ಸಾರಾಂಶ
ಮೀಟರ್ ಬಡ್ಡಿ ದಂಧೆಯವರ ಕಿರುಕುಳದಿಂದ ನೊಂದ ಯುವಕನೊಬ್ಬ ಡೆತ್‌ನೋಟ್ ಬರೆದಿಟ್ಟು, ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನ್ಯಾಮತಿ ತಾಲೂಕಿನ ಮಾಚಗೊಂಡನಹಳ್ಳಿ ಗ್ರಾಮದಲ್ಲಿ ಬುಧವಾರ ನಡೆದಿದೆ.
- ಯಶವಂತ ನಾಯ್ಕ ಸಾವು: ಠಾಣೆ ಬಳಿ ಕುಟುಂಬಸ್ಥರ ಧರಣಿ
- - -- ನ್ಯಾಮತಿ ತಾಲೂಕಿನ ಮಾಚಗೊಂಡನಹಳ್ಳಿ ಗ್ರಾಮದಲ್ಲಿ ಘಟನೆ
- ಬೈಕ್ ಅಡವಿಟ್ಟು ಶೇ.10ರ ಬಡ್ಡಿ ದರದಂತೆ ₹40 ಸಾವಿರ ಸಾಲ- - -ಕನ್ನಡಪ್ರಭ ವಾರ್ತೆ ದಾವಣಗೆರೆ/ಹೊನ್ನಾಳಿ ಮೀಟರ್ ಬಡ್ಡಿ ದಂಧೆಯವರ ಕಿರುಕುಳದಿಂದ ನೊಂದ ಯುವಕನೊಬ್ಬ ಡೆತ್‌ನೋಟ್ ಬರೆದಿಟ್ಟು, ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನ್ಯಾಮತಿ ತಾಲೂಕಿನ ಮಾಚಗೊಂಡನಹಳ್ಳಿ ಗ್ರಾಮದಲ್ಲಿ ಬುಧವಾರ ನಡೆದಿದೆ.
ಗ್ರಾಮದ ಯಶವಂತ ನಾಯ್ಕ (24) ಆತ್ಮಹತ್ಯೆ ಮಾಡಿಕೊಂಡ ಯುವಕ. ರೂಪ್ಲಾ ನಾಯ್ಕ ಅವರ ಪುತ್ರನಾದ ಯಶವಂತ ನಾಯ್ಕ ಖಾಸಗಿ ಹಣಕಾಸು ಸಂಸ್ಥೆ ಮತ್ತೋಟ್ ಫಿನ್ ಕಾರ್ಪ್ ಫೈನಾನ್ಸ್‌ನಲ್ಲಿ ₹5 ಲಕ್ಷ ಗೃಹಸಾಲ ಪಡೆದಿದ್ದರು. ಅಲ್ಲದೇ, ಶಿವಮೊಗ್ಗ ತಾಲೂಕಿನ ನಾರಾಯಣಪುರದ ಸುನೀಲ್ ನಾಯ್ಕ ಎಂಬಾತನಿಂದ ಬೈಕ್ ಅಡವಿಟ್ಟು ₹10 ಬಡ್ಡಿಯಂತೆ ಕೈಗಡವಾಗಿ ₹40 ಸಾವಿರ ಸಾಲ ಪಡೆದಿದ್ದರು.ಗೃಹಸಾಲದ ಕಂತುಗಳನ್ನು ಸರಿಯಾಗಿ ಕಟ್ಟಲು ಆಗಿರಲಿಲ್ಲ.
ಸಾಲದ ಕಂತು ಕಟ್ಟದಿದ್ದರೆ ಮನೆ ಜಪ್ತಿ ಮಾಡುತ್ತೇವೆ ಎಂದು ಫೈನಾನ್ಸ್ ಸಂಸ್ಥೆಯ ಸಂದೀಪ್, ವಿನಯ್, ಲೋಹಿತ್, ಗಣೇಶ್ ಎಂಬವರು ಪದೇಪದೇ ಮನೆ ಬಳಿ ಬಂದು ಬಡ್ಡಿ ಹಣ ನೀಡುವಂತೆ ಕಿರುಕುಳ ನೀಡುತ್ತಿದ್ದರು. ಬೈಕ್ ಅಡಮಾನ ಸಾಲ ನೀಡಿದ್ದ ಸುನೀಲ್ ನಾಯ್ಕ ಕೂಡ ಸಾಲ ಕಟ್ಟುವಂತೆ ಗಲಾಟೆ ಮಾಡಿದ್ದರು. ಸಾಲ ಪಾವತಿಸಲಾಗದಿದ್ದರೆ ನೇಣು ಬಿಗಿದುಕೊಂಡು ಸಾಯಿ ಎಂಬುದಾಗಿಯೂ ನಿಂದಿಸಿದ್ದರು ಎಂದು ಆರೋಪಿಸಲಾಗಿದೆ. ಇದರಿಂದ ಮನನೊಂದ ಯಶವಂತ ನಾಯ್ಕ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮನೆ ಜಂತುವಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ನ್ಯಾಯಕ್ಕಾಗಿ ಧರಣಿ-ದೂರು:ಸಾಲಗಾರರ ಕಿರುಕುಳ ತಾಳಲಾಗದೇ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಟುಂಬ ಆರೋಪಿಸಿದೆ. ತಮಗೆ ನ್ಯಾಯ ನೀಡುವಂತೆ ಮೃತ ಯಶವಂತ ನಾಯ್ಕನ ಕುಟುಂಬ ನ್ಯಾಮತಿ ಪೊಲೀಸ್ ಠಾಣೆ ಮುಂಭಾಗ ಧರಣಿ ನಡೆಸಿದೆ. ತಾಯಿ ರತ್ನಿಬಾಯಿ ನ್ಯಾಮತಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
- - -(ಸಾಂದರ್ಭಿಕ ಚಿತ್ರ)