ಮೆಟ್ರೋ ವ್ಯತ್ಯಯ : 2 ಗಂಟೆ ಪ್ರಯಾಣಿಕರ ಪರದಾಟ

| N/A | Published : Oct 31 2025, 04:45 AM IST

Namma Metro

ಸಾರಾಂಶ

ಮೆಟ್ರೋ ರೈಲಿನಲ್ಲಿ ಕಾಣಿಸಿಕೊಂಡ ವಿದ್ಯುತ್‌ ತಾಂತ್ರಿಕ ಸಮಸ್ಯೆಯಿಂದಾಗಿ ನಮ್ಮ ಮೆಟ್ರೋ ನೇರಳೆ ಮಾರ್ಗದ ವಿಜಯನಗರ ಹಾಗೂ ಹೊಸಹಳ್ಳಿ ನಡುವೆ ಮೆಟ್ರೋ ರೈಲೊಂದು ಕೆಟ್ಟು ನಿಂತ ಪರಿಣಾಮ ಗುರುವಾರ ಬೆಳಗ್ಗೆ 9 ಗಂಟೆಯಿಂದ ಎರಡು ತಾಸು ರೈಲು ಸಂಚಾರದಲ್ಲಿ ವ್ಯತ್ಯಯವಾಯಿತು

  ಬೆಂಗಳೂರು :ಮೆಟ್ರೋ ರೈಲಿನಲ್ಲಿ ಕಾಣಿಸಿಕೊಂಡ ವಿದ್ಯುತ್‌ ತಾಂತ್ರಿಕ ಸಮಸ್ಯೆಯಿಂದಾಗಿ ನಮ್ಮ ಮೆಟ್ರೋ ನೇರಳೆ ಮಾರ್ಗದ ವಿಜಯನಗರ ಹಾಗೂ ಹೊಸಹಳ್ಳಿ ನಡುವೆ ಮೆಟ್ರೋ ರೈಲೊಂದು ಕೆಟ್ಟು ನಿಂತ ಪರಿಣಾಮ ಗುರುವಾರ ಬೆಳಗ್ಗೆ 9 ಗಂಟೆಯಿಂದ ಎರಡು ತಾಸು ರೈಲು ಸಂಚಾರದಲ್ಲಿ ವ್ಯತ್ಯಯವಾಯಿತು. ಇದರಿಂದ ಬೆಳಗ್ಗೆ ಕಚೇರಿ, ಶಾಲಾ ಕಾಲೇಜುಗಳಿಗೆ ತೆರಳಬೇಕಿದ್ದ ಪ್ರಯಾಣಿಕರು ಪರದಾಡಿದರು.

ಬೆಳಗ್ಗೆ 9.15ರ ಹೊತ್ತಿಗೆ ರೈಲು ಸಂಚಾರ ಸ್ಥಗಿತಗೊಂಡಿತು. ಕೆಂಪೇಗೌಡ ಮೆಟ್ರೋ ನಿಲ್ದಾಣದಿಂದ ಚಲ್ಲಘಟ್ಟವರೆಗೆ ರೈಲು ಸಂಚಾರವನ್ನು 10.15ರವರೆಗೆ ಸ್ಥಗಿತಗೊಳಿಸಲಾಗಿತ್ತು. ಜತೆಗೆ ಮೈಸೂರು ರಸ್ತೆಯಿಂದ ಛಲ್ಲಘಟ್ಟವರೆಗೆ 11ಗಂಟೆವರೆಗೆ ವ್ಯತ್ಯಯ ಉಂಟಾಯಿತು.

ರೈಲು ಎಲೆವೆಟೆಡ್‌ನಲ್ಲಿ ನಿಂತ ಪರಿಣಾಮ ಪ್ರಯಾಣಿಕರು ಆತಂಕಕ್ಕೆ ಒಳಗಾಗಿದ್ದರು. ಎಲೆವೆಟೆಡ್‌ನಿಂದ ಪ್ರಯಾಣಿಕರು ನಿಲ್ದಾಣದವರೆಗೆ ನಡೆದುಬಂದು ರಸ್ತೆಗೆ ಇಳಿಯುವಂತಾಯಿತು. ರೈಲು ಸಂಚಾರ ಸ್ಥಗಿತಗೊಂಡಿದ್ದು ನೇರಳೆ ಮಾರ್ಗದಲ್ಲಾದರೂ ಇದರ ಪರಿಣಾಮ ಹಸಿರು ಮಾರ್ಗದ ಮೇಲೂ ಉಂಟಾಯಿತು.

ನಿಲ್ದಾಣಗಳು ಬಂದ್‌:

ಎರಡೂ ಮಾರ್ಗದ ನಿಲ್ದಾಣಗಳಲ್ಲಿ ವಿಶೇಷವಾಗಿ ಮೆಜೆಸ್ಟಿಕ್‌ ನಿಂದ ವಿಜಯನಗರದವರೆಗೆ ಪ್ರಯಾಣಿಕರ ತೀವ್ರ ದಟ್ಟಣೆ ಉಂಟಾಗಿತ್ತು. ರೈಲು ಸಂಚಾರ ಆರಂಭವಾದ ಬಳಿಕ ರೈಲುಗಳು ಪ್ರಯಾಣಿಕರ ದಟ್ಟಣೆಯಿಂದ ರೈಲುಗಳೆಲ್ಲ ಭರ್ತಿಯಾಗಿದ್ದವು. ಹೆಚ್ಚಿನ ಪ್ರಯಾಣಿಕರು ಒಳಗೆ ಬರದಂತೆ ಮತ್ತು ಜನದಟ್ಟಣೆ ಹೆಚ್ಚಾಗದಂತೆ ತಡೆಯಲು ಅನೇಕ ನಿಲ್ದಾಣಗಳಲ್ಲಿ ಭದ್ರತಾ ಸಿಬ್ಬಂದಿ ನಿಲ್ದಾಣದ ದ್ವಾರಗಳನ್ನು ಮುಚ್ಚಿದ್ದರು.

ರೈಲಿನ ಒಳಗಿನ ವಿದ್ಯುತ್‌ ಸರಬರಾರು ಸ್ವಿಚ್‌ ಟ್ರಿಪ್‌

ರೈಲಿನ ಒಳಗಿನ ವಿದ್ಯುತ್‌ ಸರಬರಾರು ಸ್ವಿಚ್‌ ಟ್ರಿಪ್‌ ಆಗಿದ್ದರಿಂದ ರೈಲು ನಿಂತಿತು. ಬಳಿಕ ರೈಲನ್ನು ವಾಪಸ್ ಛಲ್ಲಘಟ್ಟ ಮೆಟ್ರೋ ಡಿಪೋಗೆ ಕೊಂಡೊಯ್ಯಲಾಯಿತು. ಅಲ್ಲಿ ದುರಸ್ತಿ ಕಾರ್ಯ ನಡೆಸಲಾಗಿದೆ ಎಂದು ಬಿಎಂಆರ್‌ಸಿಎಲ್‌ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ ಚೌಹಾಣ್‌ ತಿಳಿಸಿದರು.

Read more Articles on