ಹುಳಿಯಾರ್ ರಸ್ತೆಯ ಜೈನ್ ಬಸ್ತಿಗುಡಿಯಲ್ಲಿ ವಿಶೇಷ ಪೂಜೆ, ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ಬಳಿಕ ಪಿ.ಪಿ. ವೃತ್ತದಲ್ಲಿ ವಾಸು ಪೂಜ್ಯ ಜೈನ್ ಸಂಘದ ವತಿಯಿಂದ ಸಿಹಿ ಹಂಚಿಕೆ ಮತ್ತು ಪ್ರಸಾದ ವಿತರಣೆ ನಡೆಯಿತು.
ಅರಸೀಕೆರೆ: ಅಹಿಂಸೆ, ಸತ್ಯ, ತ್ಯಾಗ ಮತ್ತು ಸಹನೆಯ ಮೌಲ್ಯಗಳನ್ನು ಜಗತ್ತಿಗೆ ಬೋಧಿಸಿದ ಭಗವಾನ್ ವರ್ಧಮಾನ ಮಹಾವೀರರ ಆದರ್ಶಗಳು ಇಂದಿನ ಸಮಾಜಕ್ಕೂ ದಿಕ್ಕು ತೋರುವಂತಿವೆ ಎಂದು ತಾಲೂಕು ದಂಡಾಧಿಕಾರಿ ಸಂತೋಷ್ ಹೇಳಿದರು.
ನಗರದ ತಾಲೂಕು ಕಚೇರಿ ಕಂದಾಯ ಭವನದಲ್ಲಿ 2,625ನೇ ಮಹಾವೀರ ಜಯಂತಿ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಗವಾನ್ ಮಹಾವೀರರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಮಾನವ ಜೀವನದಲ್ಲಿ ಶಾಂತಿ, ಸಹಬಾಳ್ವೆ ಮತ್ತು ಧಾರ್ಮಿಕ ಸಹಿಷ್ಣುತೆ ಅತ್ಯಂತ ಮುಖ್ಯ. ಮಹಾವೀರರು ಬೋಧಿಸಿದ ಅಹಿಂಸೆಯ ತತ್ವ ಕೇವಲ ಒಂದು ಧಾರ್ಮಿಕ ಸಂದೇಶವಲ್ಲ, ಅದು ಸಮಾಜವನ್ನು ಒಗ್ಗೂಡಿಸುವ ಶಕ್ತಿ. ಇಂದಿನ ಪೀಳಿಗೆ ಮಹಾವೀರರ ಉಪದೇಶಗಳನ್ನು ಅಳವಡಿಸಿಕೊಂಡರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಅಭಿಪ್ರಾಯಪಟ್ಟರು.ಇದಕ್ಕೂ ಮೊದಲು ನಗರದಲ್ಲಿರುವ ವಾಸು ಪೂಜ್ಯ ಜೈನ್ ಮಂದಿರ ಮುಂಭಾಗದಿಂದ ಜೈನ್ ಸಮಾಜದವರು ಭಕ್ತಿಪೂರ್ವಕ ಮೆರವಣಿಗೆ ನಡೆಸಿದರು. ನೂರಾರು ಭಕ್ತರು ಭಾಗವಹಿಸಿ ನಗರದ ಪ್ರಮುಖ ಬೀದಿಗಳಲ್ಲಿ ಭಗವಾನ್ ಮಹಾವೀರರ ಜಯಘೋಷಗಳ ನಡುವೆ ಸಾಗಿದರು. ಮೆರವಣಿಗೆಯಲ್ಲಿ ಯುವಕರು, ಯುವತಿಯರು ಹಾಗೂ ಮಹಿಳೆಯರು ಸಂಪ್ರದಾಯಬದ್ಧ ಉಡುಪುಗಳಲ್ಲಿ ಪಾಲ್ಗೊಂಡು ಹಬ್ಬದ ಸಂಭ್ರಮಕ್ಕೆ ಇನ್ನಷ್ಟು ಮೆರಗು ತಂದರು.
ಹುಳಿಯಾರ್ ರಸ್ತೆಯ ಜೈನ್ ಬಸ್ತಿಗುಡಿಯಲ್ಲಿ ವಿಶೇಷ ಪೂಜೆ, ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ಬಳಿಕ ಪಿ.ಪಿ. ವೃತ್ತದಲ್ಲಿ ವಾಸು ಪೂಜ್ಯ ಜೈನ್ ಸಂಘದ ವತಿಯಿಂದ ಸಿಹಿ ಹಂಚಿಕೆ ಮತ್ತು ಪ್ರಸಾದ ವಿತರಣೆ ನಡೆಯಿತು.ಕಾರ್ಯಕ್ರಮದಲ್ಲಿ ಜೈನ್ ಸಮಾಜದ ಮುಖಂಡರು ಹಾಗೂ ಭಕ್ತರು ಭಾಗವಹಿಸಿ ಮಹಾವೀರರ ಆದರ್ಶಗಳನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ಜೈನ್ ಸಮಾಜದ ಅಧ್ಯಕ್ಷ ಪಾರಸ್ ಜೈನ್, ಜಗನ್ ಲಾಲ್ ಸೋಲಂಕಿ, ಮಹಾವೀರ ಬೋರಾ, ಅಮೃತ್ ಲಾಲ್ ಜೈನ್, ಎ.ಪಿ. ರಾಜೇಶ್, ಚೇತನ್ ಜೈನ್, ನವರತ್ನ ಜೈನ್, ವಿಕಾಸ್ ಮೆಹತಾ, ಪರಸ್ ಜೈನ್, ಅರವಿಂದ್, ಅಶೋಕ, ಮಯೂರ್ ಮೆಹತಾ, ಕಮಲೇಶ್, ಪುನೀತ್, ವಿನೋದ್ ಜೈನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.