ಯೋಗ ಮತ್ತು ಪ್ರಕೃತಿ ಚಿಕಿತ್ಸೆಯಿಂದ ದೇಹದ ಸಮತೋಲನ ಕಾಯ್ದುಕೊಳ್ಳಬಹುದು. ರಕ್ತದೊತ್ತಡ, ಹೃದಯ ಬಡಿತ ಮತ್ತು ಉಸಿರಾಟ ಸಮಸ್ಯೆಗಳನ್ನು ನಿಯಂತ್ರಿಸಿಕೊಳ್ಳಬಹುದು. ಸ್ವಯಂ ಚಾಲಿತ ನರಮಂಡಲದ ಪರೀಕ್ಷಿಸುವ ವಿಧಾನದಿಂದ ನರಗಳಲ್ಲಿ ಉಂಟಾಗಿರುವ ತೊಂದರೆಗಳನ್ನು ಗುರುತಿಸಬಹುದು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಯೋಗ ಮತ್ತು ಪ್ರಕೃತಿ ಚಿಕಿತ್ಸೆಗಳ ಪರಿಣಾಮಕಾರಿತ್ವಗಳನ್ನು ವೈಜ್ಞಾನಿಕವಾಗಿ ಮೌಲ್ಯಮಾಪನ ಮಾಡಲು ಸ್ವಯಂ ಚಾಲಿತ ನರಮಂಡಲದ ಕಾರ್ಯವೈಖರಿ ಪರೀಕ್ಷಿಸುವ ವಿಧಾನ ಪ್ರಮುಖ ಸಾಧನವಾಗಿದೆ ಎಂದು ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಅನುಸಂಧಾನ ಸಂಸ್ಥೆ ಕೇಂದ್ರೀಯ ಮಂಡಳಿ ನಿರ್ದೇಶಕಿ ಡಾ.ಜ್ಯೋತಿ ಕೆಸ್ವಾನಿ ಅಭಿಪ್ರಾಯಪಟ್ಟರು.

ತಾಲೂಕಿನ ಎಂ.ಹೊಸೂರು ಗೇಟ್ ಬಳಿಯಿರುವ ಕೇಂದ್ರಿಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಅನುಸಂಧಾನ ಸಂಸ್ಥೆಯಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯಲ್ಲಿ ದೇಹದ ಸ್ವಯಂ ಚಾಲಿತ ನರಮಂಡಲದ ಕಾರ್ಯಕ್ಷಮತೆಯನ್ನು ಪರೀಕ್ಷಿಸುವ ಕುರಿತು ಮಂಗಳವಾರ ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಯೋಗ ಮತ್ತು ಪ್ರಕೃತಿ ಚಿಕಿತ್ಸೆಯಿಂದ ದೇಹದ ಸಮತೋಲನ ಕಾಯ್ದುಕೊಳ್ಳಬಹುದು. ರಕ್ತದೊತ್ತಡ, ಹೃದಯ ಬಡಿತ ಮತ್ತು ಉಸಿರಾಟ ಸಮಸ್ಯೆಗಳನ್ನು ನಿಯಂತ್ರಿಸಿಕೊಳ್ಳಬಹುದು. ಸ್ವಯಂ ಚಾಲಿತ ನರಮಂಡಲದ ಪರೀಕ್ಷಿಸುವ ವಿಧಾನದಿಂದ ನರಗಳಲ್ಲಿ ಉಂಟಾಗಿರುವ ತೊಂದರೆಗಳನ್ನು ಗುರುತಿಸಬಹುದು. ಹಾಗಾಗಿ ಸಾಕ್ಷ್ಯಾಧಾರಿತ ಸಂಶೋಧನೆಯನ್ನು ಬಲಪಡಿಸಲು ಇಂತಹ ಕಾರ್ಯಾಗಾರಗಳು ಅತ್ಯವಶ್ಯಕವಾಗಿವೆ ಎಂದರು.

ಅನುಸಂಧಾನ ಸಂಸ್ಥೆ ಸಹಾಯಕ ನಿರ್ದೇಶಕ ಹಾಗೂ ನೋಡಲ್ ಅಧಿಕಾರಿ ಡಾ.ಎಚ್.ಎಸ್.ವಾದಿರಾಜ್ ಮಾತನಾಡಿ, ಹೃದಯ ಬಡಿತ, ರಕ್ತದೊತ್ತಡ, ಉಸಿರಾಟ ಮತ್ತು ಜೀರ್ಣಕ್ರಿಯೆಯಂತಹ ದೇಹದ ಪ್ರಮುಖ ಕಾರ್ಯಗಳನ್ನು ನಿಯಂತ್ರಿಸುವ ಸ್ವ-ನಿಯಂತ್ರಿತ ನರಮಂಡಲದ ಕಾರ್ಯಕ್ಷಮತೆಯನ್ನು ಅಳೆಯಲು ಇಂತಹ ಪರೀಕ್ಷೆಗಳು ಸಹಕಾರಿಯಾಗುತ್ತವೆ. ಆರೋಗ್ಯಕರ ಆಹಾರ ಪದಾರ್ಥ ಸೇವನೆ ಮತ್ತು ಪ್ರತಿನಿತ್ಯ ಯೋಗಾಭ್ಯಾಸದಿಂದ ಅನೇಕ ರೋಗಗಳನ್ನು ತಡೆಗಟ್ಟಬಹುದು ಎಂದರು.

ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆ ಪ್ರಾಧ್ಯಾಪಕರಾದ ಡಾ.ಟಿ.ಎನ್.ಸತ್ಯಪ್ರಭ, ಡಾ.ಕವಿರಾಜ ಉಡುಪ ಅವರು ಸಮಗ್ರ ಮಾಹಿತಿ ನೀಡಿದರು. ಧಾರವಾಡದ ಶ್ರೀ ಧರ್ಮಸ್ಥಳ ಮಂಜುನಾಥ ಮೆಡಿಕಲ್ ಕಾಲೇಜಿನ ಪ್ರಾಧ್ಯಾಪಕ ಡಾ.ಸತೀಶ್ ಜಿ.ಪಾಟೀಲ್ ಅವರು ಯೋಗ, ವಾಸ್ಕುಲರ್ ಹೆಲ್ತ್ ಮತ್ತು ಆಟೋನಾಮಿಕ್ ರೆಗುಲೇಷನ್ ವಿಷಯ ಕುರಿತು ವೈದ್ಯಕೀಯ ಮತ್ತು ಸಂಶೋಧನಾ ದೈಷ್ಟಿಕೋನಗಳ ಮಾಹಿತಿ ನೀಡಿದರು.

ಜೈವಿಕ ವೈದ್ಯಕೀಯ ಎಂಜಿನಿಯರ್ ಡಾ.ಕೆ.ಭಾಸ್ಕರನ್, ಬೆಂಗಳೂರಿನ ಹೆಲ್ತ್‌ಕೇರ್ ಗ್ಲೋಬಲ್ ಸಂಸ್ಥೆ ಉಪಾಧ್ಯಕ್ಷ ಡಾ.ಎಂ.ರಾಘವೇಂದ್ರ ರಾವ್ ವಿಶೇಷ ಉಪನ್ಯಾಸ ನೀಡಿದರು. ಕರ್ನಾಟಕ, ಆಂದ್ರಪ್ರದೇಶ, ತಮಿಳುನಾಡು ಮತ್ತು ಕೇರಳ ರಾಜ್ಯದ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಸಂಸ್ಥೆ ಸಂಶೋಧನಾ ಅಧಿಕಾರಿ ಡಾ.ಇನ್ಬರಾಜ್, ಡಾ.ಪಿ.ಎಸ್.ಸ್ವಾತಿ, ಡಾ.ನುಜ್ಹತ್, ಡಾ.ಬಿ.ಎಸ್.ಸ್ವಾತಿ, ಡಾ.ನಿತೇಶ್, ಯೋಗ ಚಿಕಿತ್ಸಕ ಸಿದ್ದಪ್ಪ ನರಗಟ್ಟಿ, ಫಿಜಿಯೋ ಥೆರಪಿಸ್ಟ್ ರಮ್ಯ, ಕಚೇರಿ ಸಹಾಯಕರಾದ ಚೈತ್ರ, ಪ್ರಗತಿ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ ಇದ್ದರು.