ಸಾರಾಂಶ
ತರೀಕೆರೆ, ಪಟ್ಟಣದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ಗ್ರಾಹಕರಿಗೆ ಒಂದು ದೊಡ್ಡ ತಲೆನೋವಾಗಿದೆ. ರಾತ್ರಿ ಹಗಲು ಎನ್ನದೆ ಪದೇ ಪದೇ ಕರೆಂಟು ಹೋಗುತ್ತಲೇ ಇರುತ್ತದೆ. ಬಿರು ಬೇಸಿಗೆ ಈ ಸಮಯದಲ್ಲಿ ಜಮೀನು, ತೋಟ, ಹೊಲ ಗದ್ದೆಗಳಲ್ಲಿ ಕೊಳವೆ ಬಾವಿ ಗಳಿಂದ ಪಂಪ್ ಸೆಟ್ ಗಳ ಮೂಲಕ ಬೆಳೆಗಳಿಗೆ ನೀರು ಹಾಯಿಸಲು ನಿರಂತರವಾಗಿ ವಿದ್ಯುತ್ ಬೇಕೇ ಬೇಕು. ಆದರೆ ಆಗಾಗ್ಗೆ ಕೈಕೊಡುವ ಈ ವಿದ್ಯುತ್ತಿನಿಂದ ಬೆಳೆದು ನಿಂತ ಬೆಳೆಗಳಿಗೆ ನೀರು ಪೂರೈಸಲು ಹೆಣಗಾಡುವ ಪರಿಸ್ಥಿತಿ ಎದುರಿಸುತ್ತಿದ್ದಾರೆ ರೈತರು.
ಸಾಕಷ್ಟು ವಿದ್ಯುತ್ ಇದ್ದರೂ ಸಮರ್ಪಕ ಸರಬರಾಜಿಲ್ಲ । ಹಲವು ಸಮಸ್ಯೆಗಳ ಆಗರವಾದ ತರೀಕೆರೆ ಮೆಸ್ಕಾಂ । , 3 ಎ.ಇ.ಪೋಸ್ಟ್ ಇದ್ದರೂ ಒಬ್ಬರ ಮೇಲೆ ಒತ್ತಡ
ಅನಂತ ನಾಡಿಗ್ ಕನ್ನಡಪ್ರಭ ವಾರ್ತೆ, ತರೀಕೆರೆಪಟ್ಟಣದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ಗ್ರಾಹಕರಿಗೆ ಒಂದು ದೊಡ್ಡ ತಲೆನೋವಾಗಿದೆ. ರಾತ್ರಿ ಹಗಲು ಎನ್ನದೆ ಪದೇ ಪದೇ ಕರೆಂಟು ಹೋಗುತ್ತಲೇ ಇರುತ್ತದೆ. ಬಿರು ಬೇಸಿಗೆ ಈ ಸಮಯದಲ್ಲಿ ಜಮೀನು, ತೋಟ, ಹೊಲ ಗದ್ದೆಗಳಲ್ಲಿ ಕೊಳವೆ ಬಾವಿ ಗಳಿಂದ ಪಂಪ್ ಸೆಟ್ ಗಳ ಮೂಲಕ ಬೆಳೆಗಳಿಗೆ ನೀರು ಹಾಯಿಸಲು ನಿರಂತರವಾಗಿ ವಿದ್ಯುತ್ ಬೇಕೇ ಬೇಕು. ಆದರೆ ಆಗಾಗ್ಗೆ ಕೈಕೊಡುವ ಈ ವಿದ್ಯುತ್ತಿನಿಂದ ಬೆಳೆದು ನಿಂತ ಬೆಳೆಗಳಿಗೆ ನೀರು ಪೂರೈಸಲು ಹೆಣಗಾಡುವ ಪರಿಸ್ಥಿತಿ ಎದುರಿಸುತ್ತಿದ್ದಾರೆ ರೈತರು.
ಪುರಸಭೆಯಿಂದ ಪಟ್ಟಣದ 40 ಸಾವಿರಕ್ಕೂ ಹೆಚ್ಚು ಜನರಿಗೆ, 23 ವಾರ್ಡುಗಳಿಗೆ ಕುಡಿಯುವ ನೀರು ಸರಬರಾಜು ಮಾಡಲು ನೀರು ಶೇಖರಣೆ ಕೇಂದ್ರ, ನೀರು ಶುದ್ಧೀಕರಣ ಕೇಂದ್ರಕ್ಕೆ ಪಟ್ಟಣದ ಹತ್ತಾರು ಓವರ್ ಹೆಡ್ ಟ್ಯಾಂಕುಗಳಿಗೆ ಕುಡಿಯುವ ನೀರನ್ನು ಲಿಫ್ಟ್ ಮಾಡಲು ನಿರಂತರ ವಿದ್ಯುತ್ ಅತ್ಯಗತ್ಯ. ಆದರೆ ವಿಪರ್ಯಾಸವೆಂದರೆ ನೀರು ಶೇಖರಣೆ ಕೇಂದ್ರದಲ್ಲಿ ವಿದ್ಯುತ್ ಇದ್ದರೆ ಪಟ್ಟಣದಲ್ಲಿ ನೀರು ಸರಬರಾಜಿಗೆ ಕರೆಂಟು ಇರುವುದಿಲ್ಲ. ಪಟ್ಟಣದಲ್ಲಿ ಕರೆಂಟು ಇದ್ದರೆ ನೀರು ಶೇಖರಣೆ ಕೇಂದ್ರದಲ್ಲಿ ವಿದ್ಯುತ್ ಇಲ್ಲ.ಪರಿಸ್ಥಿತಿ ಹೀಗಾದರೆ ಪಟ್ಟಣದ ಗ್ರಾಹಕರಿಗೆ ಬೇಸಿಗೆಯಲ್ಲಿ ಕುಡಿಯುವ ನೀರನ್ನು ಹೇಗೆ ಸಮರ್ಪಕವಾಗಿ ಒದಗಿಸಲಾಗದೆ ಮನೆಗಳಿಗೆ ನಿತ್ಯ ಬಳಕೆಗೆ ಮತ್ತು ಕುಡಿಯುವ ನೀರು ಸಂಗ್ರಹಿಸುವುದು ದೊಡ್ಡ ತಲೆನೋವಿನ ಸಂಗತಿಯಾಗಿದೆ.
ಕರೆಂಟು ಇದೆ ಎಂದು ಪಂಪ್ ಸೆಟ್ ಆನ್ ಮಾಡಲು ತೋಟಗಳಿಗೆ ರೈತರು ಹೋಗುವಷ್ಟರಲ್ಲಿ, ತೋಟದಲ್ಲಿ ಕರೆಂಟು ಹೋಗಿರುತ್ತದೆ. ಇಲ್ಲಿ ಕರೆಂಟು ಇದ್ದರೆ ನೀರು ಶೇಖರಣೆ ಕೇಂದ್ರದಲ್ಲಿ ಕರೆಂಟು ಇರಲ್ಲ. ಹೀಗೆ ಹೋಗಿ ಹಾಗೆ ಬರುವ ಕರೆಂಟು ಸರಬರಾಜನ್ನು ನಂಬುವಂತೆ ಇಲ್ಲ ಹಾಗಾಗಿದೆ ತರೀಕೆರೆ ವಿದ್ಯುತ್ ಅವ್ಯವಸ್ಥೆ,ಹೈವೋಲ್ಟೇಜ್ಃ ವಿದ್ಯುತ್ ಸರಬರಾಜನ್ನೇ ಅವಲಂಬಿತ ಸರ್ಕಾರಿ ಕಚೇರಿ, ಬ್ಯಾಂಕ್, ಉದ್ಯಮ ಸಂಸ್ಥೆಗಳು, ಸಣ್ಣ ಪುಟ್ಟ ಕೈಗಾರಿಕೆಗಳು, ಬ್ರೆಡ್ -ಬೇಕರಿ ಉದ್ಯಮಗಳು, ಕಂಪ್ಯೂಟರ್ ಗಳಿಗೆ ಗೃಹೋಪಕರಣ ವಸ್ತುಗಳಾದ ಪ್ರಿಡ್ಜ್, ಫ್ಯಾನ್, ಟೀವಿ ಗಳಿಗೆ ಹೀಗೆ ಆಗಾಗ್ಗೆ ಕರೆಂಟು ಹೋಗಿ ಇದ್ದಕ್ಕಿದ್ದ ಹಾಗೆ ಪುನಃ ಹೈಓಲ್ಟೇಜ್ ಕರೆಂಟು ಬಂದು ವಿದ್ಯುತ್ ಉಪಕರಣಗಳ ಮೇಲೆ ಪರಿಣಾಮ ಬೀರಿ ಆ ವಸ್ತುಗಳೇ ಹಾಳಾಗಿ ಹೋಗುವ ಸಂಭವ ಕೂಡ ಇರುತ್ತದೆ.ಬೇಸಿಗೆ ಸಂದರ್ಭ ಅದರಲ್ಲೂ ಮುಂಗಾರು ಮಳೆ ವೇಳೆಯಲ್ಲಿ ಮಿಂಚು, ಗುಡುಗು, ಸಿಡಿಲು ಭಾರಿ ಗಾಳಿಯಿಂದ ಆಗ್ಗಾಗ್ಗೆ ಅಲ್ಲಲ್ಲಿ ಸಂಪರ್ಕ ಲೈನಿನ ವೈರುಗಳು ತುಂಡಾಗಿ, ಗಾಳಿಗೆ ವಿದ್ಯುತ್ ಕಂಬಗಳೇ ಮುರಿದು ಬಿದ್ದಾಗ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ವಾಗುತ್ತದೆ. ಆದರೆ ಅದನ್ನು ಕೂಡಲೇ ಸರಿಪಡಿಸಿ ವಿದ್ಯುತ್ ಸಂಪರ್ಕ ನೀಡಲು ಸಿಬ್ಬಂದಿ ಕೊರತೆ ಕಾರಣವಾಗಿದೆ.ಎಂ.ಯು.ಎಸ್.ಎಸ್.ಘಟಕಗಳು ಹೆಚ್ಚು ಬೇಕುಃ ತರೀಕೆರೆ ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಈಗಿರುವ ಎಂಯುಎಸ್ ಎಸ್ ಘಟಕಗಳ ಜೊತೆಗೆ ಇನ್ನೂ ಹೆಚ್ಚು ಎಂಯುಎಸ್ ಎಸ್ ಘಟಕಗಳು ಸ್ಥಾಪನೆಯಾಗಬೇಕು. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿದ್ಯುತ್ ರಿಸೀವಿಂಗ್ ಸ್ಟೇಷನ್ ಸ್ಥಾಪನೆಯಾಗಿ ಸಮರ್ಪಕ ಕಾರ್ಯ ನಿರ್ವಹಿಸಿದರೆ ಈಗಿರುವ ವಿದ್ಯುತ್ ಸರಬರಾಜಿನಲ್ಲೇ ಸಮರ್ಪಕ ಮತ್ತು ಗುಣಮಟ್ಟದ ವಿದ್ಯುತ್ ನ್ನು ಗ್ರಾಹಕರಿಗೆ ಒದಗಿಸಬಹುದು. ಜೊತೆಗೆ ಸರ್ಕಾರದ ಹಲವಾರು ಯೋಜನೆಗಳನ್ನು ಗ್ರಾಹಕರಿಗೆ ಸಮರ್ಪಕವಾಗಿ ತಲುಪಿಸಲು ಅನುಕೂಲವಾಗುತ್ತದೆ ಎನ್ನುತ್ತಾರೆ ಮೆಸ್ಕಾಂ ಅಧಿಕಾರಿಗಳು. ಇಲಾಖೆ ಈಗಲಾದರೂ ತರೀಕೆರೆ ಮೆಸ್ಕಾಂ ಕಚೇರಿ ಸಮಸ್ಯೆಗಳನ್ನು ಪರಿಹರಿಸುವತ್ತ ಗಮನ ಹರಿಸಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯ..--ಬಾಕ್ಸ್--
ವಿದ್ಯುತ್ ಕೊರತೆ ಇಲ್ಲತರೀಕೆರೆ ಮೆಸ್ಕಾಂ ವಿಭಾಗಕ್ಕೆ ಸಾಕಷ್ಟು ವಿದ್ಯುತ್ ಸರಬರಾಜು ಇದೆ. ಆದರೆ ಬಹು ಮುಖ್ಯವಾಗಿ ತರೀಕೆರೆ ಮೆಸ್ಕಾಂ ಕಚೇರಿಯಲ್ಲಿ ಸಿಬ್ಬಂದಿ ಕೊರತೆ ಬಹಳಷ್ಟು ಇದೆ ಎನ್ನುತ್ತಾರೆ ಮೆಸ್ಕಾಂ ಅಧಿಕಾರಿಗಳು. ವೈರ್ ತುಂಡಾಗುವುದು, ಮರ ಬಿದ್ದು ವೈರ್ ಕೀಳುವುದು, ಭಾರಿ ಗಾಳಿಯಿಂದ ವಿದ್ಯುತ್ ಕಂಬ ನೆಲಕ್ಕೆ ವಾಲುವುದು ಓವರ್ ಲೋಡ್ ನಿಂದ ಟಿಸಿ ಗಳು ಸುಟ್ಟು ಹೋಗುವುದು ಇಂತಹ ಸಮಸ್ಯೆಗಳು ನಿತ್ಯ ಅನೇಕ ಸಮಸ್ಯೆ ಉಂಟಾಗುತ್ತವೆ. ಅದನ್ನು ಅಟೆಂಡ್ ಮಾಡಲು ಸಮಸ್ಯೆ ಪರಿಹರಿಸಲು ಲೈನ್ ಮೆನ್ ಗಳ ಕೊರತೆ ಇದೆ. ಇರುವ ಸ್ವಲ್ಪವೇ ಲೈನ್ ಮೆನ್ ಗಳೇ ಕಷ್ಟಪಟ್ಟು, ಶ್ರಮಪಟ್ಟು ಹಗಲು ರಾತ್ರಿ ಎನ್ನದೆ ಸಂಚರಿಸಿ ಸಮಸ್ಯೆ ಪರಿಹರಿಸುತ್ತಿದ್ದಾರೆ. ಆದರೆ ತರೀಕೆರೆ ಮೆಸ್ಕಾಂ ಕಚೇರಿಗೆ ಅಗತ್ಯವಿರುವ ಸಾಕಷ್ಚು ಲೈನ್ಮೆನ್ ಗಳನ್ನು ಇಲಾಖೆ ಒದಗಿಸಬೇಕಾಗಿದೆ ಎನ್ನುತ್ತಾರೆ ಮೆಸ್ಕಾಂ ಉನ್ನತ ಅಧಿಕಾರಿಗಳು. ತರೀಕೆರೆ ಬಿ.ಎಚ್.ರಸ್ತೆ ಒಂದರಲ್ಲೇ 6 ಮುಖ್ಯ ಫೀಡರ್ ಗಳು ಹಾದು ಹೋಗಿವೆ. ಓವರ್ ಲೋಡ್ ಆಗಿ ಕರೆಂಟ್ ಕಟ್ ಆದರೂ ದುರಸ್ತಿಗೆ ಎಲ್ಲ ಲೈನುಗಳನ್ನು ಆಫ್ ಮಾಡಿಕೊಳ್ಳ ಬೇಕಾಗುತ್ತದೆ ಎಂದು ಮೆಸ್ಕಾಂ ಅಧಿಕಾರಿಗಳು ತಮ್ಮ ಅಸಹಾಯಕತೆ ಹೇಳಿಕೊಳ್ಳುತ್ತಾರೆ. ಕಚೇರಿಯಲ್ಲಿ 3 ಸಹಾಯಕ ಇಂಜಿನಿಯರ್ ಪೋಸ್ಟ್ ಇದೆ. ಆದರೆ ಕರ್ತವ್ಯ ನಿರ್ವಹಿಸು ತ್ತಿರುವುದು ಒಬ್ಬರೇ ಎಂದು ಅಧಿಕಾರಿಗಳು ತಿಳಿಸಿದ್ದಾರೆ.30ಕೆಟಿಆರ್.ಕೆ.20ಃ ತರೀಕೆರೆ ಮೆಸ್ಕಾಂ ಕಚೇರಿ