಷರಂಗದ ಗಣ್ಯರು, ಕಲಾವಿದರು. ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.ಧಾರೇಶ್ವರ ನಿಧನಕ್ಕೆ ಕಂಬನಿ

ಜನರ ಕಂಬನಿ: ಖ್ಯಾತ ಯಕ್ಷಗಾನ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ನಿಧನಕ್ಕೆ ಗೋಕರ್ಣ ಕ್ಷೇತ್ರದ ಜನರು ಕಂಬನಿ ಮಿಡಿದಿದ್ದಾರೆ.

ಇಲ್ಲಿ ಹುಟ್ಟಿ ಬೆಳೆದು ಉದ್ಯೋಗ ಅರಸಿ ದಕ್ಷಿಣಕನ್ನಡ ಜಿಲ್ಲೆಗೆ ತೆರಳಿ ಅಲ್ಲೇ ನೆಲೆ ಕಂಡ ಅವರು ಯಕ್ಷಗಾನದಲ್ಲಿ ತಮ್ಮದೇ ಛಾಪಿನ ಮೂಲಕ ನಾಲ್ಕು ದಶಕಕ್ಕೂ ಅಧಿಕ ಕಾಲ ಕೋಗಿಲೆ ಕಂಠಸಿರಿಯ ಧಾರೇಶ್ವರ ಭಾಗವತರೆಂದೆ ಚಿರಪರಿಚಿತರಾಗಿ, ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದರು.ಅಂದಿನ ಕಷ್ಟದ ದಿನದಲ್ಲಿ ಊರು ಬಿಟ್ಟು ಹೋದರೂ ಹುಟ್ಟೂರನ್ನು ಮರೆಯದೇ ನಿರಂತರ ಗೋಕರ್ಣಕ್ಕೆ ಭೇಟಿ ನೀಡುತ್ತಾ, ಇಲ್ಲಿನ ಅಭಿಮಾನಿಗಳು, ತಮ್ಮ ಸಹಪಾಠಿಗಳೊಂದಿಗೆ ಕುಶಲೋಪರಿ ವಿಚಾರಿಸುವುದು, ಇಲ್ಲಿ ನಡೆಯುವ ಯಕ್ಷಗಾನ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರೋತ್ಸಾಹಿಸಿ ಪುಣ್ಯ ಕ್ಷೇತ್ರದಲ್ಲಿ ತಮ್ಮದೇ ಕೊಡಗುಗೆ ನೀಡಿದ್ದು ಇನ್ನೂ ನೆನಪು ಮಾತ್ರವಾಗಿದೆ.

ನಾಲ್ಕು ತಿಂಗಳ ಹಿಂದೆ ಬಂಕಿಕೊಡ್ಲದಲ್ಲಿ ನಡೆದ ಯಕ್ಷಗಾನ ಪ್ರದರ್ಶನದಲ್ಲಿ ಭಾಗವತಿಕೆ ಮಾಡಿರುವುದು ಈ ಭಾಗದಲ್ಲಿ ಇವರ ಕೊನೆಯ ಭಾಗವತಿಕೆಯಾಗಿದೆ ಎಂದಿದ್ದಾರೆ.ಇಲ್ಲಿನ ಶ್ರೀಕೃಷ್ಣ ವೇದ ಪ್ರತಿಷ್ಠಾನದ ಅಧ್ಯಕ್ಷ ವೇ. ಶಿವರಾಮ ಮಯ್ಯರ, ಮಹಾಬಲೇಶ್ವರ ಮಂದಿರದ ಮೇಲುಸ್ತುವಾರಿ ಸಮಿತಿ ಸದಸ್ಯ ವೇ. ದತ್ತಾತ್ರೇಯ ಹಿರೇಗಂಗೆ, ರೋಟರಿ ಕ್ಲನಬ್ ಅಧ್ಯಕ್ಷ ನಾಗಾರಜ ಹಿತ್ತಲಮಕ್ಕಿ, ಶಂಕರ ಗೋಪಿ ಸೇರಿದಂತೆ ಇಲ್ಲಿನ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ಇಲ್ಲಿನ ವಿವಿಧ ಸಂಘ- ಸಂಸ್ಥೆಗಳು, ಗಣ್ಯರು ಊರ ನಾಗರಿಕರು ಶೋಕ ವ್ಯಕ್ತಪಡಿಸಿದ್ದಾರೆ.

ಸುದೀರ್ಘ ಕಾಲ ಯಕ್ಷರಂಗ ಆಳಿದ ಧಾರೇಶ್ವರ

ವಸಂತಕುಮಾರ್ ಕತಗಾಲ

ಕಾರವಾರ: ಬಡಗುತಿಟ್ಟಿನ ಮೇರು ಭಾಗವತ, ಯಕ್ಷರಂಗವನ್ನು ಸುದೀರ್ಘ ಅವಧಿ ಆಳಿದ ಸುಬ್ರಹ್ಮಣ್ಯ ಧಾರೇಶ್ವರ ಇಹಲೋಕ ತ್ಯಜಿಸಿರುವುದು ಯಕ್ಷಲೋಕಕ್ಕೆ ಗರ ಬಡಿದಂತಾಗಿದೆ.ಎಲೆಕ್ಟ್ರೀಶಿಯನ್ ಆಗಿ ಮೇಳ ಸೇರಿದ್ದ ಧಾರೇಶ್ವರ. ಪ್ರಸಿದ್ಧ ಭಾಗವತರಾಗಿ ಯಕ್ಷರಂಗವನ್ನು ಮುನ್ನಡೆಸಿದ್ದು ಇತಿಹಾಸ. ಗೋಕರ್ಣದಲ್ಲಿ ಹುಟ್ಟಿ, ಬೆಳೆದು ಉಡುಪಿ ಜಿಲ್ಲೆಯ ಕಿರಿಮಂಜೇಶ್ವರದಲ್ಲಿ ನೆಲೆಸಿದ ಭಾಗವತರು ಯಕ್ಷಗಾನಕ್ಕೆ ಸಲ್ಲಿಸಿದ ಸೇವೆ ಆಗಾದವಾದುದು.

ಪೆರ್ಡೂರು ಮೇಳದಲ್ಲಿ 28 ವರ್ಷಗಳ ಕಾಲ ಸೇವೆ ಸಲ್ಲಿಸಿದ ಧಾರೇಶ್ವರ, ಆ ಮೇಳದ ಪ್ರಧಾನ ಭಾಗವತರಾಗಿ ಸಂಚಲನವನ್ನೇ ಸೃಷ್ಟಿಸಿದರು. ಸಂಪ್ರದಾಯದ ಚೌಕಟ್ಟಿನಲ್ಲೇ ಹೊಸ ಹೊಸ ಪ್ರಯೋಗಗಳ ಮೂಲಕ ಅಪಾರ ಜನಮೆಚ್ಚುಗೆ ಗಳಿಸಿದ್ದರು. ಯಕ್ಷಗಾನಕ್ಕೆ ಯುವ ಪ್ರೇಕ್ಷಕರನ್ನು ಸೆಳೆದ ಶ್ರೇಯಸ್ಸು ಅವರದ್ದು. ಪೌರಾಣಿಕ ಪ್ರಸಂಗಗಳ ಜತೆಗೆ ಹೊಸ ಹೊಸ ಪ್ರಸಂಗಗಳನ್ನು ಯಕ್ಷಗಾನಕ್ಕೆ ಯಶಸ್ವಿಯಾಗಿ ಅಳವಡಿಸಿ ಯಕ್ಷಲೋಕದಲ್ಲಿ ಸಂಚಲನವನ್ನು ಸೃಷ್ಟಿಸಿದ್ದರು.

ಪೆರ್ಡೂರು, ಅಮೃತೇಶ್ವರಿ ಸೇರಿದಂತೆ ವಿವಿಧ ವೃತ್ತಿ ಮೇಳಗಳಲ್ಲಿ 47 ವರ್ಷಗಳ ಕಾಲ ಭಾಗವತಿಕೆ ಮಾಡಿ ಜನಪ್ರಿಯತೆಯನ್ನು ಕಾದಿಟ್ಟುಕೊಂಡು ಬಂದರು. ಮೇಳದಿಂದ ನಿವೃತ್ತರಾಗಿ ದಶಕದ ತರುವಾಯ ಮತ್ತೆ ಪೆರ್ಡೂರು ಮೇಳದ ಪ್ರಧಾನ ಭಾಗವತರಾಗಿ ಒಂದು ಯಶಸ್ವಿ ತಿರುಗಾಟ ನಡೆಸಿದ್ದು ಅಚ್ಚರಿಯೇ ಹೌದು.ದಿ. ನಾರ್ಣಪ್ಪ ಉಪ್ಪೂರು ಭಾಗವತರ ಶಿಷ್ಯರಾದ ಕಾಳಿಂಗ ನಾವಡ ಹಾಗೂ ಸುಬ್ರಹ್ಮಣ್ಯ ಧಾರೇಶ್ವರ ಸಮಕಾಲೀನರಾಗಿ ಯಕ್ಷಗಾನದಲ್ಲಿ ಎಲ್ಲ ಸಾಧ್ಯತೆಯನ್ನು ತೆರೆದಿಟ್ಟ ಭಾಗವತರು. ಇವರಿಬ್ಬರೂ ಭಾಗವತರು ಯಕ್ಷಗಾನದ ಬಾಕ್ಸ್ ಆಫೀಸ್ ಕಲಾವಿದರಾಗಿದ್ದರು.

ಚಿಟ್ಟಾಣಿ ರಾಮಚಂದ್ರ ಹೆಗಡೆ, ಗೋಡೆ ನಾರಾಯಣ ಹೆಗಡೆ, ಕೃಷ್ಣ ಯಾಜಿ ಬಳಕೂರ, ಕೊಂಡದಕುಳಿ ರಾಮಚಂದ್ರ ಹೆಗಡೆ... ಎಲ್ಲ ಅಗ್ರಗಣ್ಯ ಕಲಾವಿದರನ್ನು ಕುಣಿಸಿದ ಹೆಗ್ಗಳಿಕೆ ಇವರದ್ದು. ಅದೆಷ್ಟೋ ಕಲಾವಿದರಿಗೆ ಪ್ರೋತ್ಸಾಹ ನೀಡಿ ಬೆಳಕಿಗೆ ತಂದ ಸಹೃದಯಿ.ರಾಜ್ಯೋತ್ಸವ ಪ್ರಶಸ್ತಿಯ ಜತೆಗೆ ಇವರಿಗೆ ವಿವಿಧ ಸಂಘಟನೆಗಳು, ಅಭಿಮಾನಿಗಳು ನೀಡಿದ ಪ್ರಶಸ್ತಿ, ಪುರಸ್ಕಾರ, ಗೌರವಗಳಿಗೆ ಲೆಕ್ಕವಿಲ್ಲ. ಯಕ್ಷಗಾನ ಸಂಘಟಕರಾಗಿಯೂ ಗುರುತಿಸಿಕೊಂಡಿದ್ದರು.ಯಾವುದೇ ಹಮ್ಮು, ಬಿಮ್ಮುಗಳಿಲ್ಲದೆ ಎಲ್ಲರೊಂದಿಗೆ ಒಡನಾಡುವ ಧಾರೇಶ್ವರ ಅಚ್ಚುಮೆಚ್ಚಿನ ಭಾಗವತರಾಗಿದ್ದರು. ಯಕ್ಷಗಾನದ ಹಾಡುಗಳಿಗೆ ಸಂಪ್ರದಾಯದ ಚೌಕಟ್ಟಿನೊಳಗೆ ಸಂಗೀತದ ಟಚ್ ನೀಡಿ ಸೈ ಎನಿಸಿಕೊಂಡ ಭಾಗವತರು ಇವರು. ಒಟ್ಟಾರೆ ಧಾರೇಶ್ವರ ಅವರನ್ನು ಕಳೆದುಕೊಂಡ ಯಕ್ಷರಂಗಕ್ಕೆ ಗರ ಬಡಿದಂತಾಗಿದೆ.

ಮಾರ್ಗದರ್ಶಕ: ಕಲಾವಿದರಿಗೆ ಮಾರ್ಗದರ್ಶಕರಾಗಿ, ಯಕ್ಷಗಾನದ ಉತ್ತಮ ಪ್ರದರ್ಶನಕ್ಕೆ ಕಾರಣರಾಗುತ್ತಿದ್ದ ಸುಬ್ರಹ್ಮಣ್ಯ ಧಾರೇಶ್ವರ ನಿಧನ ತುಂಬ ನೋವು ತಂದಿದೆ. ಅಂತಹ ಸಾಧಕರನ್ನು ಯಕ್ಷಗಾನ ಕಳೆದುಕೊಂಡಂತಾಗಿದೆ ಎಂದು ಯಕ್ಷಗಾನ ಕಲಾವಿದ ರಮೇಶ ಭಂಡಾರಿ ತಿಳಿಸಿದರು.