ನುಲಿಯ ಚಂದಯ್ಯ ಶರಣ ಸಮೂಹದ ಮೇರುಪರ್ವತ: ಪತ್ರಕರ್ತ ಮೋಹನರಾಜ

| Published : Sep 03 2024, 01:35 AM IST

ನುಲಿಯ ಚಂದಯ್ಯ ಶರಣ ಸಮೂಹದ ಮೇರುಪರ್ವತ: ಪತ್ರಕರ್ತ ಮೋಹನರಾಜ
Share this Article
  • FB
  • TW
  • Linkdin
  • Email

ಸಾರಾಂಶ

ಬೀದರ್ ಜಿಲ್ಲಾಡಳಿತದಿಂದ ನಗರದ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಶಿವಶರಣ ನುಲಿಯ ಚಂದಯ್ಯನವರ ಜಯಂತಿ ಉತ್ಸವ ಜರುಗಿತು.

ಕನ್ನಡಪ್ರಭ ವಾರ್ತೆ ಬೀದರ್‌

ಬಸವಾದಿ ಶರಣ ಸಂದೋಹದ ಮೇರು ಪರ್ವತ ನುಲಿಯ ಚಂದಯ್ಯನವರಾಗಿದ್ದರು ಎಂದು ಮೈಸೂರಿನ ಪತ್ರಕರ್ತ ಹಾಗೂ ಸಾಮಾಜಿಕ ಕಾರ್ಯಕರ್ತ ಮೋಹನರಾಜ ತಿಳಿಸಿದರು.

ಅವರು ಜಿಲ್ಲಾಡಳಿತದಿಂದ ನಗರದ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಆಯೋಜಿಸಿದ ಶಿವಶರಣ ನುಲಿಯ ಚಂದಯ್ಯನವರ 917ನೇ ಜಯಂತಿ ಉತ್ಸವದಲ್ಲಿ ವಿಶೇಷ ಉಪನ್ಯಾಸ ನೀಡಿ, ನುಲಿಯ ಚಂದಯ್ಯ ಬಸವಕಲ್ಯಾಣದ ಕೆರೆಯ ಹಿನ್ನೀರ ದಡದಲ್ಲಿ ಬೆಳೆಸ ಸೊಗಸಾದ ಹುಲ್ಲನ್ನು ತಂದು, ಹಗ್ಗ ಹೊಸೆದು ಅದನ್ನು ಮಾರಾಟ ಮಾಡಿ ಬಂದ ಹಣದಲ್ಲಿಯೇ ಜೀವನ ಸಾಗಿಸುವುದರ ಜೊತೆಗೆ ಜಂಗಮ ದಾಸೋಹವನ್ನು ಮಾಡುತ್ತಿದ್ದರು. ಚಂದೇಶ್ವರ ಎಂಬ ಅಂಕಿತನಾಮದಡಿಯಲ್ಲಿ ರಚಿಸಿದ ಸುಮಾರು 48 ವಚನಗಳು ಇದುವರೆಗೆ ಲಭಿಸಿವೆ. ಬನವಾಸಿಯ ಮಧುಕೇಶ್ವರ ದೇವಸ್ಥಾನದಲ್ಲಿರುವ ಕಲ್ಲುಮಂಟಪದ ಶಿಲಾಶಾಸನದಲ್ಲಿ ಚಂದಯ್ಯನವರ ಹೆಸರು ಕೆತ್ತಲಾಗಿದೆ. ಆದಾಯಕ್ಕಿಂತ ಹೆಚ್ಚು ಹಣ ಬಂದರೆ ಅದನ್ನು ಚಂದಯ್ಯ ಸ್ವೀಕರಿಸದೆ ಇರುತಿದ್ದರು ಹೀಗಾಗಿ ಬಸವೇಶ್ವರರ ಕಾಯಕ ಮತ್ತು ದಾಸೋಹ ಸಿದ್ಧಾಂತ ಮುಂದುವರೆಸಿದ ಕೀರ್ತಿ ಚಂದಯ್ಯರಿಗೆ ಸಲ್ಲುತ್ತದೆ ಎಂದು ಮೋಹನರಾಜ್ ತಿಳಿಸಿದರು.

ಸಾನ್ನಿಧ್ಯ ವಹಿಸಿದ್ದ ಭಾಲ್ಕಿ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ನುಲಿಯ ಚಂದಯ್ಯ ಸಮಾಜದ ಕೊರಮ(ಕೊರವ) ಸಮಾಜದ ಬಾಂಧವರು ಸಂಘಟಿತರಾಗಿ ಹೋರಾಟ ಮಾಡಬೇಕು. ಚಂದಯ್ಯನವರ ಕಾಯಕನಿಷ್ಠೆ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಶೈಕ್ಷಣಿಕ, ಸಾಮಾಜಿಕವಾಗಿ ಹಾಗೂ ಸರ್ವರಂಗಗಳಲ್ಲೂ ಮುಂಚೂಣಿಗೆ ಬರಬೇಕೆಂದು ಸಲಹೆ ನೀಡಿದರು.

ಬೀದರ್ ತಹಸೀಲ್ದಾರ್ ದಿಲಶಾದ ಮೆಹತ್ ಉದ್ಘಾಟಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಶಿಂಧೆ, ಜಿಪಂ ಯೋಜನಾಧಿಕಾರಿ ಜಗನ್ನಾಥ ಮೂರ್ತಿ, ಬೀದರ ಜಿಲ್ಲಾ ಕೊರಮ(ಕೊರವ) ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಸಂತೋಷ ಡಿ. ಕೊರವ, ಪ್ರಾಧ್ಯಾಪಕ ಶಿವಶರಣಪ್ಪ ಹುಗ್ಗೆಪಾಟೀಲ, ಬಸವಕಲ್ಯಾಣ ಸಿಎಂಸಿ ಸದಸ್ಯ ರಾಮಜಾಧವ, ಕನಕಟ್ಟಾ ಗ್ರಾ.ಪಂ. ಅಧ್ಯಕ್ಷ ಮನೋಜ ಮಾನೆ, ರಾಮ ಚಾಳಕಾಪೂರ, ಸಂಘದ ಪ್ರಧಾನ ಕಾರ್ಯದರ್ಶಿ ಸಂಜೀವಕುಮಾರ ಬೇಲೂರ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸಿದ್ರಾಮ ಶಿಂಧೆ ಸ್ವಾಗತಿಸಿದರು. ಚನ್ನಬಸವ ಹೆಡೆ ನಿರೂಪಿಸಿದರೆ ಸಂಜೀವಕುಮಾರ ಬೇಲೂರ ವಂದಿಸಿದರು.

ಇದೇ ವೇಳೆ ಸಮುದಾಯದ ಅತಿ ಹೆಚ್ಚು ಅಂಕಗಳನ್ನು ಪಡೆದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಗೌರವಿಸಲಾಯಿತು. ನುಲಿಯ ಚಂದಯ್ಯ ಜಯಂತಿ ಪ್ರಯುಕ್ತ ಕ್ರಿಕೆಟ್ ಪಂದ್ಯಾವಳಿ ಆಯೋಜನೆ ಮಾಡಲಾಗಿತ್ತು. ಇದರಲ್ಲಿ ಪ್ರಥಮ ಸ್ಥಾನ ಪಡೆದ ಕನಕಟ್ಟಾ ತಂಡಕ್ಕೆ ಟ್ರೋಫಿ ಹಾಗೂ 11 ಸಾವಿರ ರು. ಹಾಗೂ ದ್ವಿತೀಯ ಸ್ಥಾನ ಪಡೆದ ನೌಬಾದ ತಂಡಕ್ಕೆ ಟ್ರೋಫಿ ಹಾಗೂ 7 ಸಾವಿರ ರು.ಬಹುಮಾನ ನೀಡಿ ಸನ್ಮಾನಿಸಲಾಯಿತು.

ಸಮುದಾಯದ ಬಸಪ್ಪ ಭಜಂತ್ರಿ ಗದಗ್ ಅವರು ಉತ್ತರ ಕರ್ನಾಟಕದ ಕೊರಮ ಸಮುದಾಯ ಒಂದು ಸಾಂಸ್ಕೃತಿಕ ಅಧ್ಯಯನ ವಿಷಯದ ಮೇಲೆ ಸಂಶೋಧನೆ ಕೈಗೊಂಡ ಪ್ರಯುಕ್ತ ಅವರನ್ನು ಸನ್ಮಾನಿಸಲಾಯಿತು.