ಜಾರ್ಖಂಡ ರಾಜ್ಯದ ರಾಂಚಿಯಲ್ಲಿ ನಡೆಯುವ ರಾಷ್ಟ್ರೀಯ ಟ್ರ್ಯಾಕ್ ಸೈಕ್ಲಿಂಗ್‌ಗೆ ಬೆಳಗಾವಿ ಜಿಲ್ಲೆಯಿಂದ ರಾಯಬಾಗ ತಾಲೂಕಿನ ಭಾವಚಿ ಗ್ರಾಮದ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಸಂದೇಶ ಶಿವಪುತ್ರ ಪೂಜಾರಿ ಹಾಗೂ ಗದಗ ಜಿಲ್ಲೆಯ ಬೆಳಗಾವಿ ಕ್ರೀಡಾವಸತಿ ನಿಲಯದ ವಿದ್ಯಾರ್ಥಿ ಪುನೀತ ತೇರಿನಗಡ್ಡಿ ಅವರು ರಾಜ್ಯ ಪ್ರಾಥಮಿಕ ಶಾಲೆಯ ಸೈಕ್ಲಿಂಗ್ ಟೀಮ್‌ಗೆ ಆಯ್ಕೆಯಾಗಿದ್ದು, ರಾಷ್ಟ್ರಮಟ್ಟದ ಸೈಕ್ಲಿಂಗ್ ರೆಸ್‌ನಲ್ಲಿ ಭಾಗವಹಿಸಲಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಪ್ರಾಥಮಿಕ ಶಾಲೆಯ ಮಕ್ಕಳಿಗೆ ಸೈಕ್ಲಿಂಗ್ ರೆಸ್‌ ಈ ಹಿಂದೆ ಇರಲಿಲ್ಲ. ಇದನ್ನು ಅರಿತು ಅಂದಿನ ಬೆಳಗಾವಿ ಜಿಲ್ಲೆಯ ಮಿಲ್ಕ್ ಯುನಿಯನ್ ಅಧ್ಯಕ್ಷರು, ಮಾಜಿ ಎಂಎಲ್ಸಿ ಹಾಗೂ ರಾಜ್ಯ ಸೈಕ್ಲಿಂಗ್ ಸಂಸ್ಥೆಯ ಪೋಷಕರಾದ ವಿವೇಕರಾವ್ ವಸಂತರಾವ್ ಪಾಟೀಲ ಅವರು ಬೆಳಗಾವಿ ಜಿಲ್ಲಾ ಮಿಲ್ಕ್ ಯುನಿಯನ್ ನಿರ್ದೇಶಕರುಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮತ್ತು ಬೆಳಗಾವಿ ಜಿಲ್ಲೆಯ ಸೈಕ್ಲಿಂಗ್ ಅಸೋಸಿಯೇಷನ್‌ ಅಧ್ಯಕ್ಷ ಅನಿಲ ಎಂ.ಪೋದಾರ ಮತ್ತು ಸೈಕ್ಲಿಂಗ್ ಅಸೋಸಿಯೇಷನ್‌ ಪದಾಧಿಕಾರಿಗಳೊಂದಿಗೆ ಸುದೀರ್ಘವಾಗಿ ಚರ್ಚಿಸಿ ಬೆಳಗಾವಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ನಂದಿನ ಸೈಕ್ಲಿಂಗ್ ಮಾಡಿ ಗ್ರಾಮೀಣ ಪ್ರದೇಶದಲ್ಲಿ ಇರುವಂತ ಸೈಕ್ಲಿಂಗ್ ಕ್ರೀಡಾಪಟುಗಳನ್ನು ಪತ್ತೆ ಹಚ್ಚುವ ಕಾರ್ಯ ಮಾಡಿದ್ದಲ್ಲದೇ ರಾಜ್ಯ ಸರ್ಕಾರದ ಗಮನ ಸೆಳೆದಿದ್ದರು. ಇಂದು ಬೆಳಗಾವಿ ಜಿಲ್ಲಾ ಸೈಕ್ಲಿಂಗ್ ಅಸೋಸಿಯೇಷನ್‌ ಉಪಾಧ್ಯಕ್ಷ ಪ್ರಣಯ ವಿವೇಕರಾವ್ ಪಾಟೀಲ ಮತ್ತು ಚಿಕ್ಕೋಡಿ ಭಾಗದ ಗ್ರಾಮೀಣ ಪ್ರದೇಶದ ರೈತರ ಮತ್ತು ಕೂಲಿ ಕಾರ್ಮಿಕರ ಮಕ್ಕಳನ್ನು ಸೈಕ್ಲಿಂಗ್‌ನಲ್ಲಿ ಆಸಕ್ತಿವುಳ್ಳವರಿಗೆ ಸೈಕ್ಲಿಂಗ್ ತರಬೇತಿ ನೀಡಲು ಯೋಜನೆ ಸಿದ್ಧ ಪಡಿಸಿದ್ದರು. ರಾಷ್ಟ್ರೀಯ ಸೈಕ್ಲಿಂಗ್ ಚಾಂಪಿಯನ್ ಸಿದ್ದಪ್ಪ ರಾಮಪ್ಪ ಕೋಟ್ರೆ ಅವರನ್ನು ಸೈಕ್ಲಿಂಗ್ ಮಕ್ಕಳಿಗೆ ತರಬೇತಿ ಕೊಡಲು ನೇಮಿಸಿದರು. ಇವರು ಸತತವಾಗಿ ಸೈಕ್ಲಿಂಗ್ ತರಬೇತಿ ಮಾಡಿರುವ ಪರಿಣಾಮ ಚಿಕ್ಕೋಡಿ ಭಾಗದ ಪ್ರಾಥಮಿಕ ಶಾಲೆಯ ಇಬ್ಬರೂ ಮಕ್ಕಳು ರಾಷ್ಟ್ರಮಟ್ಟಕ್ಕೆ ಹೋಗಲು ಅವಕಾಶ ಸಿಕ್ಕಿದೆ.

ಪ್ರಣಯ ವಿವೇಕರಾವ್ ಪಾಟೀಲ ಅವರು ತಂದೆಯವರ ಕನಸನ್ನು ನನಸು ಮಾಡುತ್ತಿದ್ದಾರೆ. ಚಿಕ್ಕೋಡಿ ಭಾಗದಲ್ಲಿ ಆಸಕ್ತಿ ಇರುವ ಸೈಕ್ಲಿಂಗ್ ಪ್ರಾಥಮಿಕ ಶಾಲೆಯ ಮಕ್ಕಳು ತರಬೇತಿ ಪಡೆದುಕೊಳ್ಳಬೇಕು.

-ಆರ್.ಎಚ್.ಪೂಜಾರಿ
ಪ್ರಧಾನ ಕಾರ್ಯದರ್ಶಿಗಳು, ಬೆಳಗಾವಿ ಜಿಲ್ಲಾ ಸೈಕ್ಲಿಂಗ್ ಅಸೋಸಿಯೇಷನ್‌.